ಮಡಿಕೇರಿ, ಜೂ. 1: ಪ್ರತಿ ವರ್ಷ ಸಂಭವಿಸುವ ನೈಋತ್ಯ ಮುಂಗಾರು, ಜೂ.1 ರಂದು ಕೇರಳದ ಮೂಲಕ ಭಾರತದ ನೆಲಕ್ಕೆ ಪ್ರವೇಶಿಸಿದೆ ಎಂದು ಭಾರತ ಹವಾಮಾನ ಇಲಾಖೆಯ ಪ್ರಕಟಣೆ ತಿಳಿಸಿದೆ. ಈ ಕುರಿತು ಕೊಡಗು ಜಿಲ್ಲಾಧಿಕಾರಿಯೂ ಖಚಿತಪಡಿಸಿದ್ದಾರೆ. ನೈಋತ್ಯ ಮುಂಗಾರಿನ ಉತ್ತರ ಪರಿಮಿತಿ ಕಣ್ಣೂರು, ಕೊಯಂಬತ್ತೂರ್ ಹಾಗೂ ಕನ್ಯಾಕುಮಾರಿ ಮೂಲಕ ಹಾಯ್ದುಹೋಗುತ್ತದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕಳೆದ 2 ದಿನಗಳಿಂದ ಕೇರಳ ರಾಜ್ಯಾದ್ಯಂತ ಮಳೆ ಸುರಿದಿದೆ. ಒಟ್ಟು 14 ಮಳೆ ಮಾಪನ ಕೇಂದ್ರಗಳು ಕೇರಳದಲ್ಲಿದ್ದು, ಈ ಪೈಕಿ ಶೇ. 70 ರಷ್ಟು ಕೇಂದ್ರಗಳು ಮಳೆ ಸುರಿದಿರುವ ಬಗ್ಗೆ ವರದಿ ನೀಡಿವೆ. ಅರಬ್ಬಿ ಸಮುದ್ರದ ದಕ್ಷಿಣ ಭಾಗದ ಲಕ್ಷದ್ವೀಪದಲ್ಲಿ ವಾಯುಭಾರ ತೀರ ಕುಸಿತವಾಗಿರುವುದಾಗಿಯು ಇಲಾಖೆಯ ಪ್ರಕಟಣೆ ತಿಳಿಸಿದೆ.
ವೀರಾಜಪೇಟೆ : ವೀರಾಜಪೇಟೆ ವಿಭಾಗದಲ್ಲಿ ನಿನ್ನೆ ಸಂಜೆಯಿಂದಲೇ ಮೋಡ ಕವಿದ ವಾತಾವರಣವಿದ್ದು ಇಂದು ಅಪರಾಹ್ನ ಎರಡು ಗಂಟೆಯ ಸಮಯದಲ್ಲಿ ತುಂತುರು ಮಳೆ ಸುರಿದಿದೆ.
ನಾಲ್ಕುನಾಡು: ನಾಲ್ಕುನಾಡು ವ್ಯಾಪ್ತಿಯ ಮರಂದೋಡ, ಯವಕಪಾಡಿ, ನಾಲಡಿ, ಕಕ್ಕಬ್ಬೆ, ಕುಂಜಿಲ, ಕೊಳಕೇರಿ, ನಾಪೆÇೀಕ್ಲು, ನೆಲಜಿ, ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಎಡೆಬಿಡದೆ ಸಾಧಾರಣ ಮಳೆ ಸುರಿದಿದೆ.
ಹವಾಮಾನ ಇಲಾಖೆ ಜೂ. 1ರಂದು ಮುಂಗಾರು ಕೇರಳ ರಾಜ್ಯಕ್ಕೆ ಪ್ರವೇಶಿಸಲಿದ್ದು, ತಾ.4-5ಕ್ಕೆ ಜಿಲ್ಲೆಗೆ ಪ್ರವೇಶಿಸಲಿದೆ ಎಂದು ವರದಿ ನೀಡಿತ್ತು. ಈ ಹಿನ್ನಲೆಯಲ್ಲಿ ಕಾಫಿ ತೋಟಗಳಿಗೆ ರಸಗೊಬ್ಬರ ಹಾಕದ ಬೆಳೆಗಾರರು ತಮ್ಮ ಕೃಷಿ ಚಟುವಟಿಕೆಯನ್ನು ಬಿರುಸಿನಿಂದ ನಡೆಸಲು ಆರಂಭಿಸಿದ್ದರು. ಆದರೆ ಮೇ. 31ಕ್ಕೆ ಈ ವ್ಯಾಪ್ತಿಯಲ್ಲಿ ಮಳೆ ಆರಂಭಗೊಂಡಿರುವದು ಎಲ್ಲರ ಆತಂಕಕ್ಕೆ ಕಾರಣವಾಗಿದೆ.