ವೀರಾಜಪೇಟೆ, ಮೇ 30: ವೀರಾಜಪೇಟೆ ಪಟ್ಟಣದಲ್ಲಿ ಎರಡು ಹುಚ್ಚು ನಾಯಿಗಳು ಇಂದು ಮೂರು ಮಂದಿಗೆ ಕಚ್ಚಿದ್ದು ಪಟ್ಟಣ ಪಂಚಾಯಿತಿ ಆರೋಗ್ಯ ವಿಭಾಗದ ಸಹಾಯಕರ 7ಮಂದಿ ತಂಡ ಅಪರಾಹ್ನ ಹರ ಸಾಹಸಪಟ್ಟು ಇಲ್ಲಿನ ಮೊಗರಗಲ್ಲಿ ಹಾಗೂ ಮೀನುಪೇಟೆಯಲ್ಲಿ ಎರಡು ಹುಚ್ಚು ನಾಯಿಗಳನ್ನು ಕೊಂದು ಹಾಕಿದೆ.

ನಿನ್ನೆದಿನ ನೌಕರರ ತಂಡ ಸಾರ್ವಜನಿಕರಿಗೆ ತೀವ್ರ ರೀತಿಯಲ್ಲಿ ಕಚ್ಚಿ ಕಾಟ ಕೊಡುತ್ತಿದ್ದ ಒಂದು ಹುಚ್ಚು ನಾಯಿಯನ್ನು ಕೊಂದಿದ್ದು, ಇದೇ ಹುಚ್ಚು ನಾಯಿ ವಿವಿಧ ಕಡೆ ಬೀದಿಗಳಲ್ಲಿರುವ ನಾಯಿಗಳನ್ನು ಕಚ್ಚಿದ್ದರಿಂದ ಈ ನಾಯಿಗಳಿಗೂ ಹುಚ್ಚು ಸೋಂಕು ತಗಲಿ ಸಾರ್ವಜನಿಕರನ್ನು ಕಚ್ಚಲು ಮುಂದಾಗುತ್ತಿತ್ತು. ಬೆಳಿಗ್ಗೆ ಇಲ್ಲಿನ ಮೊಗರ ಗಲ್ಲಿ, ವಿಜಯನಗರ ಹಾಗೂ ಮೀನುಪೇಟೆಯಲ್ಲಿಯೂ ತಲಾ ಒಬ್ಬರಿಗೆ ನಾಯಿ ಕಚ್ಚಿದ್ದು, ಇದರಿಂದ ಎಚ್ಚೆತ್ತ ಆರೋಗ್ಯ ನೌಕರರ ತಂಡ ಆರೋಗ್ಯ ವಿಭಾಗದ ಸಹಾಯಕ ಅಧಿಕಾರಿ ವೇಲ್‍ಮುರುಗನ್ ನೇತೃತ್ವದಲ್ಲಿ ಪಟ್ಟಣದಲ್ಲಿ ಎರಡು ಹುಚ್ಚುನಾಯಿಗಳನ್ನು ಪತ್ತೆ ಹಚ್ಚಿತು.

ಹುಚ್ಚು ಸೋಂಕು ತಗಲಿದ ನಾಯಿಗಳು ಸೇರಿದಂತೆ ಇತರ ಎಲ್ಲಾ ಅಲೆಮಾರಿ ನಾಯಿಗಳನ್ನು ಹಿಡಿಯಲು ಪಟ್ಟಣ ಪಂಚಾಯಿತಿ ಕ್ರಮ ಕೈಗೊಂಡಿದ್ದು ಇದಕ್ಕಾಗಿ ಪಟ್ಟಣ ಪಂಚಾಯಿತಿಯಲ್ಲಿ ಆರೋಗ್ಯ ವಿಭಾಗದಲ್ಲಿ ಪ್ರತ್ಯೇಕ ತಂಡ ಕಾರ್ಯೋನ್ಮುಖವಾಗಿರುವುದಾಗಿ ಮುಖ್ಯಾಧಿಕಾರಿ ಎ.ಎಂ.ಶ್ರೀಧರ್ ತಿಳಿಸಿದರು.