ಮಡಿಕೇರಿ, ಜೂ. 1 : ಕಾಡಾನೆಗಳ ಜಾಡನ್ನು ಮೊದಲೇ ಅರಿತುಕೊಂಡು ಇವುಗಳ ಇರುವಿಕೆಯ ಬಗ್ಗೆ ಸುತ್ತಮುತ್ತಲಿನ ಜನತೆಗೆ ಮಾಹಿತಿ ಒದಗಿಸುವ ಅಗತ್ಯ ಮುಂಜಾಗ್ರತೆ ವಹಿಸಲು ಕೆಲವು ಕಾಡಾನೆಗಳಿಗೆ `ರೇಡಿಯೋ ಕಾಲರ್’ ಅನ್ನು ಅಳವಡಿಸಲಾಗುವ ಕಾರ್ಯ ನಡೆಯುತ್ತಿದೆ. ಪ್ರಸ್ತುತ ವೀರಾಜಪೇಟೆ ವಿಭಾಗದಲ್ಲಿ ಈ ಕಾರ್ಯಾಚರಣೆಯನ್ನು ಅರಣ್ಯ ಇಲಾಖೆ ಡೆಹರಾಡೂನ್‍ನ `ವೈಲ್ಡ್ ಲೈಫ್’ ಇನ್ಸ್‍ಟಿಟ್ಯೂಷನ್‍ನ ತಜ್ಞರ ಸಹಕಾರದೊಂದಿಗೆ ನಡೆಸುತ್ತಿದೆ. ಈಗಾಗಲೇ ಎರಡು ಕಾಡಾನೆಗಳಿಗೆ ಈ ರೇಡಿಯೋ ಕಾಲರ್ ಅನ್ನು ಯಶಸ್ವಿಯಾಗಿ ಅಳವಡಿಸಲಾಗಿದೆ.

ಆನೆಗಳ ಗುಂಪಿನಲ್ಲಿ `ಲೀಡರ್’ನಂತಿರುವ ಆನೆಗಳನ್ನು ಗುರುತಿಸಿ, ಇದಕ್ಕೆ ಈ ತಂತ್ರಜ್ಞಾನವನ್ನು ಅಳವಡಿಸಲಾಗುತ್ತಿದೆ. ಅರಣ್ಯ ಇಲಾಖೆಯಿಂದ ಕಳೆದ ಮೂರು ವರ್ಷಗಳ ಹಿಂದೆ ಈ ರೇಡಿಯೋ ಕಾಲರ್ ಅನ್ನು ಅಳವಡಿಸಲಾಗಿತ್ತು. ಆದರೆ ಇದೀಗ ಈ ರೇಡಿಯೋ ಕಾಲರ್‍ನ `ಸಿಗ್ನಲ್’ನ ಸಾಮಥ್ರ್ಯ ಕಡಿಮೆಯಾಗಿರುವದು ಹಾಗೂ ಆನೆಗಳ ತಿರುಗಾಟದ ನಡುವೆ ಕೆಲವೊಂದು ತುಂಡರಿಸಿ ಅರಣ್ಯದಲ್ಲಿ ಬಿದ್ದು ಹೋಗಿರುವ ಕಾರಣದಿಂದಾಗಿ ಇದನ್ನು ಪ್ರಸ್ತುತ ಇನ್ನಷ್ಟು ಆಧುನಿಕ ತಂತ್ರಜ್ಞಾನದ ಸಹಿತವಾಗಿ ಅಳವಡಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆದಿದೆ. ಸದ್ಯದ ಮಟ್ಟಿಗೆ ವೀರಾಜಪೇಟೆ ವಿಭಾಗದಲ್ಲಿ ಕಾಡಾನೆಗಳ ಹಿಂಡು ಅಧಿಕವಾಗಿದ್ದು, ಆನೆಗಳ ಉಪಟಳ ಹೆಚ್ಚುತ್ತಿರುವದರಿಂದ ಮೊದಲಿಗೆ ಈ ವಿಭಾಗದಲ್ಲಿ ಈ ಕೆಲಸ ಮಾಡಲಾಗುತ್ತಿದೆ. ಈ ವಿಭಾಗದಲ್ಲಿ ಸದ್ಯಕ್ಕೆ ಎರಡು ಕಾಡಾನೆಗಳಿಗೆ ಇದನ್ನು ಜೋಡಿಸಲಾಗಿದ್ದು, ಇನ್ನೂ ನಾಲ್ಕೈದು ಆನೆಗಳನ್ನು ಗುರುತಿಸಿ ರೇಡಿಯೋ ಕಾಲರ್ ಅಳವಡಿಸಲಾಗುತ್ತದೆ ಎಂದು ತಿಳಿದು ಬಂದಿದೆ. ಮಡಿಕೇರಿ ಹಾಗೂ ಸೋಮವಾರಪೇಟೆ ವಿಭಾಗದಲ್ಲಿ ಈ ಕೆಲಸ ಮುಂದಿನ ದಿನಗಳಲ್ಲಿ ನಡೆಯಲಿದೆ. ಜರ್ಮನ್ ತಂತ್ರಜ್ಞಾನದೊಂದಿಗೆ, ಡೆಹರಾಡೂನ್‍ನ ವೈಲ್ಡ್‍ಲೈಫ್ ಇನ್ಸ್‍ಟಿಟ್ಯೂಟ್ ಕರ್ನಾಟಕ ಸರಕಾರದೊಂದಿಗೆ ಒಡಂಬಡಿಕೆಯ ಮೂಲಕ ಈ ಕಾರ್ಯಾಚರಣೆಗೆ ಮುಂದಾಗಿದೆ. ಡಾ|| ಸನತ್ ಮುಳಿಯ ನೇತೃತ್ವದ ತಂಡ ಸ್ಥಳೀಯ ಅರಣ್ಯ ಇಲಾಖೆಯ ಸಹಕಾರದೊಂದಿಗೆ ಇದರಲ್ಲಿ ಕಾರ್ಯತತ್ಪರವಾಗಿದೆ ಎಂದು ವೀರಾಜಪೇಟೆ ಡಿ.ಎಫ್.ಓ ರೋಶಿನಿ ಅವರು ಖಚಿತ ಪಡಿಸಿದ್ದಾರೆ.

ಅಳವಡಿಕೆ ಹೇಗೆ....?

ಈ ಹಿಂದೆ ಅಳವಡಿಸಲಾಗಿದ್ದ ರೇಡಿಯೋ ಕಾಲರ್ ಇದೀಗ ತನ್ನ ಸಾಮಥ್ರ್ಯ ಕಳೆದುಕೊಂಡಿದೆ. ಈ ಹಿನ್ನೆಲೆಯಲ್ಲಿ ಪ್ರಸ್ತುತ ಜರ್ಮನ್ ತಂತ್ರಜ್ಞಾನವನ್ನು ಬಳಸಲಾಗುತ್ತಿದೆ. ಬ್ಯಾಟರಿ ಆಪರೇಟೆಡ್ ಮೊಬೈಲ್ ಮಾದರಿಯ ಪ್ರತ್ಯೇಕ ಆ್ಯಪ್ ಅನ್ನು ಚಾಲನೆಗೊಳಿಸಿ ರೀ ಕಾಲರಿಂಗ್ ಮಾಡಲಾಗುತ್ತಿದೆ.

ಈ ಪಟ್ಟಿ ಸುಮಾರು 8 ಕೆ.ಜಿ.ಯಷ್ಟು ತೂಕವಿದ್ದು, ಆನೆಯ ಕತ್ತಿನ ಭಾಗಕ್ಕೆ ಅಳವಡಿಸಲಾಗುವದು. ಇದರ ಬಳಿಕ ಆನೆ ಯಾವ ಸ್ಥಳದಲ್ಲಿ ಇದೆ ಎಂಬುದನ್ನು ಅರಿತುಕೊಂಡು ಸ್ಥಳೀಯ ಜನತೆಗೆ, ಬೆಳೆಗಾರರಿಗೆ, ಕಾರ್ಮಿಕರಿಗೆ ಮೊದಲೇ ಮಾಹಿತಿ ನೀಡಿ ಮುಂಜಾಗ್ರತೆ ವಹಿಸಲು ಇಲಾಖೆ ಪ್ರಯತ್ನ ನಡೆಸಲಿದೆ. ವ್ಯಾಟ್ಸಾಪ್ ಗುಂಪುಗಳು ಆರ್.ಆರ್.ಟಿ ತಂಡದ ಮೂಲಕ ಮುಂಜಾಗ್ರತೆ ನೀಡಲಾಗುವದು.

ಇಲಾಖೆಯ ಅಧ್ಯಯನದ ಪ್ರಕಾರ ಪ್ರಸ್ತುತ ಆನೆಗಳು ಗುಂಪು ಗುಂಪಾಗಿ ಕಾಡಿನಿಂದ ನಾಡಿನತ್ತ ಲಗ್ಗೆ ಇಡುತ್ತಿವೆ. ಈ ರೀತಿಯ ಹಲವು ಹಿಂಡುಗಳನ್ನು ಗುರುತಿಸಲಾಗುತ್ತಿದೆ.

ಕಾರ್ಯಾಚರಣೆ ಹೀಗೆ......

ಸಹಜವಾಗಿ ಗುಂಪಿನಲ್ಲಿ ಒಂದು ಹೆಣ್ಣಾನೆ ತಂಡದ ಲೀಡರ್‍ನಂತಿರುತ್ತದೆ. ಇದನ್ನು ಗುರುತಿಸಿ ಪತ್ತೆ ಮಾಡಲಾಗುವದು. ಬಳಿಕ ಈ ಗುಂಪಿನೊಂದಿಗೆ ಸಾಕಾನೆಗಳನ್ನು ಸೇರಿಸಲಾಗುವದು. ಪರಿಣತರ ಮೂಲಕ ಗುರುತಿಸಿದ ನಿರ್ದಿಷ್ಟ ಆನೆಗೆ ಮತ್ತು ಬರುವ ರೀತಿಯ ಔಷಧಿಯನ್ನು ನೀಡಲಾಗುತ್ತದೆ. ಇದಾದ ನಂತರ ಮತ್ತಿಗೆ ಒಳಪಡುವ ಆನೆಯನ್ನು ಅದರ ಗುಂಪಿನಿಂದ ಸಾಕಾನೆಗಳ ನೆರವಿನೊಂದಿಗೆ ದೂರ ಮಾಡಲಾಗುವದು. ಸುಮಾರು ಎಂಟತ್ತು ಕಿ.ಮೀ ಕ್ರಮಿಸಿದ ನಂತರ ಇದಕ್ಕೆ ಮುಂದುವರಿಯಲು ಅಸಾಧ್ಯವಾದಾಗ ಸಾಕಾನೆಗಳು ಅದನ್ನು ತಮ್ಮ ನಡುವೆ ಸಿಲುಕಿಸಿಕೊಳ್ಳುತ್ತವೆ. ಈ ಸಂದರ್ಭ ಕಾಡಾನೆಯ ಮುಖದ ಭಾಗಕ್ಕೆ ಕಪ್ಪು ಬಟ್ಟೆಯನ್ನು ಸುತ್ತಿ ಏನಾಗುತ್ತಿದೆ ಎಂದು ಅರಿವಾಗದಂತೆ ತ್ವರಿತಗತಿಯಲ್ಲಿ ರೇಡಿಯೋ ಕಾಲರ್‍ನ ಪಟ್ಟಿಯನ್ನು ಅಳವಡಿಸಲಾಗುವದು. ಇದರ ಕಾರ್ಯನಿರ್ವಹಣೆಯನ್ನು ಖಚಿತ ಪಡಿಸಿಕೊಂಡ ಬಳಿಕ, ಅದರ ಮತ್ತು ಇಳಿಸುವ ಔಷಧಿ ಹಾಗೂ ಸಾಕಷ್ಟು ನೀರು ಹಾಕುವ ಮೂಲಕ ಅದು ಚೇತರಿಸುವಂತೆ ಮಾಡಿ ಬಿಡಲಾಗುತ್ತದೆ. ತಜ್ಞರ ತಂಡಕ್ಕೆ ಇಲಾಖಾ ಸಿಬ್ಬಂದಿಗಳು, ಮಾವುತರು ಸಹಕಾರ ನೀಡುತ್ತಾರೆ.

ಈ ರೇಡಿಯೋ ಕಾಲರ್ ಅಳವಡಿಕೆ ಬಳಿಕ ಈ ಆನೆಯ ಜಾಡನ್ನು ಆ್ಯಪ್ ಮೂಲಕ ಖಚಿತಪಡಿಸಿಕೊಳ್ಳಬಹುದಾಗಿದ್ದು, ಇದರೊಟ್ಟಿಗೆ ಎಷ್ಟು ಆನೆಗಳು ಇರಬಹುದೆಂದು ಅಂದಾಜಿಸಿ ಮುಂಜಾಗ್ರತೆಗೆ ಸೂಚನೆ ನೀಡುವ ಪ್ರಯತ್ನ ಇದಾಗಿದೆ. ಆನೆಗಳು ಭಾರೀ ಸೂಕ್ಷ್ಮ ಜೀವಿಗಳಾಗಿವೆ ಎನ್ನುತ್ತಾರೆ. ಇಲಾಖಾ ಪ್ರಮುಖರು ಹಾಗೂ ವನ್ಯ ಜೀವಿ ತಜ್ಞರು ರೇಡಿಯೋ ಕಾಲರ್ ಹೊಂದಿರುವ ಆನೆ ಹಾಗೂ ಇದರೊಂದಿಗಿರುವ ಗುಂಪಿಗೆ ಇಲಾಖೆ ಒಂದೊಂದು ಹೆಸರನ್ನು ಇಡುವ ಮೂಲಕ ಇವುಗಳ ಚಲನ-ವಲನವನ್ನು ಅರಿತುಕೊಳ್ಳುವದರೊಂದಿಗೆ, ಮಾನವ ಜೀವ ರಕ್ಷಣೆ

(ಮೊದಲ ಪುಟದಿಂದ) ಹಾಗೂ ಬೆಳೆಗಾರರ ಫಸಲಿನ ರಕ್ಷಣೆ ಬಗ್ಗೆ ಮಾಹಿತಿ ನೀಡಲಿದೆ.

1960-70ರ ದಶಕಕ್ಕೆ ಹೋಲಿಸಿದರೆ ಆನೆಗಳ ಕಾರಿಡಾರ್‍ಗೆ ತಡೆ, ಅರಣ್ಯಗಳು ಮರೆಯಾಗಿ ತೋಟವಾಗಿ ಪರಿವರ್ತನೆ ಯಾಗಿರುವದು ಆನೆಗಳು ಆಹಾರ ಅರಸಿ ನಾಡಿಗೆ ಬರಲು ಕಾರಣವಾಗುತ್ತಿದೆ. ಬಹುತೇಕ ಆನೆಗಳು “ವಿಸಿಟಿಂಗ್ ಎಲಿಫೆಂಟ್” ಗಳಾಗಿವೆ. ಇವು ನಾಡಿನಲ್ಲಿ ಖಚಿತವಾಗಿ ಆಹಾರ ಸಿಗುವುದರಿಂದ ಆಗಮಿಸಿ ಹಸಿವು ನೀಗಿಸಿಕೊಂಡು ಮತ್ತೆ ಅರಣ್ಯಕ್ಕೆ ತೆರಳುತ್ತವೆ. ಕೆಲವು ಆನೆಗಳು ಅಲ್ಲಲ್ಲೇ ಬೀಡು ಬಿಡುತ್ತಿವೆ. ಇದು ಕೇವಲ ಕೊಡಗು ಜಿಲ್ಲೆ ಮಾತ್ರವಲ್ಲ, ದೇಶದ ಇತರೆಡೆಗಳು ಹಾಗೂ ವಿದೇಶಗಳಲ್ಲಿನ ಸಾಮಾನ್ಯ ಸಮಸ್ಯೆಯಾಗಿ ಪರಿಣಮಿಸಿವೆ ಎಂದು ಇಲಾಖೆಯ ಪ್ರಮುಖರು ವಿಶ್ಲೇಷಿಸುತ್ತಾರೆ.