ಸ್ಕ್ವಾಷ್ ಆಟವು ಅತ್ಯಂತ ಪ್ರಾಚೀನವಾದುದು. ಇದು ರಾಕೆಟ್‍ನಲ್ಲಿ ಆಡುವ ಆಟವಾಗಿದೆ. ಇದನ್ನು ಹಿಂದೆ ಲಂಡನ್‍ನ ಜೈಲಿನಲ್ಲಿ ಅಂದರೆ 18ನೇ ಶತಮಾನದಲ್ಲಿ ಆಡುತ್ತಿದ್ದರು. ಸುಮಾರು 1830ರಲ್ಲಿ ಇಂಗ್ಲೆಂಡಿನ ಹೆರೋ ಶಾಲೆಯಲ್ಲಿ ಮಕ್ಕಳು ಗೋಡೆಯ ಉಪಯೋಗದೊಂದಿಗೆ ಆಡುತ್ತಿದ್ದರು. ಈ ಹೊಸ ಆಟ ಚೆಂಡೊದನ್ನು ಉಪಯೋಗಿಸಿ ಗೋಡೆಗೆ ಹೊಡೆದು ಬೌನ್ಸ್‍ನೊಂದಿಗೆ ಆಡುತ್ತಿದ್ದರು. ಇದು ಈರ್ವರ ನಡುವೆ ನಡೆಯುತ್ತಿತ್ತು. ಮೊದಲನೆ ಕೋರ್ಟ್‍ನ್ನು ಹೆರೋ ಶಾಲೆಯಲ್ಲಿ ರಚಿಸಲಾಯಿತು. ಗೋಡೆಗೆ ಹೊಡೆದು ಆಡುವ ಇದು ಆಗ ಅಪಾಯಕಾರಿ ಯಾಗಿತ್ತು. ನಂತರದಲ್ಲಿ ನೈಸರ್ಗಿಕ ರಬ್ಬರ್ ಮೂಲಕ ಚೆಂಡು ತಯಾರಿಸ ಲಾಯಿತು. ಹೊಸ ರಾಕೆಟ್‍ನ್ನು ಆಟಕ್ಕನುಗುಣವಾಗಿ ಸಣ್ಣದಾಗಿಸಿ ಆಟ ನಿಯಮಾವಳಿಗಳಿಗೆ ತಕ್ಕಹಾಗೆ ರಚಿಸಲಾಯಿತು. 1864ರಲ್ಲಿ ಹೆರೋ ಶಾಲೆಯಲ್ಲಿ ಹೊರಾಂಗಣ ಕೋರ್ಟ್‍ಗಳನ್ನು ರಚಿಸಲಾಯಿತು.

19ನೇ ಶತಮಾನದಲ್ಲಿ ಈ ಆಟವು ಹೆಚ್ಚು ಜನಪ್ರಿಯಗೊಂಡು, ಬೇರೆ-ಬೇರೆ ಶಾಲೆಗಳಲ್ಲಿ ಜನಪ್ರಿಯತೆ ಪಡೆಯಿತು. ಕ್ಲಬ್‍ಗಳು, ಖಾಸಗಿಯವರು ಕೋರ್ಟ್‍ಗಳನ್ನು ರಚಿಸಿ ಆಡಲಾರಂಭಿಸಿದರು. ಸ್ಕ್ವಾಷ್ ರಾಕೆಟ್‍ಗಳು ಬಹುತೇಕ ಟೆನ್ನಿಸ್ ರಾಕೆಟ್‍ಗಳನ್ನೇ ಹೋಲುತ್ತಿದ್ದರೂ ಸಿಂಥೆಟಿಕ್ ಸ್ಟ್ರಿಂಗ್‍ಗಳಿಂದ ಬಲಶಾಲಿಯಾಗಿವೆ. ಸ್ಕ್ವಾಷ್ ಆಟವು ಅನೇಕ ದೇಶಗಳಲ್ಲಿ ಆಡಲ್ಪಡುತ್ತಿದೆ. ಭಾರತದಲ್ಲೂ ಈ ಕ್ರೀಡೆ ಆಡಲ್ಪಡುತ್ತಿದ್ದು, ಜೋಷ್ನಾ ಚಿಣ್ಣಪ್ಪ (ಕೊಡಗು ಮೂಲ) ಇವರು ಸ್ಕ್ವಾಷ್ ಆಟದಲ್ಲಿ ಅನೇಕ ಸಾಧನೆಗಳನ್ನು ಮಾಡಿದ್ದಾರೆ. ಅಂತರರಾಷ್ಟ್ರೀಯವಾಗಿಯೂ ಮಿಂಚಿದ್ದಾರೆ. ರಾಷ್ಟ್ರಮಟ್ಟದಲ್ಲಿ ಸ್ಕ್ವಾಷ್ ಕ್ರೀಡೆಯಲ್ಲಿ ಭಾರೀ ಹೆಸರು ಮಾಡಿರುವ ಕೊಡಗಿನ ಹೆಮ್ಮೆಯ ಅಮ್ಮಚ್ಚಿಮಣಿಯಂಡ ಮಿಥುನ್ ಪೊನ್ನಪ್ಪನವರದ್ದು ಅದ್ಭುತ ಸಾಧನೆ ಸ್ಕ್ವಾಷ್ ತರಬೇತಿಯಲ್ಲಿ ಅವರದ್ದು ಮಹಾಸಾಧನೆ. ಇವರು ಭಾರತೀಯ ಸೇನಾ ತಂಡದ ತರಬೇತುದಾರರಾಗಿದ್ದಾರೆ. ಬಾಲ್ಯದಿಂದಲೂ ಮಿಥುನ್ ಪೊನ್ನಪ್ಪ ಅವರಿಗೆ ಕ್ರೀಡೆಯಲ್ಲಿ ಭಾರೀ ಆಸಕ್ತಿ, ಕ್ರೀಡಾ ಚಟುವಟಿಕೆಗಳಲ್ಲಿ ಎತ್ತಿದ ಕೈ. ಮಾತ್ರವಲ್ಲ, ಎಲ್ಲಾ ಕ್ರೀಡೆಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ಆಗಲೇ ಅವರಿಗೆ ಸ್ಕ್ವಾಷ್ ಆಟದಲ್ಲಿ ಬಹಳ ಆಸಕ್ತಿ. ಆಗಲೇ ಸ್ಕ್ವಾಷ್ ಕ್ರೀಡೆ ಕೌಶಲ್ಯಗಳನ್ನು ಗಮನಿಸುತ್ತಿದ್ದರು. ಗೋಡೆಗೆ ತಾಗಿ ಪುಟಿದೆದ್ದು ಬೌನ್ಸ್‍ನೊಡನೆ ಬಂದ ಚೆಂಡನ್ನು ಮತ್ತೆ ಬಾರಿಸುವ ಕೌಶಲ್ಯಗಳು, ಚಾಕಚಕ್ಯತೆ ಅವರ ಮನಗೆದ್ದು, ಆಟದಲ್ಲಿಯ ಆಸಕ್ತಿ, ಕುತೂಹಲವನ್ನು ಇಮ್ಮಡಿಸಿತು, ಗಮನಿಸುವಿಕೆ ಯಲ್ಲೇ ಬಹಳಷ್ಟು ಆಟದ ತಂತ್ರಗಳನ್ನು ಕರಗತಮಾಡಿಕೊಳ್ಳುತ್ತಿದ್ದರು. ಪದವಿ ಪೂರ್ವ ಶಿಕ್ಷಣದ ನಂತರದಲ್ಲಿ ಸಾಧನೆಯ ಛಲದೊಂದಿಗೆ ಸೇನೆಗೆ ಸೇರ್ಪಡೆಯಾದರು. ಅವರ ಕ್ರೀಡಾ ಮನಸ್ಸು, ಶಿಸ್ತಿನ ಸೇನಾ ಕಾರ್ಯ ದೊಂದಿಗೆ ಸಾಗಿತು. ಹಲವು ತರಬೇತಿ ಗಳ, ಪರೀಕ್ಷೆಗಳ ನಂತರದಲ್ಲಿ ಸೇನಾ ತರಬೇತುದಾರ ರಾದರು. ರಾಕೆಟ್ ಫೆಡರೇಶನ್ ಆಫ್ ಇಂಡಿಯಾ ಲೆವಲ್ ಒನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಮಿಥುನ್ ಪೊನ್ನಪ್ಪ ಅವರು ಸ್ಕ್ವಾಷ್ ಕ್ರೀಡೆಗೆ ಸೇನಾ ತರಬೇತುದಾರರಾಗಿ ಸೇವೆ ಸಲ್ಲಿಸಲಾರಂಭಿಸಿದರು. ಅವರ ಉತ್ಸಾಹ, ತನ್ಮಯತೆ, ತೊಡಗಿಸಿಕೊಳ್ಳುವ ಶಕ್ತಿಗೆ ತರಬೇತುದಾರನ ಹುದ್ದೆ ಸೂಕ್ತ ಅವಕಾಶವನ್ನು ಮಾಡಿಕೊಟ್ಟಿತು.

ಇವರು ರೆಫರಿ ಕೋರ್ಸ್ ಪೂರ್ಣಗೊಳಿಸಿದ ನಂತರದಲ್ಲಿ ರಾಜ್ಯಮಟ್ಟದ ಇಪ್ಪತ್ತು ಪಂದ್ಯಾವಳಿಗಳು ಹಾಗೂ ರಾಷ್ಟ್ರಮಟ್ಟದ ಮೂರು ಪಂದ್ಯಾವಳಿಗಳಲ್ಲಿ ತೀರ್ಪುಗಾರರಾಗಿ ಕಾರ್ಯ ನಿರ್ವಹಿಸಿದ್ದಾರೆ. ಮುಂದೆ ಅಂತರರಾಷ್ಟ್ರೀಯ ಮಟ್ಟದಲ್ಲೂ ತೀರ್ಪುಗಾರರಾಗಿ ಕಾರ್ಯನಿರ್ವಹಿಸುವ ಅವಕಾಶಗಳು ನಿಚ್ಚಳವಾಗಿದೆ. ಮುಂದೆ ದೆಹಲಿ ಸರ್ವಿಸಸ್ ಸ್ಪೋಟ್ರ್ಸ್ ಕಂಟ್ರೋಲ್ ಬೋರ್ಡ್ ಅಡಿಯಲ್ಲಿ ಪುಣೆಯ ಆಮ್ರ್ಡಫೋರ್ಸ್ ಮೆಡಿಸನ್ ಸೆಂಟರ್‍ನಲ್ಲಿ ತರಬೇತುದಾರರಾದರು. ಅದೇ ಸಂಸ್ಥೆ ಮೂಲಕ ದೈಹಿಕ ಸಬಲೀಕರಣ ತರಬೇತಿ ಮುಗಿಸಿದರು. 2011-12ನೇ ಸಾಲಿನಲ್ಲಿ ಸದರ್ನ್ ಕಮಾಂಡ್ ಚಾಂಪಿಯನ್‍ಶಿಪ್ ಸ್ಕ್ವಾಷ್ ಕ್ರೀಡೆಯ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದರೆ, 2016-17ನೇ ಸಾಲಿನಲ್ಲಿ ಸರ್ವೀಸಸ್ ಸ್ಪೋರ್ಟ್ ಕಂಟ್ರೋಲ್ ಬೋರ್ಡ್‍ನ ಆಟಗಾರರಾದರು. ಸರ್ವೀಸಸ್ (ಭೂ, ವಾಯು, ಜಲ) ಇಂಟರ್‍ಸರ್ವಿಸಸ್ ಲಾನ್ ಟೆನ್ನಿಸ್ ಚಾಂಪಿಯನ್‍ಶಿಪ್‍ನಲ್ಲಿ ಪ್ರಥಮ ಸ್ಥಾನ ಪಡೆದರು. 2015-16 ಹಾಗೂ 2017-18ರಲ್ಲೂ ಸದರ್ನ್ ಕಮಾಂಡ್ ಚಾಂಪಿಯನ್‍ಶಿಪ್‍ನಲ್ಲಿ ಪ್ರಥಮಸ್ಥಾನ ಗೆದ್ದರು. ಇನ್ನೂ ಅನೇಕ ಬಹುಮಾನ, ಪದಕಗಳನ್ನು ಗಳಿಸಿದ್ದಾರೆ.

ಸರ್ವೆ ಕಚೇರಿಯಲ್ಲಿ ಉದ್ಯೋಗದಲ್ಲಿದ್ದ ಪೊನ್ನಪ್ಪ ಎ.ಟಿ. ಯವರು ಮಿಥುನ್‍ಪೊನ್ನಪ್ಪ ಅವರ ತಂದೆ, ಇಂದಿಗೂ ಚಟುವಟಿಕೆಯಿಂದ ಇರುವ ಇವರು ಎಲ್ಲರಿಗೂ ಪರಿಚಿತರು. ಇವರು ಮಡಿಕೇರಿಯ ಗಾಳಿಬೀಡಿನವರು. ಸ್ಕ್ವಾಷ್ ಕ್ರೀಡೆ ತುಂಬಾ ದುಬಾರಿ, ಸೇನಾ ಮೂಲಕ ಆಯ್ಕೆ ಹಾಗೂ ತರಬೇತಿ, ಪರೀಕ್ಷೆಗಳನ್ನು ಎದುರಿಸಿ, ಯಶಸ್ಸು ಸಾಧಿಸಿ ಉತ್ತಮ ಸ್ಕ್ವಾಷ್ ಆಟಗಾರ ಹಾಗೂ ತರಬೇತುದಾರನಾಗಿ ಭಾರತದಲ್ಲಿ ಬೆಳಗಿದ ಕೊಡಗಿನ ಹೆಮ್ಮೆಯ ಅಮ್ಮಚ್ಚಿಮಣಿಯಂಡ ಮಿಥುನ್ ಪೊನ್ನಪ್ಪ ಅವರ ಸಾಧನೆಗಳು ಅದ್ಭುತ ಹಾಗೂ ಪ್ರಶಂಸನಾರ್ಹ. ಕೊರೊನಾ ಸಂಕಷ್ಟ ಕಾಲದಲ್ಲಿ ಇವರು ಕೊಡಗಿನಲ್ಲಿ ತರಬೇತಿ ನೀಡುವಲ್ಲೂ ಆಸಕ್ತರಾಗಿದ್ದರು. ಇನ್ನು ಕೆಲವೇ ದಿನಗಳಲ್ಲಿ ಇವರು ಮತ್ತೆ ಸೇನೆಯನ್ನು ಸೇರಿಕೊಳ್ಳಬೇಕಾಗಿದೆ. ಮುಂದೆ ಇವರು ಕೊಡಗಿನಲ್ಲೂ ಸ್ಕ್ವಾಷ್ ಪ್ರತಿಭೆಗಳನ್ನು ಹೊರತರುವಂತಾಗಿ ಜಿಲ್ಲೆಯಲ್ಲಿ ಈ ಆಟ ಜನಪ್ರಿಯವಾಗಲಿ. ಮಿಥುನ್‍ರವರು ಹೇಳಿರುವಂತೆ ಜಗತ್ತಿನ 185 ದೇಶಗಳು ಈ ಆಟವನ್ನು ಆಡುತ್ತಿವೆ. ಅಲ್ಲಿ 20 ಮಿಲಿಯನ್ ಜನ ಈ ಕ್ರೀಡೆ ಆಡುತ್ತಾರೆ. ಒಲಿಂಪಿಕ್ಸ್‍ನಲ್ಲಿ ಈ ಕ್ರೀಡೆ ಸೇರ್ಪಡೆಯಾಗಬೇಕಿದೆ. ಈಗಾಗಲೇ ಭಾರತದಲ್ಲಿ ಅನೇಕ ಸ್ಕ್ವಾಷ್ ಕ್ರೀಡಾಪಟುಗಳನ್ನು ತಯಾರು ಮಾಡಿರುವ ಮಿಥುನ್ ಪೊನ್ನಪ್ಪ ಅವರು ವಿಶ್ವಮಟ್ಟದಲ್ಲಿ ಪದಕ ತರುವಂತಹ ಕ್ರೀಡಾಪಟುಗಳನ್ನು ರೂಪಿಸಲಿ, ವಿಶ್ವಮಟ್ಟದಲ್ಲಿ ಇವರ ಹೆಸರು ರಾರಾಜಿಸಲಿ ಎಂದು ಹಾರೈಸೋಣ. -ಹರೀಶ್‍ಸರಳಾಯ,

ಮಡಿಕೇರಿ.