ಶನಿವಾರಸಂತೆ, ಜೂ. 1: ಶನಿವಾರಸಂತೆ ಗ್ರಾ.ಪಂ.ಯನ್ನು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿಸುವ ನಿಟ್ಟಿನಲ್ಲಿ 2007ರಲ್ಲಿ ಶನಿವಾರಸಂತೆ ಗ್ರಾ.ಪಂ. ವ್ಯಾಪ್ತಿಯಲ್ಲಿನ ಸುಮಾರು 420 ಎಕರೆ ಖಾಸಗಿ ಮತ್ತು ಸರಕಾರಿ ಜಾಗವನ್ನು ಶನಿವಾರಸಂತೆ ಗ್ರಾ.ಪಂ.ಗೆ ಒಳಪಡಿ ಸುವ ಸಲುವಾಗಿ ಭೂಮಾಪನ ಇಲಾಖೆಯಿಂದ ಸರ್ವೆ ಕಾರ್ಯ ನಡೆಸಲಾಗಿತ್ತು. ಆದರೆ ಸಿಟಿ ಸರ್ವೆಗೆ ಒಳಪಟ್ಟ ಅರ್ಜಿದಾರರಿಗೆ ಪ್ರಾಪರ್ಟಿ ಕಾರ್ಡ್ ವಿತರಣೆಯಾಗಿರಲಿಲ್ಲ. ಈ ಕುರಿತು ಅರ್ಜಿದಾರರು ಗ್ರಾ.ಪಂ.ಯ ಗ್ರಾಮಸಭೆಗಳಲ್ಲಿ ಮತ್ತು ಖಾಸಗಿ ಯಾಗಿ ಪ್ರಾಪರ್ಟಿ ಕಾರ್ಡ್ ವಿತರಣೆ ಮಾಡುವಂತೆ ಮನವಿ ಪತ್ರ ನೀಡುತ್ತಿದ್ದರು. ಸದರಿ ಗ್ರಾ.ಪಂ. ಯಿಂದ ಸಂಬಂಧಪಟ್ಟ ಭೂಮಾಪನ ಇಲಾಖೆಗೆ ದಶಕದಿಂದ ಪ್ರಾಪರ್ಟಿ ಕಾರ್ಡ್ ಅರ್ಜಿದಾರರ ದಾಖಲಾತಿ ಯನ್ನು ವಿಲೇವಾರಿ ಮಾಡಿರಲಿಲ್ಲ. ದಶಕದಿಂದ ಇಲ್ಲಿಯವರೆಗೆ ಶೇ.20ರಷ್ಟು ಅರ್ಜಿದಾರರ ದಾಖಲಾತಿ ವಿಲೇವಾರಿಯಾಗಿದ್ದು, ಪ್ರಾಪರ್ಟಿ ಕಾರ್ಡ್ ವಿತರಣೆ ಯಾಗಿದ್ದು, ಶೇ.80 ಅರ್ಜಿದಾರರ ದಾಖಲಾತಿ ವಿಲೇವಾರಿಯಾಗದೆ ಮತ್ತು ಪ್ರಕ್ರಿಯೆ ನೆನೆಗುದಿಗೆ ಬಿದ್ದಿದೆ.

ಭೂಮಾಪನ ಇಲಾಖೆ ವಿಳಂಬ ಮತ್ತು ದಾಖಲಾತಿ ವಿಲೇವಾರಿ ಪ್ರಕ್ರಿಯೆಯಲ್ಲಿ ಗೊಂದಲ ಇದ್ದ ಹಿನ್ನೆಲೆಯಲ್ಲಿ ಶನಿವಾರಸಂತೆ ಗ್ರಾ.ಪಂ.ಯಿಂದ ರಾಜ್ಯ ಭೂಮಾಪನ ಇಲಾಖೆಯ ಜಂಟಿ ನಿರ್ದೇಶಕರಿಗೆ ಮನವಿ ಪತ್ರ ನೀಡಲಾಗಿದ್ದ ಹಿನ್ನೆಲೆ ಯಲ್ಲಿ ಶುಕ್ರವಾರ ಶನಿವಾರಸಂತೆ ಗ್ರಾ.ಪಂ.ಗೆ ರಾಜ್ಯ ಭೂಮಾಪನ ಇಲಾಖೆ ಜಂಟಿ ನಿರ್ದೇಶಕ ಜಯಪ್ರಕಾಶ್ ಮತ್ತು ಇಲಾಖೆಯ ಅಧಿಕಾರಿಗಳು ಭೇಟಿ ನೀಡಿದರು. ನಂತರ ನಡೆದ ಸಭೆಯಲ್ಲಿ ಈಗಾಗಲೇ ಭೂಮಾಪನ ಇಲಾಖೆಯಿಂದ ನಗರ ಸರ್ವೆ ಕಾರ್ಯ ನಡೆದು ಪ್ರಾಪರ್ಟಿ ಕಾರ್ಡ್ ಅರ್ಜಿದಾರ ಫಲಾನುಭವಿ ಗಳು ಕಂದಾಯ ಇಲಾಖೆ, ಭೂಮಾಪನ ಇಲಾಖೆ ಸಂಬಂಧಪಟ್ಟ ಗ್ರಾ.ಪಂ.ಗೆ ಒಳಪಟ್ಟಿರುವ ಪಹಣಿಪತ್ರ, ಭೂಕಂದಾಯ ಸೇರಿದಂತೆ ಇತರ ದಾಖಲಾತಿಯನ್ನು ಲಗತ್ತಿಸಿದರೆ ವಿಲೇವಾರಿ ಮಾಡಲಾಗುತ್ತದೆ. ಅರ್ಜಿದಾರರ ಭೂ ದಾಖಲಾತಿ ಯನ್ನು ಪರಿಶೀಲನೆ ಮಾಡಿದ ಬಳಿಕ ಅರ್ಜಿದಾರರಿಗೆ ಪ್ರಾಪರ್ಟಿ ಕಾರ್ಡ್ ವಿತರಣೆ ಮಾಡಲು ಜಿಲ್ಲಾಧಿಕಾರಿ ಗಳಿಗೆ ಸಂಬಂಧಪಟ್ಟ ಭೂಮಾಪನ ಇಲಾಖೆ ಮನವಿ ನೀಡಲಾಗುತ್ತದೆ ಎಂದು ಜಂಟಿ ನಿರ್ದೇಶಕ ಜಯಪ್ರಕಾಶ್ ಸಭೆಯಲ್ಲಿ ಭರವಸೆ ನೀಡಿದರು. ಕೆಲವು ಅರ್ಜಿದಾರರು ಸರಕಾರಕ್ಕೆ ಒಳಪಟ್ಟ ರಸ್ತೆ ಮುಂತಾದ ಸರಕಾರದ ಜಾಗಕ್ಕೆ ಪ್ರಾಪರ್ಟಿ ಕಾರ್ಡ್ ನೀಡುವಂತೆ ಸಲ್ಲಿಸಿದ ಅರ್ಜಿಯನ್ನು ತೆರವುಗೊಳಿಸುವಂತೆ ಭೂಮಾಪನ ಇಲಾಖೆ ಅಧಿಕಾರಿ ಗಳಿಗೆ ತಾಕೀತು ಮಾಡಿದರು. 10ರಿಂದ 15 ಸೆಂಟು ಜಾಗವನ್ನು ಹೊಂದಿರುವ ಫಲಾನುಭವಿ ಅರ್ಜಿ ದಾರರ ದಾಖಲಾತಿ ಪರಿಶೀಲನೆ ಮಾಡಿ ಅಂತಹ ಫಲಾನುಭವಿಗಳಿಗೂ ಪ್ರಾಪರ್ಟಿ ಕಾರ್ಡ್ (ನಗರ ಹಕ್ಕುಪತ್ರ) ವಿತರಣೆ ಮಾಡುವಂತೆ ಗ್ರಾ.ಪಂ. ಸದಸ್ಯರು ಸಭೆಯಲ್ಲಿ ಮನವಿ ಮಾಡಿದರು. ವಿಲೇವಾರಿಯಾಗದ ಬಾಕಿಯಾಗಿರುವ ಅರ್ಜಿದಾರರ ದಾಖಲಾತಿ ಮತ್ತು ಭೂಮಾಪನ ಇಲಾಖೆಯಿಂದ ಜಿಲ್ಲಾಧಿಕಾರಿಗಳಿಗೆ ಅರ್ಜಿ ವಿಲೇವಾರಿ ನಡೆಸಿ ಅರ್ಜಿ ದಾರರಿಗೆ ಪ್ರಾಪರ್ಟಿ ಕಾರ್ಡ್ ವಿತರಣೆ ಮಾಡಿಕೊಡುವಂತೆ ಕೋರಿ ಮನವಿ ಪತ್ರವನ್ನು ತಕ್ಷಣವೆ ಜಿಲ್ಲಾಧಿಕಾರಿಗಳಿಗೆ ರವಾನಿಸುವಂತೆ ಸಭೆಯಲ್ಲಿ ತೀರ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಭೂಮಾಪನ ಇಲಾಖೆಯ ಹಿರಿಯ ಅಧಿಕಾರಿ ಗಳಾದ ಹರಿಶ್ಚಂದ್ರ, ವಿರೂಪಾಕ್ಷ, ಶನಿವಾರಸಂತೆ ಗ್ರಾ.ಪಂ. ಅಧ್ಯಕ್ಷ ಮಹಮದ್ ಗೌಸ್, ಪಿ.ಡಿ.ಓ. ಮೇದಪ್ಪ, ಸದಸ್ಯರಾದ ಸರ್ದಾರ್ ಅಹಮದ್, ಎಚ್.ಆರ್. ಹರೀಶ್ ಹಾಜರಿದ್ದರು.