ವೀರಾಜಪೇಟೆ, ಜೂ. 2: ನಿನ್ನೆ ರಾತ್ರಿ 7.15 ಗಂಟೆಗೆ ಚಿಕ್ಕಪೇಟೆ ಕಡೆಯಿಂದ ಬಂದ ಆಟೋ ರಿಕ್ಷಾ ಇಲ್ಲಿನ ಛತ್ರಕೆರೆಯ ಮಠದ ಗದ್ದೆ ಬಳಿ ರಸ್ತೆಯಲ್ಲಿದ್ದ ಎರಡು ವರ್ಷದ ಎತ್ತಿಗೆ ಡಿಕ್ಕಿ ಹೊಡೆದುದರ ಪರಿಣಾಮವಾಗಿ ಎತ್ತು ಸ್ಥಳದಲ್ಲಿಯೇ ಸಾವನ್ನಪ್ಪಿದೆ.

ಇದೇ ಸಮಯದಲ್ಲಿ ಇದೇ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಹೆಣ್ಣು ಕರುವಿಗೆ ಮೂರ್ನಾಡು ರಸ್ತೆ ಕಡೆಯಿಂದ ಬಂದ ಮಾರುತಿ ವ್ಯಾನ್ ಡಿಕ್ಕಿ ಮಾಡಿದ ಪರಿಣಾಮವಾಗಿ ಗಂಭೀರ ಗಾಯಗೊಂಡಿದ್ದ ಎರಡು ವರ್ಷದ ಕರು ಅಸು ನೀಗಿದೆ. ಕರುವಿಗೆ ಡಿಕ್ಕಿ ಮಾಡಿದ ನಂತರ ವ್ಯಾನ್ ಸಹಿತ ಚಾಲಕ ತಲೆಮರೆಸಿಕೊಂಡಿದ್ದು ವ್ಯಾನ್‍ನ ಮುಂದಿನ ಭಾಗದ ಗ್ರಿಲ್, ಹೆಡ್‍ಲೈಟ್‍ನ ಹೊರ ಭಾಗ ರಸ್ತೆಯಲ್ಲಿ ಬಿದ್ದಿದೆ. ಮಠದ ಗದ್ದೆಯ ರಸ್ತೆಯ ಬದಿಯಲ್ಲಿ ಹಳೆ ಮರ ವ್ಯಾಪಾರದ ಉದ್ಯಮಿಯೊಬ್ಬರು ಸಿ.ಸಿ.ಕ್ಯಾಮೆರಾ ಅಳವಡಿಸಿದ್ದು ಪೊಲೀಸರು ಇದರ ಫೂಟೇಜ್‍ನ್ನು ಪರಿಶೀಲಿಸಿದಾಗ ಹೆಣ್ಣು ಕರುವಿಗೆ ವ್ಯಾನ್ ಡಿಕ್ಕಿ ಯಾಗಿರುವುದು ಪತ್ತೆಯಾಗಿದೆ. ಚಾಲಕ ವ್ಯಾನ್‍ನ ಸಮೇತವಾಗಿ ತಲೆಮರೆಸಿಕೊಂಡಿದ್ದು ಆತನನ್ನು ಪತ್ತೆ ಹಚ್ಚಲು ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಈ ಎರಡು ಜಾನುವಾರುಗಳು ಕರುಂಬಯ್ಯ ಎಂಬವರಿಗೆ ಸೇರಿದ್ದು ಇಲ್ಲಿನ ಪಶು ವೈದ್ಯಾಧಿಕಾರಿಗಳು ಮಹಜರು ನಡೆಸಿದರು. ಈ ಸಂಬಂಧ ನಗರ ಪೊಲೀಸರು ಆಟೋ ರಿಕ್ಷಾವನ್ನು (ಕೆ.ಎ.12 ಎ 5706) ವಶಪಡಿಸಿಕೊಂಡು ಚಾಲಕ ಸ್ವಾಮಿ ನಾಯಕ್‍ನನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.