ಸೋಮವಾರಪೇಟೆ, ಜೂ. 3: ತಾಲೂಕಿನ ಚಿಕ್ಕತೋಳೂರು ಗ್ರಾಮದಿಂದ ಜೇನಿಗರಕೊಪ್ಪ ಗ್ರಾಮ ಸಂಪರ್ಕದ ನಡುವೆ ಹರಿಯುವ ಸಣ್ಣ ಹೊಳೆಗೆ ಸೇತುವೆ ನಿರ್ಮಿಸಿಕೊಡುವಂತೆ ಗ್ರಾಮಸ್ಥರು, ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರಿಗೆ ಮನವಿ ಮಾಡಿದರು. ಚಿಕ್ಕತೋಳೂರು ಗ್ರಾಮದ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲು ಆಗಮಿಸಿದ ಸಂದರ್ಭ ಸೇತುವೆಯ ಅವಶ್ಯಕತೆಯ ಬಗ್ಗೆ ಮನವರಿಕೆ ಮಾಡಿಕೊಟ್ಟ ಗ್ರಾಮಸ್ಥರು, ಎರಡೂ ಗ್ರಾಮಗಳ ನಡುವೆ ಕಿರು ಸೇತುವೆ ನಿರ್ಮಾಣವಾದಲ್ಲಿ ಹೆಚ್ಚಿನ ಅನುಕೂಲವಾಗಲಿದೆ ಎಂದರು. ಇದೀಗ ಚಿಕ್ಕತೋಳೂರಿನಿಂದ ಜೇನಿಗರ ಕೊಪ್ಪಕ್ಕೆ ತೆರಳಲು ಬಳಸು ದಾರಿಯಲ್ಲಿ ಮೂರೂವರೆ ಕಿ.ಮೀ. ಸಾಗಬೇಕಿದೆ. ಸಣ್ಣ ಹೊಳೆಗೆ ಕಿರು ಸೇತುವೆ ನಿರ್ಮಾಣವಾದಲ್ಲಿ 500 ಮೀಟರ್ ಅಂತರದಲ್ಲೇ ಜೇನಿಗರಕೊಪ್ಪಕ್ಕೆ ತೆರಳಬಹುದಾಗಿದೆ ಎಂದು ಗ್ರಾಮಸ್ಥರಾದ ಹೂವಣ್ಣ, ಅಶೋಕ್, ಭರತ್, ರದೀಶ್ ಸೇರಿದಂತೆ ಇತರರು ಶಾಸಕರ ಗಮನ ಸೆಳೆದರು. ಸೇತುವೆ ನಿರ್ಮಾಣವಾಗಬೇಕಿರುವ ಸ್ಥಳವನ್ನು ಪರಿಶೀಲಿಸಿದ ಶಾಸಕ ರಂಜನ್, ಈ ಬಗ್ಗೆ ಸಂಬಂಧಿಸಿದ ಇಲಾಖೆಯ ಅಭಿಯಂತರರಿಗೆ ಸೂಚನೆ ನೀಡಿ, ಹೊಳೆಗೆ ಅಡ್ಡಲಾಗಿ ಪೈಪ್‍ಗಳನ್ನು ಅಳವಡಿಸಿ ಕಿರುಸೇತುವೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುವದಾಗಿ ಭರವಸೆ ನೀಡಿದರು.