ಸುಂಟಿಕೊಪ್ಪ, ಜೂ.3 : ಕೊರೊನಾ ಲಾಕ್‍ಡೌನ್ ನಿಂದ 2 ತಿಂಗಳು ಮದ್ಯ ಪ್ರಿಯರು ಮದ್ಯ ಸಿಗದೆ ಪರದಾಡುತ್ತಿದ್ದರು. ಈಗ ಮದ್ಯ ಲಭ್ಯವಿರುವಾಗ ಖಾಲಿ ತೊಟ್ಟೆಗಳನ್ನು ಎಲ್ಲೆಂದರಲ್ಲಿ ಎಸೆದು ಅಶುಚಿತ್ವಕ್ಕೆ ಆಹ್ವಾನ ನೀಡುತ್ತಿರುವುದು ಕಂಡು ಬಂದಿದೆ.

ಸುಂಟಿಕೊಪ್ಪದಲ್ಲಿ ಒಂದು ವೈನ್ ಶಾಪ್ ನಾಲ್ಕು ಬಾರ್‍ಗಳಿವೆ. ಬಾರ್‍ಗಳಲ್ಲಿ ಮದ್ಯ ದಾಸ್ತಾನು ಖಾಲಿಯಾಗಿರುವುದರಿಂದ ಆಗಿಂದಾಗ್ಗೆ ಬೀಗ ಹಾಕಲಾಗುತ್ತದೆ. ವೈನ್ ಶಾಪ್‍ನಲ್ಲಿ ಎಂದಿನಂತೆ ಮದ್ಯ ಮಾರಾಟ ಮಾಡಲಾಗುತ್ತಿದೆ. ಮದ್ಯ ಖರೀದಿಸಿ ಗ್ರಾ.ಪಂ.ನ ಶೌಚಾಲಯ, ಮಾರುಕಟ್ಟೆ ಅಂಗಡಿ ಮಳಿಗೆಯ ಸ್ಥಳದಲ್ಲಿ ಮದ್ಯ ಸೇವಿಸಿ ಖಾಲಿ ತೊಟ್ಟೆಯನ್ನು ಅಲ್ಲೇ ಎಸೆದು ತೆರಳುತ್ತಿರುವುದರಿಂದ ವಾತಾವರಣ ಕಲುಷಿತಗೊಳ್ಳುತ್ತಿದೆ. ಅಲ್ಲದೆ, ಮದ್ಯದಂಗಡಿ ತೆರೆಯುವ ಮೊದಲೇ ಮದ್ಯವ್ಯಸನಿಗಳಿಗೆ ಮಾರುಕಟ್ಟೆ ಆಸುಪಾಸಿನಲ್ಲಿ ಮದ್ಯವರ್ತಿಗಳು ಕಡಿಮೆ ದರ್ಜೆಯ ಮದ್ಯವನ್ನು ದುಪ್ಪಟ್ಟು ದರಕ್ಕೆ ಮಾರಾಟ ಮಾಡುತ್ತಿದ್ದು, ಒಟ್ಟಾರೆ ಕೊರೊನಾ ಲಾಕ್‍ಡೌನ್‍ನಿಂದ ಮದ್ಯಪ್ರಿಯರು ಸ್ವಚ್ಛತೆ ಕಾಪಾಡಲು ಸಹಕರಿಸದಿರುವುದು ಸುಂಟಿಕೊಪ್ಪ ಪೌರಕಾರ್ಮಿಕರಿಗೆ ಕಿರಿಕಿರಿಯುಂಟು ಮಾಡಿದೆ.