ಕುಶಾಲನಗರ, ಜೂ. 3: ಮಡಿಕೇರಿ ಕ್ಷೇತ್ರ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ 88 ಲಕ್ಷ ರೂ. ವೆಚ್ಚದಲ್ಲಿ ಕೈಗೊಂಡಿರುವ ಕಾವೇರಿ ನದಿ ಹೂಳೆತ್ತುವ ಕಾಮಗಾರಿಯ ಪ್ರಗತಿ ಪರಿಶೀಲನೆ ನಡೆಸಿದರು.
ಕುಶಾಲನಗರದ ರಸೂಲ್, ಶೈಲಜಾ ಬಡಾವಣೆ, ಅಯ್ಯಪ್ಪಸ್ವಾಮಿ, ಮುತ್ತಪ್ಪ ದೇವಾಲಯ ಮತ್ತು ಮುಳ್ಳುಸೋಗೆ ತಪೆÇೀವನ ಬಳಿ ಕೈಗೊಂಡ ಕಾಮಗಾರಿಯ ಸ್ಥಿತಿಗತಿಯನ್ನು ವೀಕ್ಷಿಸಿದ ರಂಜನ್ ಕಾಮಗಾರಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ನದಿಯಿಂದ ಸರಾಸರಿ 8 ಅಡಿಗಳಷ್ಟು ಎತ್ತರದ ಮಣ್ಣು ಗುಡ್ಡೆಗಳನ್ನು ತೆರವುಗೊಳಿಸಲಾಗಿದೆ. ಮುಂದಿನ ಕೆಲವು ದಿನಗಳ ಕಾಲ ಮಳೆ ಬಿಡುವು ನೀಡಿದಲ್ಲಿ ಹೂಳೆತ್ತುವ ಕಾಮಗಾರಿ ಪೂರ್ಣಗೊಳ್ಳುವ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ ಶಾಸಕ ರಂಜನ್, ಕಾಮಗಾರಿಯಿಂದ ನದಿ ತಟದ ಬಡಾವಣೆಗಳ ಪ್ರವಾಹ ಸಂತ್ರಸ್ತ ನಿವಾಸಿಗಳು ನಿಟ್ಟುಸಿರು ಬಿಡುವಂತಾಗಿದೆ. ಮುಂದಿನ ದಿನಗಳಲ್ಲಿ ಮಳೆಯ ತೀವ್ರತೆಗೆ ಯಾವ ರೀತಿಯ ಸ್ಥಿತಿ ನಿರ್ಮಾಣವಾಗಲಿದೆ ಎಂಬುದು ಕಾದುನೋಡಬೇಕಿದೆ ಎಂದು ತಿಳಿಸಿದರು.
ಈ ಸಂದರ್ಭ ಪಪಂ ಸದಸ್ಯ ಜಯವರ್ಧನ್, ನದಿ ಪ್ರವಾಹ ಸಂತ್ರಸ್ತ ವೇದಿಕೆ ಅಧ್ಯಕ್ಷ ಎಂ.ಎನ್. ಚಂದ್ರಮೋಹನ್, ಗೌರವಾಧ್ಯಕ್ಷ ಎಂ.ಎಂ.ಚರಣ್, ಉಪಾಧ್ಯಕ್ಷ ತೋರೇರ ಉದಯಕುಮಾರ್, ಖಜಾಂಚಿ ಕೊಡಗನ ಹರ್ಷ, ಬಿಜೆಪಿ ಮುಖಂಡರಾದ ಎಂ.ಎನ್. ಕುಮಾರಪ್ಪ, ವಿ.ಡಿ. ಪುಂಡರೀಕಾಕ್ಷ, ವಿ.ಎನ್. ವಸಂತಕುಮಾರ್, ವಿ.ಆರ್. ಶಿವಶಂಕರ್, ವೈಶಾಖ್, ಆದರ್ಶ್ ಇದ್ದರು.