ಕೂಡಿಗೆ, ಮೇ 30: ಗುಡ್ಡೆಹೊಸೂರು sಸುತ್ತಮುತ್ತಲಿನ ಹಲವು ರೈತರು ಹಸುಗಳನ್ನು ಸಾಕಿ, ಹಾಲು ಕರೆದು ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಮಾರಾಟ ಮಾಡುತ್ತಾರೆ. ಆದರೆ, ಕಳೆದ ಹಲವು ದಿನಗಳಿಂದ ಅನೇಕ ಹಾಲು ಉತ್ಪಾದಕರು ಮಾರುತ್ತಿರುವ ಹಾಲಿನಲ್ಲಿ ಹಾಲಿನ ಗುಣಮಟ್ಟದ ಕೊರತೆ, ಕಳಪೆ ಹಾಲು, ಕೊಬ್ಬಿನ ಅಂಶದ ಕೊರತೆ ಇರುವ ಕಾರಣ ಆ ಹಾಲನ್ನು ಸಂಘದಲ್ಲಿ ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಕೊಡಗು ಜಿಲ್ಲಾ ಹಾಲು ಉತ್ಪಾದಕರ ಸಂಘಗಳ ವಿಸ್ತರಣಾಧಿಕಾರಿ ವೀಣಾ ತಿಳಿಸಿದ್ದಾರೆ.

ಕಳೆದ 15 ದಿನಗಳಿಂದ 30ಕ್ಕೂ ಹೆಚ್ಚು ರೈತರ ಹಸುವಿನ ಹಾಲಿನಲ್ಲಿ ಕೊಬ್ಬಿನ ಅಂಶ ಕಡಿಮೆ ಬರುತ್ತಿದೆ. ಅಳತೆ ಮಾಡುವ ಸಂದರ್ಭ, ಲ್ಯಾಕ್ಟೋಮೀಟರ್‍ನಲ್ಲಿ 28.5 ಡಿಗ್ರಿ ತೋರಿಸಿದರೆ ಗುಣಮಟ್ಟದ ಹಾಲು ಎಂದು ಪರಿಗಣಿಸಲಾಗುತ್ತದೆ. ಆದರೆ, ಕೆಲವು ದಿನಗಳಿಂದ ಈ ಭಾಗದ ಅನೇಕ ರೈತರು ತರುವ ಹಾಲು 26, 27 ಡಿಗ್ರಿ ಮಾತ್ರ ತೋರಿಸುತ್ತಿದೆ. ಈ ಹಾಲನ್ನು ಕೂಡಿಗೆ ಡೈರಿಗೆ ಕಳುಹಿಸಿದಾಗ ಕಳಪೆ ಹಾಲು ಎಂದು ಪರಿಗಣಿಸಿ ಕೇವಲ. ರೂ. 9 ಹಣವನ್ನು ಗುಡ್ಡೆಹೊಸೂರು ಹಾಲು ಉತ್ಪಾದಕರ ಸಹಕಾರಿ ಸಂಘಗಳಿಗೆ ನೀಡಲಾಗುತ್ತಿದೆ.

ಕಳೆದ 15 ದಿನಗಳಿಂದ 5941 ಲೀಟರ್ ಹಾಲು ಕಳಪೆ ಹಾಲು ಎಂದು ಡೈರಿಯಲ್ಲಿ ಪರಿಗಣಿಸಿ ಕಡಿಮೆ ಹಣವನ್ನು ಸಂಘಕ್ಕೆ ಸಂದಾಯಮಾಡಿರುತ್ತಾರೆ. ಆದರೂ ಸಹ ಹಾಲು ಉತ್ಪಾದಕ ರೈತರಿಗೆ ರೂ.27 ಜೊತೆಗೆ ವಿಶೇಷವಾಗಿ ಗುಡ್ಡೆಹೂಸೂರು ಹಾಲು ಉತ್ಪಾದಕರ ಸಹಕಾರ ಸಂಘವು ಒಂದು ರೂ ಸೇರಿಸಿ 28 ರೂಗಳನ್ನು ನೀಡುತ್ತಿದ್ದು ಸಂಘವು ನಷ್ಟ ಅನುಭವಿಸುತ್ತಿದೆ. ಇದರಿಂದಾಗಿ ಕಳೆದ ನಾಲ್ಕು ದಿನಗಳಿಂದ ರೈತರ ಹಾಲನ್ನು ವಾಪಸ್ ಕಳುಹಿಸಲಾಗಿದೆ. ಹಾಲು ಅಳತೆ ಮಾಡುವ ಸಂದರ್ಭದಲ್ಲಿ ತಾವು ಸಹ ಖುದ್ದಾಗಿ ಪರಿಶೀಲಿಸಿ ಹಾಲು ಉತ್ಪಾದಕರಿಗೆ ಹಾಲಿನ ಗುಣಮಟ್ಟ ಹೆಚ್ಚಿಸಿಕೊಳ್ಳಲು ಸಲಹೆಯನ್ನು ನೀಡಿರುತ್ತೇನೆ ಎಂದು ವೀಣಾ ತಿಳಿಸಿದ್ದಾರೆ.

ಪರಿಹಾರ ಕಂಡುಕೊಳ್ಳಲು ಸಲಹೆ : ಹಾಲು ಉತ್ಪಾದಕರು ತಮ್ಮ ಹಸುಗಳಿಗೆ ನೀಡುವ ಪಶು ಆಹಾರದÀ ಬಗ್ಗೆ ಗಮನಹರಿಸಬೇಕು. ಖನಿಜ ಅಂಶದ ಆಹಾರವನ್ನು ಪಶು ಆಹಾರದ ಜೊತೆಗೆ ಸೇರಿಸಿ ನೀಡಬೇಕು. ರೈತರು ಹಾಸನ ಹಾಲು ಒಕ್ಕೂಟದ ಪಶು ವೈದ್ಯಾಧಿಕಾರಿಗಳ ಭೇಟಿಯ ಸಂದರ್ಭ ಹಸುಗಳನ್ನು ಪರೀಕ್ಷಿಸಿ ಕೊಳ್ಳಬೇಕು. ಇದರ ಜೊತೆಯಲ್ಲಿ ಅನೇಕ ತರಬೇತಿ ಕಾರ್ಯಕ್ರಮ ಗಳನ್ನೂ ನೀಡಲಾಗುತ್ತಿದ್ದು, ಸದುಪಯೋಗ ಪಡೆದು ಕೊಳ್ಳಬೇಕಾಗಿದೆ ಎಂದು ವೀಣಾ ಸಲಹೆ ನೀಡಿದ್ದಾರೆ.

- ಕೆ.ಕೆ. ನಾಗರಾಜ ಶೆಟ್ಟಿ