ನಾವೆಲ್ಲರೂ ಪರಿಸರದ ಒಂದು ಭಾಗ. ಆರೋಗ್ಯಕಾರಿ ಪರಿಸರ ಜನರ ಆರೋಗ್ಯವನ್ನು ಸದಾ ಕಾಪಾಡುವುದು. ಇಂದು ಪರಿಸರದ ಬಗ್ಗೆ ಇರುವ ಸಕಾರಾತ್ಮಕ ದೃಷ್ಟಿಕೋನವೇ ಅನೇಕ ಸಮಸ್ಯೆಗಳನ್ನು ಪರಿಹರಿಸುತ್ತದೆ. ಅದು ಪರಿಸರವನ್ನು ಕಾಪಾಡುವಲ್ಲಿ ಮಹತ್ವದ ಪಾತ್ರವನ್ನು ವಹಿಸುವುದು. ಸಾರ್ವಜನಿಕರಲ್ಲಿ ಪರಿಸರದ ಬಗ್ಗೆ ಗುಣಾತ್ಮಕವಾದ ದೃಷ್ಟಿಕೋನವನ್ನು ಬೆಳೆಸುವುದು ನಾಗರಿಕ ಸಮುದಾಯದ ಆದ್ಯ ಕರ್ತವ್ಯ. ನಾವು ಈ ಸುಂದರವಾದ ಭೂ ಪ್ರಕೃತಿಯನ್ನು ಕಂಡು ಆನಂದಿಸುವುದನ್ನು ಕಲಿಯಬೇಕು. ಇಂದು ಈ ಭೂಲೋಕದಲ್ಲಿ ಪ್ರಕೃತಿಯು ಅದರ ನೈಜತೆಯನ್ನು ಉಳಿಸಿಕೊಂಡಲ್ಲಿ ಭೂಮಿಯ ಅಸ್ಥಿತ್ವವು ಉಳಿಯುವುದು.

ಪ್ರಕೃತಿಯ ವಿಸ್ತೀರ್ಣ ಬಹುದೊಡ್ಡದು. ವಾಯು, ಜಲ, ಗಾಳಿ, ಗಿಡ, ಎಂದು ಇಂದು ಮುಂದುವರಿಯುವುದು. ಇಂದು ನಾವು ಪ್ರಕೃತಿಯ ಮಡಿಲಲ್ಲಿ ಮಗುವಾಗಿ ಜೀವಿಸಬೇಕಾಗಿದೆ. ಆದರೆ ಇಂದು ಪ್ರಕೃತಿ ನಾಶ ಎಗ್ಗಿಲ್ಲದಂತೆ ನಡೆದಿದೆ. ಮಾರಕ ಮಾಲಿನ್ಯ ಪರಿಸರ ನಾಶದಿಂದ ಎಲ್ಲೆಂದರಲ್ಲಿ ಹಬ್ಬಿದೆ. ದೇಶದಲ್ಲಿ ಅದೆಷ್ಟೊ ಕೊಳಚೆ ಪ್ರದೇಶಗಳು ನಿರ್ಮಾಣವಾಗಿಹೋಗಿದೆ. ಇಂದು ಅಣುಸ್ಥಾವರಗಳ ಬೃಹತ್ ಸಂಖ್ಯೆಯೇ ಭೂಮಿಯ ಪರಿಸರಕ್ಕೆ ವಿನಾಶವನ್ನು ತಂದಿದೆ. ಏರುತ್ತಿರುವ ಜನಸಂಖ್ಯೆಯಿಂದ ಪರಿಸರ ನಾಶವೂ ಪ್ರಳಯಾಂತಕವಾಗಿ ನಿಂತಿದೆ. ಜನಸಂಖ್ಯೆಗೆ ತಕ್ಕ ಹಾಗೆ ಅನುಕೂಲಗಳನ್ನು, ವ್ಯವಸ್ಥೆಗಳನ್ನು ನಿರ್ಮಿಸ ಲಾಗದೆ, ಪರಿಸರ ನಾಶವಾಗುತ್ತಿದೆ. ಇಂದು ದೆಹಲಿ, ಬೆಂಗಳೂರು ಮುಂತಾದ ದೊಡ್ಡ ನಗರಗಳಲ್ಲಿ ವಾಯು ಮಾಲಿನ್ಯದಿಂದಾಗಿ ವಾಹನ ಸಂಚಾರವೇ ಅಸಾಧ್ಯ ಎನ್ನಿಸುವಂತಿದೆ. ಹಲವು ಬಾರಿ ಧೂಳಿನ ರಾಶಿ ದಾರಿಯೇ ಕಾಣದಂತೆ ಮಾಡಿದೆ. ಇದು ಒಂದು ಉದಾಹರಣೆಯಷ್ಟೇ. ಈ ಲಾಕ್‍ಡೌನ್ ಸಮಯದಲ್ಲಿ ವಾಹನ ಸಂಚಾರವಿಲ್ಲದಾಗ ರಸ್ತೆಗಳಲ್ಲಿ ವಾಹನ ಸಂಚಾರವಿಲ್ಲದೆ, ವಾಯುಮಾಲಿನ್ಯ ದಟ್ಟನೆ ಇಲ್ಲದೆ ಸುಲಭ ಸಂಚಾರಕ್ಕೆ ಯೋಗ್ಯವಾಗಿದ್ದನ್ನು ನಾವಿಲ್ಲಿ ಸ್ಮರಿಸಿಕೊಳ್ಳಬಹುದು.

ಕೊರೊನಾ ಎಂಬ ಹೆಮ್ಮಾರಿಯು ಮಾನವ ಕುಲಕ್ಕೆ ಮಾರಕವಾಗಿದ್ದು, ಲಕ್ಷಗಟ್ಟಲೆ ಜನ ಈ ಜಗತ್ತಿನಲ್ಲಿ ಸಾಯುತ್ತಿದ್ದಾರೆ. ಇದಕ್ಕೆಲ್ಲಾ ಕಾರಣ ಪ್ರಕೃತಿಯ ಮೇಲೆ ನಡೆದಿರುವ ಸಂಹಾರ. ಪ್ರತಿಯೊಂದು ಜೀವಿಗೂ ಜೀವಿಸುವ ಹಕ್ಕಿದೆ. ಪ್ರಕೃತಿ ಆ ಹಕ್ಕನ್ನು ನೀಡಿದೆ. ಅಲ್ಲಿ ಸಮತೋಲನವಿದೆ. ಆಹಾರ ಸರಪಳಿಯಿದೆ. ಆದರೆ ಮಾನವ ಹಲವಾರು ಪ್ರಾಣಿ ಪಕ್ಷಿ ಸಂಕುಲ ವನ್ನೇ ನಾಶ ಮಾಡಿದ್ದಾನೆ. ಇಂದು ಕೊರೊನ ಹೆಮ್ಮಾರಿಯ ನರ್ತನಕ್ಕೂ ಕಾರಣ ಪರಿಸರ ಮಾಲಿನ್ಯ ಎಂಬುದು ತೆರೆದಿಟ್ಟ ಸತ್ಯ. ಇಂದು ಕೆರೆಗಳು ಇರಬೇಕಾದ ಕಡೆ ಕಟ್ಟಡಗಳು ಎದ್ದಿರುವುದು, ಮರಗಳು ಇರಬೇಕಾದ ಕಡೆ ಮನೆಗಳು ಎದ್ದಿವೆ. ಹರಿದ ಕೊಳಚೆ ನೀರು, ಹರಿಯದೆ ನಿಂತು ರೋಗಾಣುಗಳು ಕಾಯಿಲೆ ಹರಡುತ್ತಿದೆ. ಕಾರ್ಖಾನೆಗಳು ಉಗುಳುವ ಹೊಗೆ ವಿಷಕಾರಕವಾಗಿದ್ದು, ಪರಿಸರ ನಾಶದಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ ಎನ್ನಬಹುದು.

ಇಂದು ಪರಸ್ಪರ ದೇಶ-ದೇಶಗಳ ನಡುವೆ ಯುದ್ಧದ ಕಾರ್ಮೋಡ ಗಳಿದ್ದು, ಅಣುಬಾಂಬ್ ಪರೀಕ್ಷೆ, ಪ್ರಯೋಗಗಳು, ಕ್ಷಿಪಣಿಗಳ ಉಡಾವಣೆ ಕೂಡ ಪರಿಸರ ಮಾಲಿನ್ಯಕ್ಕೆ ಕಾರಣವಾಗಿ ಪರಿಸರ ನಾಶಕ್ಕೆ ಕಾರಣವಾಗು ತ್ತಿದೆ. ಕೃತಕ ಗೊಬ್ಬರಗಳ ಬಳಕೆ, ಆಧುನಿಕ ಗೃಹೋಪಯೋಗಿ ವಸ್ತುಗಳು ಕೂಡ ಪರಿಸರನಾಶದಲ್ಲಿ ಕಾರಣೀಭೂತವಾಗಿದೆ. ಗಣಿಕಾರಿಕೆಯಂತೂ ಪರಿಸರವನ್ನು ಪೂರ್ತಿಯಾಗಿ ಹಾಳುಗೆಡವಿದೆ. ಹಸಿರು ಮನೆ ಪರಿಣಾಮ, ಓಜೋನ್ ಪರದೆ ನಾಶ ಭೂಮಿಯ ತಾಪವನ್ನು ಹೆಚ್ಚಿಸಿ, ಭೂಮಿ ಅಪಾಯದ ಅಂಚಿಗೆ ತಲಪಿದೆ.

ಈ ನಿಟ್ಟಿನಲ್ಲಿ ಪರಿಸರ ಸಂರಕ್ಷಣೆ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ನೀಡುವುದು ಬಹುಮುಖ್ಯವಾಗಿದೆ. ಸಮುದಾಯದ ಪರಿಸರ ಸಮಸ್ಯೆಗಳನ್ನು ಜನರಿಗೆ, ಭವಿಷ್ಯದ ವಿದ್ಯಾರ್ಥಿಗಳಿಗೆ ತಿಳಿಸುವುದು, ಪರಿಹಾರ ಕಂಡುಹಿಡಿಯುವುದು, ಸಾರ್ವಜನಿಕರಲ್ಲಿ ಪರಿಸರ ಪ್ರಜ್ಞೆ ಮೂಡಿಸುವುದು. ಪರಿಸರ ಸಂರಕ್ಷಣೆಯನ್ನು ವೈಜ್ಞಾನಿಕವಾಗಿ ಮಾಡುವುದು, ಪಶ್ಚಿಮ ಘಟ್ಟ, ಕರಾವಳಿ ಹಾಗೂ ದೇಶದ ಜೀವವೈವಿಧ್ಯ, ಪ್ರಾಣಿಗಳ ಸಂರಕ್ಷಣೆ, ಪ್ಲಾಸ್ಟಿಕ್, ತಂಬಾಕು, ಧೂಮಪಾನದಂತ ಪರಿಸರ ಮಾಲಿನ್ಯ ತರುವ ವಸ್ತುಗಳ ವಿರುದ್ಧ ಜಾಗೃತಿ ಮೂಡಿಸಿ ನಿಷೇಧಕ್ಕೆ ಪ್ರಯತ್ನಿಸಬೇಕು. ಮೂಲಭೂತ ಸೌಕರ್ಯಗಳ ಬಗ್ಗೆ, ಸ್ಥಾವರಗಳ ಬಗ್ಗೆ, ಪ್ರಾಣಿ-ಪಕ್ಷಿಗಳ ಬಗ್ಗೆ, ಅವುಗಳ ಸಂಕುಲಗಳ ಉಳಿಯುವಿಕೆ ಬಗ್ಗೆ ಅರಿವು ಮೂಡಿಸುವುದು, ಪರಿಸರ ಜಾಗೃತಿಯನ್ನು ವಿವಿಧ ರೀತಿಯಲ್ಲಿ ಕೈಗೊಳ್ಳುವುದು, ಕೃತಕ ಉಪಗ್ರಹಗಳ ಸ್ಪರ್ಧೆಗೆ ಕಡಿವಾಣದಿಂದ ಆಕಾಶದಲ್ಲಿ ನಿರುಪಯುಕ್ತ ವಸ್ತುಗಳ ನಿರ್ಮೂಲನೆ, ಸೂಕ್ತ ರೀತಿಯ ಘನ ತ್ಯಾಜ್ಯ ನಿರ್ವಹಣೆ, ಗ್ರಾಮ, ನಗರಗಳ ಸ್ವಚ್ಛತೆ, ಅರಣ್ಯಗಳ ರಕ್ಷಣೆ, ಜಲಮಾಲಿನ್ಯ ತಡೆಗಟ್ಟುವ ಉಪಾಯಗಳು ಹೀಗೆ ಇವುಗಳ ಬಗ್ಗೆ ಜಾಗೃತಿ ಮೂಡಿಸಿ, ಹಲವಾರು ಯುದ್ಧೋಪಾದಿಯ ಕಾರ್ಯಯೋಜನೆಗಳನ್ನು ಕೈಗೊಂಡಾಗ ಪರಿಸರ ಸಂರಕ್ಷಣೆಯ ಉದ್ದೇಶಗಳು ಈಡೇರಿ ಈ ಭೂಮಿ ಉಳಿದೀತು, ಈ ನಿಟ್ಟಿನಲ್ಲಿ ಜೂನ್ 5 ನಾಳೆ ನಾವು ಪರಿಸರ ಸಂರಕ್ಷಣೆಯನ್ನು ಈ ಕೊರೊನಾ ಸಂಕಷ್ಟ ಕಾಲದಲ್ಲಿ ಪ್ರಕೃತಿ, ಪರಿಸರ ರಕ್ಷಣೆ ಮಾಡುವ ಬಗ್ಗೆ ಪ್ರತಿಜ್ಞೆ ಕೈಗೊಂಡು, ಕಾರ್ಯಗತಗೊಳಿಸಿದಲ್ಲಿ ಈ ದಿನದ ಆಚರಣೆ ಅರ್ಥಪೂರ್ಣವಾದೀತು. ಭೂಮಿ ಹಸಿರಾಗಿ, ನಳನಳಿಸಿ ಭೂಮಿಯ ಉಸಿರು ಉಳಿದೀತು.

-ಬಿಂದು ಪಿ. ವಿ., ಮಡಿಕೇರಿ.