ಸೋಮವಾರಪೇಟೆ,ಜೂ.3: ಕಳೆದ ಮೇ 24ರ ರಾತ್ರಿ ಪಟ್ಟಣದ ಮಹದೇಶ್ವರ ಬಡಾವಣೆ ವ್ಯಾಪ್ತಿಯ ಮನೆ ಹಾಗೂ ವಾಹನಗಳ ಮೇಲೆ ಕಲ್ಲು ತೂರಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಪತ್ತೆಹಚ್ಚುವಲ್ಲಿ ಸೋಮವಾರಪೇಟೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಘಟನೆ ನಡೆದ 9 ದಿನಗಳ ನಂತರ ಆರೋಪಿ, ಮಹದೇಶ್ವರ ಬಡಾವಣೆಯ ಹೆಚ್.ಡಿ. ಸಂತೋಷ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಕಳೆದ ಮೇ 24ರ ರಾತ್ರಿ ಮಹದೇಶ್ವರ ಬಡಾವಣೆಯಲ್ಲಿರುವ ಪ.ಪಂ. ಮಾಜಿ ಅಧ್ಯಕ್ಷೆ ಲೀಲಾ ನಿರ್ವಾಣಿ ಅವರ ಮನೆ ಬಳಿ ನಿಲ್ಲಿಸಿದ್ದ ಮಾರುತಿ ಆಲ್ಟೋ ಕಾರಿಗೆ ಕಲ್ಲು ಹೊಡೆಯುವ ಮೂಲಕ ಪ್ರಾರಂಭವಾದ ವಿಕೃತಿ ನಂತರ 4 ವಾಹನಗಳು ಹಾಗೂ ಒಂದು ವಾಸದ ಮನೆಯ ಮೇಲೂ ಮುಂದುವರೆದಿತ್ತು.
ರಸ್ತೆಯ ಬದಿಯಲ್ಲಿ ನಿಲ್ಲಿಸಲಾಗಿದ್ದ ಧರ್ಮಪ್ಪ, ಲಿಂಗರಾಜು, ಬಿಪಿನ್, ವೈ.ಡಿ. ಜಗದೀಶ್ ಅವರುಗಳಿಗೆ ಸೇರಿದ 3 ಮಾರುತಿ 800 ಕಾರು, ಒಂದು ಹುಂಡೈ ಇಯನ್, ಅಬಕಾರಿ ಇಲಾಖೆಗೆ ಸೇರಿದ ಬೊಲೆರೋ ಜೀಪ್ಗೆ ಕಲ್ಲು ತೂರಲಾಗಿದ್ದು, ವಾಹನದ ಗಾಜುಗಳು ಪುಡಿಯಾಗಿದ್ದವು. ಇದರೊಂದಿಗೆ ಮಹದೇಶ್ವರ ಬಡಾವಣೆಯ ಪುಷ್ಪ ಅವರ ಮನೆಯ ಕಿಟಕಿಗೆ ಕಲ್ಲು ಒಡೆದಿದ್ದು, ಗಾಜನ್ನು ಪುಡಿಗಟ್ಟಲಾಗಿತ್ತು.
ಮಹದೇಶ್ವರ ಬಡಾವಣೆಯ ಧರ್ಮಪ್ಪ ಮತ್ತು ನಿಂಗರಾಜು ಅವರುಗಳು ತಮ್ಮ ಕಾರಿಗೆ ಕಲ್ಲು ಹೊಡೆದ ದುಷ್ಕರ್ಮಿಯನ್ನು ಪತ್ತೆಹಚ್ಚಿ ಕಾನೂನು ಕ್ರಮ ಜರುಗಿಸಬೇಕೆಂದು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಅದರಂತೆ ದೂರು ದಾಖಲಿಸಿಕೊಂಡ ಪೊಲೀಸರು, ಆರೋಪಿಯ ಪತ್ತೆಗೆ ಬಲೆ ಬೀಸಿದ್ದರು.
ಈ ವ್ಯಾಪ್ತಿಯಲ್ಲಿನ ಸಿ.ಸಿ. ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸಿ, ತಾಂತ್ರಿಕತೆಯ ಸಹಾಯದಿಂದ ಆರೋಪಿ ಸಂತೋಷ್ನನ್ನು ಬಂಧಿಸಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.