ಸೋಮವಾರಪೇಟೆ, ಜೂ. 1: ಸೋಮವಾರಪೇಟೆಯಿಂದ ಮಡಿಕೇರಿ ಮಾರ್ಗವಾಗಿ ಸರ್ಕಾರಿ ಬಸ್‍ಗಳ ಸಂಚಾರಕ್ಕೆ ಕ್ರಮ ಕೈಗೊಳ್ಳಬೇಕೆಂದು ಕೆಎಸ್‍ಆರ್‍ಟಿಸಿ ಅಧಿಕಾರಿಗಳನ್ನು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಕೊರೊನಾ ಲಾಕ್‍ಡೌನ್‍ನಿಂದಾಗಿ ಖಾಸಗಿ ಬಸ್‍ಗಳ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದ್ದು, ಒಂದೆರಡು ಸರ್ಕಾರಿ ಬಸ್‍ಗಳು ಮಾತ್ರ ಈ ಮಾರ್ಗದಲ್ಲಿ ಸಂಚರಿಸುತ್ತಿವೆ. ಸೋಮವಾರಪೇಟೆಯಿಂದ ಮಡಿಕೇರಿ ವೀರಾಜಪೇಟೆ ಸೇರಿದಂತೆ ಇನ್ನಿತರ ಸ್ಥಳಗಳಿಗೆ ತೆರಳಲು ಬಸ್‍ಗಳ ಕೊರತೆ ಎದುರಾಗಿದ್ದು, ಈ ಬಗ್ಗೆ ಕೆಎಸ್‍ಆರ್‍ಟಿಸಿ ಅಧಿಕಾರಿಗಳು ಗಮನ ಹರಿಸಬೇಕೆಂದು ಆಗ್ರಹಿಸಿದ್ದಾರೆ.

ಸೋಮವಾರಪೇಟೆಯಿಂದ ಜಿಲ್ಲಾ ಕೇಂದ್ರ ಮಡಿಕೇರಿಗೆ ತೆರಳಲು ಬಸ್‍ಗಳ ಕೊರತೆಯಿದ್ದು, ದಿನಂಪ್ರತಿ ಸಾರ್ವಜನಿಕರು ತೊಂದರೆ ಎದುರಿಸುವಂತಾಗಿದೆ. ಕಚೇರಿ ಕೆಲಸಗಳಿಗೆ, ಖಾಸಗಿ ಕೆಲಸಗಳಿಗೆ ಸೇರಿದಂತೆ ಜಿಲ್ಲಾಸ್ಪತ್ರೆಗೆ ತೆರಳಲೂ ಸಹ ತೊಂದರೆಯಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ. ಸೋಮವಾರಪೇಟೆಯಿಂದ ಮಡಿಕೇರಿಗೆ ಬೆಳಿಗ್ಗೆ 8 ಗಂಟೆಗೆ ಒಂದು ಬಸ್ ತೆರಳುವದನ್ನು ಹೊರತುಪಡಿಸಿದರೆ ಉಳಿದಂತೆ ಸಂಜೆಯವರೆಗೂ ಬಸ್‍ಗಳಿಲ್ಲ. ಸಂಜೆ 5 ಗಂಟೆಗೆ ಮತ್ತೊಂದು ಬಸ್ ಮಡಿಕೇರಿಗೆ ತೆರಳುತ್ತದೆ ಎಂದು ಟೀಕಿಸಿದ್ದಾರೆ. ಬೆಳಿಗ್ಗೆ 8 ಗಂಟೆಯಿಂದ ಸಂಜೆ 5ಗಂಟೆಯವರೆಗೂ ಜಿಲ್ಲಾಕೇಂದ್ರಕ್ಕೆ ತೆರಳಲು ಯಾವದೇ ಬಸ್‍ಗಳಿಲ್ಲ. ಈ ಬಗ್ಗೆ ಯಾವೊಬ್ಬ ಜನಪ್ರತಿನಿಧಿ, ಕೆಎಸ್‍ಆರ್‍ಟಿಸಿ ಅಧಿಕಾರಿಗಳಾಗಲೀ ಗಮನ ಹರಿಸದಿರುವದು ದುರಂತ ಎಂದು ಸಾರ್ವಜನಿಕರು ಅಸಮಾಧಾನ ತೋರ್ಪಡಿಸುತ್ತಿದ್ದಾರೆ. ಕೊರೊನಾ ವೈರಸ್-ಮುಂಜಾಗ್ರತಾ ಕ್ರಮವಾಗಿ ಬಸ್‍ಗಳಲ್ಲೂ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕಾಗಿರುವದರಿಂದ ಪ್ರಯಾಣಿಕರು ಸಂಕಷ್ಟಕ್ಕೆ ಸಿಲುಕುವಂತಾಗಿದೆ. ತಕ್ಷಣಕ್ಕೆ ಬೆಳಿಗ್ಗೆ 9 ಗಂಟೆಗೆ ಸೋಮವಾರಪೇಟೆ-ಮಡಿಕೇರಿ ಮಾರ್ಗದಲ್ಲಿ ನೂತನ ಬಸ್ ಮಾರ್ಗವನ್ನು ಅಳವಡಿಸಬೇಕು. ಇತರ ಅವಧಿಯಲ್ಲೂ ಹೆಚ್ಚುವರಿ ಬಸ್‍ಗಳನ್ನು ಅಳವಡಿಸಲು ಕೆಎಸ್‍ಆರ್‍ಟಿಸಿ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂಬ ಆಗ್ರಹ ಕೇಳಿಬಂದಿದೆ.

- ವಿಜಯ್ ಹಾನಗಲ್