ಮಡಿಕೇರಿ, ಜೂ. 1: ಭಾರತೀಯ ಸೇನೆಗೆ ಸಂಬಂಧಿಸಿದಂತೆ ಹಳೆಯ ವಾಹನಗಳನ್ನು ಅತೀ ಕಡಿಮೆ ಬೆಲೆಗೆ ಒದಗಿಸಿಕೊಡುವದಾಗಿ, ಅಂತರ್ಜಾಲದ ಮೂಲಕ ಕೊಡಗಿನ ವ್ಯಕ್ತಿಗಳನ್ನು ಸಂಪರ್ಕಿಸಿ ಪದೇ ಪದೇ ವಂಚಿಸುತ್ತಿರುವದು ಕಂಡು ಬಂದಿದೆ. ಹಳೆಯ ಬೊಲೆರೋ ನಾಲ್ಕು ಚಕ್ರ ವಾಹನ ಹಾಗೂ ಬುಲೆಟ್ ಬೈಕ್ (ದ್ವಿಚಕ್ರ) ಮಾರಾಟಗೊಳಿಸಲಾಗುವದು ಎಂದು ಅಂತರ್ಜಾಲ ಮೂಲಕ ಜಾಹೀರಾತು ನೀಡಿ ವಂಚಿಸುತ್ತಿರುವದು ಬಹಿರಂಗಗೊಂಡಿದೆ.ಮೇ 26 ರಂದು ‘ಕೀರ್ತಿಪ್ರಸಾದ್’ ಹೆಸರಿನಲ್ಲಿ ಅನಾಮಿಕನೊಬ್ಬ ಜಿಲ್ಲೆಯ ಯುವಕನೊಂದಿಗೆ ಅಂತರ್ಜಾಲದಲ್ಲಿ ಮಾತುಕತೆ ನಡೆಸಿದ್ದಾನೆ. ತನ್ನ ಹಿರಿಯ ಮಿಲಿಟರಿ ಅಧಿಕಾರಿಯ ಖಾಸಗಿ ವಾಹನ ತುರ್ತು ಮಾರಾಟಕ್ಕಿದ್ದು, 2013ರ ಮಾಡೆಲ್‍ನ ಈ ವಾಹನವನ್ನು ರೂ. 1.55 ಲಕ್ಷಕ್ಕೆ ವಿಲೇವಾರಿ ಮಾಡುವದಾಗಿ ನಂಬಿಸಿದ್ದಾನೆÉ. ಇಷ್ಟು ಕಡಿಮೆಗೆ ‘ಬೊಲೆರೋ’ ಸಿಗಲಿದೆ ಎಂಬ ಆಸೆಯಿಂದ ಯುವಕ ಅನಾಮಿಕನ ಬೇಡಿಕೆಯಂತೆ ರೂ. 3 ಸಾವಿರ ಮೊತ್ತವನ್ನು ತಕ್ಷಣವೇ ಹೆಸರು ನೋಂದಾಣಿಗಾಗಿ ‘ಆನ್‍ಲೈನ್’ ಮೂಲಕ ಪಾವತಿಸಿದ್ದಾನೆ.ಆ ಬಳಿಕ ಮರಳಿ ಕರೆ ಮಾಡುವ ಅನಾಮಿಕ, ಬೆಂಗಳೂರಿನಿಂದ ಮಿಲಿಟರಿ ಗೂಡ್ಸ್ ವಾಹನದಲ್ಲಿ ‘ಬೊಲೆರೋ’ವನ್ನು ತರುತ್ತಿದ್ದು, ಕೂಡಲೇ ರೂ. 14,900 ಮೊತ್ತ ಹಣ ರವಾನಿಸಲು ತಿಳಿಸಿದ್ದಾನೆ. ಆ ಮೇರೆಗೆ ಮತ್ತೆ ಜಿಲ್ಲೆಯ ಯುವಕ ಈ ಹಣ ಸಂದಾಯ ಮಾಡಿದ್ದಾನೆ. ಈ ಮೊತ್ತ ಪಾವತಿಯಾದ ಬಳಿಕ ಪುನಃ ರೂ. 20 ಸಾವಿರಕ್ಕೆ ಬೇಡಿಕೆಯಿಟ್ಟಿದ್ದು, ಬೊಲೆರೋ ವಾಹನದ ಆಸೆಯಲ್ಲಿ ಹಣವನ್ನು ಯುವಕ ಮರು ಪಾವತಿ ಮಾಡಿಬಿಡುತ್ತಾನೆ.

ಇಷ್ಟೆಲ್ಲ ಆಗಿ ಮೂರು ತಾಸು ಕಳೆದು ಹೋದ ಮೇಲೆ, ಬೇರೊಬ್ಬ ವ್ಯಕ್ತಿ ಕೊಡಗಿನ ಯುವಕನಿಗೆ ಕರೆ ಮಾಡಿ,

(ಮೊದಲ ಪುಟದಿಂದ) ಮಿಲಿಟರಿ ಸರಕು ವಾಹನ ಹೆಬ್ಬಾಲೆ ತಲಪಿದ್ದು, ತುರ್ತಾಗಿ ರೂ. 20,000 ಹಣವನ್ನು ಕೀರ್ತಿಪ್ರಸಾದ್ ಖಾತೆಗೆ ಜಮೆಗೊಳಿಸಲು ತಿಳಿಸುತ್ತಾನೆ. ಅಷ್ಟರಲ್ಲಿ ಸುಮಾರು ರೂ. 40 ಸಾವಿರ ಹಣ ಕಳೆದುಕೊಂಡಿದ್ದ ಯುವಕ ತನ್ನ ಸ್ನೇಹಿತನೊಂದಿಗೆ ನಾಪೋಕ್ಲುವಿನಿಂದ ಕುಶಾಲನಗರಕ್ಕೆ ತೆರಳಿದ್ದಾನೆ.

ಕುಶಾಲನಗರದಲ್ಲಿ ಸಂಬಂಧಿಸಿದ ವ್ಯಕ್ತಿಗೆ ಕರೆ ಮಾಡಿದಾಗ, ‘ವೀಡಿಯೋ’ ಮೂಲಕ ಮಾತನಾಡಿರುವ ವ್ಯಕ್ತಿ ಎಲ್ಲಿರುವೆ ಎಂದು ಕೇಳಲಾಗಿ, ಸುಂಟಿಕೊಪ್ಪದ ಕನ್ನಡ ವೃತ್ತ ವ್ಯಾಪ್ತಿಯ ‘ಫೋಟೋ’ ಸಂದೇಶ ರವಾನಿಸಿದ್ದಾನೆ. ಈ ಬಗ್ಗೆ ಅನುಮಾನಗೊಂಡ ಯುವಕ ಅಲ್ಲಿಗೆ ತೆರಳಿ ಮರು ಕರೆ ಮಾಡಿದಾಗ, ಅದುವರೆಗೆ ಮೇಲಿಂದ ಮೇಲೆ ಹಣಕ್ಕಾಗಿ ಪೀಡಿಸುತ್ತಿದ್ದ ಅನಾಮಿಕರು ಯುವಕನ ಸಂಪರ್ಕ ಕರೆಯನ್ನು ಸ್ಥಗಿತಗೊಳಿಸುತ್ತಾರೆ.

ಆ ಬಳಿಕವಷ್ಟೇ ತನಗೆ ಸೇನೆಯ ಸೋಗಿನಲ್ಲಿ ಅನಾಮಿಕರು ಮೋಸಗೊಳಿಸಿ ಹಣ ಲಪಟಾಯಿಸಿದ್ದಾರೆ ಎಂದು ಖಾತರಿಪಡಿಸಿಕೊಂಡಿರುವ ಯುವಕ ಇದೀಗ ಅಂತರ್ಜಾಲ ಅಪರಾಧ ನಿಗ್ರಹ ಠಾಣೆ ಪೊಲೀಸರಿಗೆ ದೂರು ಸಲ್ಲಿಸಿ, ನ್ಯಾಯಕ್ಕಾಗಿ ಮೊರೆಯಿಟ್ಟಿರುವದಾಗಿ ಗೊತ್ತಾಗಿದೆ. ಈ ರೀತಿ ಮೇಲಿಂದ ಮೇಲೆ ಹಳೆಯ ವಾಹನಗಳ ಮಾರಾಟ ಹೆಸರಿನಲ್ಲಿ ಅಂತರ್ಜಾಲ ಮೂಲಕ ಮೋಸಗೊಳಿಸುತ್ತಿದ್ದು, ಸಾರ್ವಜನಿಕರು ಎಚ್ಚೆತ್ತ್ತುಕೊಳ್ಳುವಂತೆ ಪೊಲೀಸ್ ಇಲಾಖೆ ಕಳಕಳಿಯೊಂದಿಗೆ ಸಲಹೆ ನೀಡಿದೆ.