ಸೋಮವಾರಪೇಟೆ,ಜೂ.3: ತಾಲೂಕಿನ ಕುಂಬಾರಗಡಿಗೆ ಗ್ರಾಮದಲ್ಲಿ ಮಂಡಿ ಚಿಪ್ಪಿನ ಹಾನಿಯಿಂದ ಬಳಲುತ್ತಿದ್ದ ಬಾಲಕ ದಿಲನ್‍ಗೆ ವರದಾನವಾಗಿ ಆಗಮಿಸಿದ ಗೋಣಿಕೊಪ್ಪ ಲಯನ್ಸ್ ಕ್ಲಬ್‍ನ ಪದಾಧಿಕಾರಿಗಳು, ಶ್ಲಾಘನೀಯ ಸೇವೆ ಮಾಡಿದ್ದಾರೆ.

ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆಗೆ ಒಳಗಾದ ಬಾಲಕ ದಿಲನ್‍ನ ನೆರವಿಗೆ ಆಗಮಿಸಿದ ಲಯನ್ಸ್ ಕ್ಲಬ್‍ನ ಪದಾಧಿಕಾರಿಗಳು, ಸುಮಾರು 50 ಸಾವಿರ ವೆಚ್ಚದಲ್ಲಿ ಕೀ ಹೋಲ್ ಚಿಕಿತ್ಸೆ ಕೊಡಿಸುವ ಮೂಲಕ ಮಾನವೀಯತೆ ತೋರಿದ್ದಾರೆ.

ಕಳೆದ ಪ್ರಾಕೃತಿಕ ವಿಕೋಪ ಸಂದರ್ಭ ಮನೆ ಕಳೆದುಕೊಂಡಿದ್ದ ಕುಂಬಾರಗಡಿಗೆಯ ಪೆಮ್ಮಯ್ಯ ಅವರಿಗೆ ಇದೇ ಲಯನ್ಸ್ ಕ್ಲಬ್, ನೂತನ ಮನೆ ನಿರ್ಮಿಸಿಕೊಟ್ಟಿದ್ದು, ಇದೀಗ ಅವರ ಮಗನ ಕಾಲನ್ನು ಉಳಿಸಿಕೊಟ್ಟಿದೆ.

‘ಶಕ್ತಿ’ಯ ವರದಿಯನ್ನು ಗಮನಿಸಿದ ಜಿ.ಪಂ. ಸದಸ್ಯ ಸಿ.ಕೆ. ಬೋಪಣ್ಣ ಅವರು ಪ್ರಾರಂಭದಲ್ಲಿ ಗೋಣಿಕೊಪ್ಪಲು ಲಯನ್ಸ್ ಕ್ಲಬ್‍ನ ಜೆ.ಎಸ್. ಮಾದಪ್ಪ ಹಾಗೂ ಸಿ.ಎ. ಮುತ್ತಣ್ಣ ಅವರನ್ನು ಸಂಪರ್ಕಿಸಿ ಚರ್ಚೆ ನಡೆಸಿದ ಫಲವಾಗಿ, ಲಯನ್ಸ್ ಕ್ಲಬ್‍ನ ಅಧ್ಯಕ್ಷ ಕಲ್ಲಂಗಡ ನಿತಿ ಪೂಣಚ್ಚ, ಕಾರ್ಯದರ್ಶಿ ಲಿರಿಸ್ ಚಿಣ್ಣಪ್ಪ, ಖಜಾಂಚಿ ಸುನಿಲ್ ಅವರುಗಳ ಸಹಕಾರದಿಂದ ಚಿಕಿತ್ಸೆಗೆ ವ್ಯವಸ್ಥೆ ಕಲ್ಪಿಸಿದ್ದರು.

ಮಂಗಳೂರಿನ ವೈದ್ಯರಾದ ಶಾಂತರಾಮ್ ಶೆಟ್ಟಿ ಅವರ ಆಪ್ತರಾಗಿರುವ ಜೆ.ಎಸ್. ಮಾದಪ್ಪ, ಸಿ.ಎ. ಮುತ್ತಣ್ಣ ಅವರು ಬಾಲಕನ ಪರಿಸ್ಥಿತಿಯನ್ನು ವಿವರಿಸಿದ ಪರಿಣಾಮ ಶಸ್ತ್ರ ಚಿಕಿತ್ಸೆಯ ವೆಚ್ಚವನ್ನು ಮಾತ್ರ ಪಡೆದಿದ್ದು, ಉಳಿದಂತೆ ಇತರ ಶುಲ್ಕಗಳಲ್ಲಿ ವಿನಾಯಿತಿ ನೀಡಿದ್ದಾರೆ. ಆಸ್ಪತ್ರೆಗೆ 50 ಸಾವಿರ ಬಿಲ್ ಪಾವತಿಸಿರುವ ಲಯನ್ಸ್ ಕ್ಲಬ್‍ನ ಪದಾಧಿಕಾರಿಗಳು, ಬಾಲಕ ಆರೋಗ್ಯವಾಗಿ ಮನೆಗೆ ವಾಪಸ್ ಆಗಲು ನೆರವಾಗಿದ್ದಾರೆ.