ತಾ. 28 ರಂದು “ಶಕ್ತಿ”ಯಲ್ಲಿ ಪ್ರಕಟಗೊಂಡ ಬ್ರಹ್ಮಾಂಡ ಗುರೂಜಿ ಅವರ “ಕೊಡಗು ನೆಲಸಮವಾಗುತ್ತದೆ” ಎನ್ನುವ ಭಯಪೂರಿತ ಭವಿಷ್ಯ ವಾಣಿ ವಿರುದ್ಧ ಪ್ರಧಾನ ಸಂಪಾದಕ ಜಿ.ರಾಜೇಂದ್ರ ಅವರು ಬರೆದ ಸಂಪಾದಕೀಯಕ್ಕೆ ಈ ಕೆಳಗಿನ ಪ್ರಮುಖರು ಪ್ರತಿಕ್ರಿಯ ವ್ಯಕ್ತಪಡಿಸಿದ್ದಾರೆ. ಕೆಲವರ ಬರಹಗಳನ್ನು ಮಾತ್ರ ಪ್ರಕಟಿಸಲಾಗಿದ್ದು ಉಳಿದಂತೆ ಸಂಪಾದಕೀಯವನ್ನು ಮೆಚ್ಚಿದವರ ಹೆಸರುಗಳನ್ನು ಮಾತ್ರ ನೀಡಲಾಗಿದೆ. ಆ ಪೈಕಿ ಕೊಡಗಿನವರೇ ಅಲ್ಲದೆ ಕೆಲವರು ಬೇರೆ ಜಿಲ್ಲೆಯವರೂ ಇದ್ದಾರೆ.

ಉತ್ತಮ ಬರಹ.. ಪ್ರಕೃತಿಯಲ್ಲಿ ಉಂಟಾಗುವ ಏರುಪೇರುಗಳನ್ನು ಭೂಗೋಳಶಾಸ್ತ್ರಜ್ಞರು ಅಥವಾ ಭೂಗರ್ಭಶಾಸ್ತ್ರಜ್ಞರೇ ಏನೂ ಹೇಳಲು ಬರುವುದಿಲ್ಲ. ಅಂತಹುದರಲ್ಲಿ ಯಾವುದೇ ವಿಜ್ಞಾನ ಅಥವಾ ತಂತ್ರಜ್ಞಾನದ ಆಧಾರವಿಲ್ಲದೆ ಮೂಢನಂಬಿಕೆ ಮೇಲೆ ಮಾತನಾಡುವ ಸ್ವಾಮೀಜಿಗಳಿಗೆ ಬರವಣಿಗೆ ಮೂಲಕ ತಕ್ಕ ಉತ್ತರ ನೀಡಿದ್ದೀರಿ.

- ಸಿದ್ದರಾಜು ಬೆಳ್ಳಯ್ಯ, ಉಪನ್ಯಾಸಕರು.

ಬ್ರಹ್ಮಾಂಡ ಸಂಪಾದಕೀಯ ವಿಚಾರಪ್ರಚೋದಕವೂ ಸಕಾಲಿಕವೂ ಆಗಿತ್ತು.

- ಡಾ. ಉದಯಶಂಕರ್, ಮಡಿಕೇರಿ.

ತುಂಬಾ ಅರ್ಥಪೂರ್ಣವಾಗಿದೆ: ಹೌದು... ಕೊಡಗು ಕಾವೇರಮ್ಮನ ಪುಣ್ಯನೆಲ. ಕೊಡಗಿಗೆ ಅದರದೇಯಾದ ಇತಿಹಾಸವಿದೆ ಹಾಗೂ ಈ ನೆಲಕ್ಕೆ ವಿಶೇಷವಾದ ಶಕ್ತಿ ಕೂಡ ಇದೆ.

ಈ ನೆಲದ ಮಕ್ಕಳಿಗೂ ಕೂಡ ಆ ತಾಯಿಯ ಕೃಪೆ ಇದೆ, ಯಾರೋ ಬೂಟಾಟಿಕೆಯ ಸ್ವಾಮೀಜಿ ಹೇಳಿದರು ಹಾಗೂ ಭವಿಷ್ಯ ನುಡಿದರು ಎಂದು ಜಿಲ್ಲೆಯ ಮಂದಿ ಆತಂಕ ಪಡುವ ಅಗತ್ಯವಿಲ್ಲ ಹಾಗೂ ಕಾವೇರಮ್ಮನ ಮುಂದೆ ಇತರ ಯಾವುದೇ ದೇವಾನುದೇವತೆಗಳಿಗೆ ಹೋಮ, ಹವನ, ಪೂಜೆ ಪುನಸ್ಕಾರ ಆರ್ಪಿಸುವ ಅಗತ್ಯ ಕೂಡ ಇಲ್ಲ.

ಆ ತಾಯಿ ಕಾವೇರಮ್ಮ ಹಾಗೂ ಇಗ್ಗುತಪ್ಪನ ಕೃಪೆ ಕೊಡಗಿಗೆ ಯಾವತ್ತಿಗೂ ಇದ್ದೇ ಇದೆ. ಕಳೆದೆರಡು ವರ್ಷದ ಜಲಪ್ರಳಯದಿಂದ ಕೊಡಗಿನ ಕೆಲವು ಭಾಗಗಳು ಸಂಕಷ್ಟವನ್ನು ಅನುಭವಿಸಿರಬಹುದು, ಒಂದಷ್ಟು ಜನರು ಸರ್ವಸ್ವವನ್ನೂ ಕಳೆದುಕೊಂಡಿರಬಹುದು, ಆದರೆ ಸಂಪೂರ್ಣ ಕೊಡಗು ನೆಲಸಮವಾಗಿಲ್ಲ. ಕೊಡಗಿಗೆ ವಿಶೇಷ ಶಕ್ತಿ ಇದೆ ಎನ್ನುವುದಕ್ಕೆ ಇದೇ ಸಾಕ್ಷಿ, ಕಳೆದೆರಡು ವರ್ಷದ ಜಲಪ್ರಳಯ ಇತರ ಜಿಲ್ಲೆಯಲ್ಲಾಗಿದ್ದರೆ ಅಲ್ಲಿನ ಜನರು ಮೇಲೆ ಏಳಲು ಸಾಧ್ಯವಿರುತ್ತಿರಲಿಲ್ಲ,

ಆದರೆ ಕೊಡಗಿನ ಮಂದಿಗೆ ಬೂದಿಯಿಂದಲೂ ಎದ್ದು ಬರುವ ತಾಕತ್ತು ಹಾಗೂ ದೈವಿಕ ಶಕ್ತಿ ಇದೆ; ಅದೇ ಕೊಡಗಿನ ಕಾವೇರಮ್ಮನ ಶಕ್ತಿ. ಗೌರವಾನ್ವಿತ ಸ್ವಾಮೀಜಿಯವರೇ... ನಿಮ್ಮ ಭವಿಷ್ಯ ನೆಟ್ಟಗಿದ್ದರೆ ನೀವು ‘ಬಿಗ್ಬಾಸ್’ನಲ್ಲಿ ಏಕೆ ಗೆಲುವು ಸಾಧಿಸಿಲ್ಲ, ಕಳೆದೆರಡು ವರ್ಷ ಜಲಪ್ರಳಯದ ಭವಿಷ್ಯವನ್ನು ಏಕೆ ಮುಂಚಿತವಾಗಿ ನುಡಿಯಲಿಲ್ಲ. ಇದೀಗ ದೇಶವನ್ನು ವ್ಯಾಪಿಸಿರುವ ಕೊರೊನ ಹೆಮ್ಮಾರಿಯ ಬಗ್ಗೆ ಏಕೆ ಮೊದಲೆ ತಿಳಿಸಲಿಲ್ಲ, ಹಾಗೂ ಇದನ್ನು ಕಡಿಮೆ ಮಾಡಲು ಅಥವ ನಿಲ್ಲಿಸಲು ಏಕೆ ಹೋಮ ಹವನ ಮಾಡಿಲ್ಲ?

ಇಂತಹ ಹೇಳಿಕೆಗಳನ್ನು ನೀಡಿ ಜನರಲ್ಲಿ ಭಯದ ವಾತಾವರಣ ಸೃಷ್ಟಿ ಮಾಡುವ ಬದಲು ಮೊದಲು ನಿಮ್ಮ ಭವಿಷ್ಯವನ್ನು ಸರಿ ಮಾಡಿಕೊಳ್ಳಿ. ಇಲ್ಲದಿದ್ದರೆ ಮೂಢನಂಬಿಕೆಯಿಂದ ಜನರಿಗೆ ಭಯ ಹುಟ್ಟಿಸುತ್ತಿದ್ದಾರೆಂದು ನಿಮ್ಮ ಮೇಲೆ ದೂರು ನೀಡಬೇಕಾಗುತ್ತದೆ.

ಮೊದಲು ಇಂತಹ ಬೂಟಾಟಿಕೆ ಮಾತುಗಳನ್ನು ಬಿಡಿ. ಈತನ ಮೇಲೆ ಒಂದಲ್ಲಾ ಹತ್ತಾರು ಕೇಸು ದಾಖಲಿಸಬೇಕಿದೆ.

- ಚಮ್ಮಟೀರ ಪ್ರವೀಣ್ ಉತ್ತಪ್ಪ, ಸಂಪಾದಕ, ಕೊಡಗು ವಾರ್ತೆ.

ನಂಬಿಕೆ ವ್ಯಕ್ತಿಗತವಾದುದು: ಜ್ಯೋತಿಷ್ಯ ಎನ್ನುವದು ಗಣಿತ ಲೆಕ್ಕಾಚಾರಗಳ ಒಂದು ಸರಳ ವಿಜ್ಞಾನ. ಅದರ ಮೇಲಿನ ನಂಬಿಕೆ ವ್ಯಕ್ತಿಗತವಾದುದು. ಜ್ಯೋತಿಷಿಗಳು ತಮ್ಮ ಜೀವನವನ್ನೇ ರೂಪಿಸಿಕೊಳ್ಳಲು ಅಶಕ್ತರಾಗಿರುತ್ತಾರೆ. ಆದುದರಿಂದ, ಅವರು ದೈವ ಪುರುಷರೂ ಅಲ್ಲ ಅಥವಾ ವಿಶ್ವದ ಆಗು ಹೋಗುಗಳನ್ನು ಬದಲಿಸಲು ಶಕ್ತರಾದವರಲ್ಲ. ಜ್ಯೋತಿಷ್ಯವು ಲೆಕ್ಕಾಚಾರಗಳನ್ನಾಧರಿಸಿದ್ದು, ಪ್ರಾಚೀನ ಕಲಿಕೆಯ ಪದ್ಧತಿಯದ್ದಾಗಿದೆ. ಇಸಿಜಿಯಂತಹ ವೈದ್ಯಕೀಯ ಪರೀಕ್ಷೆಯಲ್ಲಿ ಹೃದಯದ ರೋಗ ಇಲ್ಲ ಎಂದು ವರದಿ ಬಂದಿದ್ದವರೂ ಸಾವಿಗೀಡಾಗಿರುವ ಪ್ರಕರಣಗಳಿವೆ. ಹೀಗಿರುವಾಗ ಇಂತಹ ಪೊಳ್ಳು ಜ್ಯೋತಿಷಿಗಳ ಮಾತು ಯಾವ ಲೆಕ್ಕ?

- ಕೊಲ್ಲೀರ ಉಮೇಶ್ ಮುದ್ದಪ್ಪ, ಗೋಣಿಕೊಪ್ಪಲು.

ಸರಕಾರದಿಂದ ಕಠಿಣ ಕ್ರಮ ಅಗತ್ಯ: “ಶಕ್ತಿ”ಯ ತಾ. 28 ರ ಸಂಚಿಕೆಯಲ್ಲಿ ಜಿ. ರಾಜೇಂದ್ರ ಅವರ ಸಂಪಾದಕೀಯದಲ್ಲಿ ಬ್ರಹ್ಮಾಂಡ ಗುರುವಿನ ಕುರಿತಾಗಿ ಬರೆದ ಅಭಿಪ್ರಾಯದಿಂದ ಕೊಡಗಿನ ಜನ ಜಾಗೃತಿಗೊಳ್ಳುವಂತಾಗಿದೆ.

ಕೊಡಗಿನ ಅಸ್ತಿತ್ವವೇ ನಾಶವಾಗುತ್ತದೆ ಎಂದು ತಲೆ ತಿರುಕನಂತೆ ಅಬ್ಬರಿಸಿ ಬೊಬ್ಬಿಟ್ಟ ಬ್ರಹ್ಮಾಂಡ ಗುರುವಿನ ಕಪಟ ಚಾಲಾಕಿತನವನ್ನು ಧಿಕ್ಕರಿಸಿ ಅದನ್ನು ಜನ ಜಾಗೃತಿ ಮೂಲಕ ಖಂಡಿಸಲಾಗಿದೆ. ಈ ಕಪಟ ಗುರುವಿನ ಬಗ್ಗೆ ಕಠಿಣ ಕ್ರಮವನ್ನು ಜನಾಂದೋಲನದ ಮೂಲಕ ಕೈಗೊಳ್ಳುವಂತೆ ಹಾಗೂ ಸರಕಾರಗಳ ಮೇಲೆ ಒತ್ತಡ ಹೇರಬೇಕೆಂಬದರ ಕುರಿತಂತೆ ಸಕಾರಣಗಳ ಸಹಿತ ಎಚ್ಚರಿಸಿದ “ಶಕ್ತಿ”ಯ ನಿಲುವು ಸ್ವಾಗತಾರ್ಹ.

ಈ ದಿಸೆಯಲ್ಲಿ ದ.ಕೊಡಗಿನ ಶ್ರೀಮಂಗಲದಲ್ಲಿ ಹಲವು ಬೆಳೆಗಾರರು ಪೊಲೀಸರಿಗೆ ದೂರು ನೀಡಿರುವದು ಕೂಡ ಸಮಯೋಚಿತ. ಮುಂದಿನ ಹಂತದಲ್ಲಿ ಕೊಡಗಿನ ಎಲ್ಲ ಸಮುದಾಯದ ಸಂಘಟನೆಗಳು ಸಹ ಇದರ ಬಗ್ಗೆ ಗಡುಸಾದ ಧ್ವನಿ ಎತ್ತುವಂತಾಗಬೇಕು.

ಗಂಡುಮೆಟ್ಟಿದ ಕೊಡಗಿಗೆ ಯಾವದೇ ಗಂಡಾಂತರ ಬಂದರೂ ಕೊಡಗಿನ ಅಧಿದೇವತೆ ತಾಯಿ ಕಾವೇರಿ ಪರಿಹರಿಸಿರುವ ಪುರಾಣ ಪ್ರಸಿದ್ಧ ಹಾಗೂ ಐತಿಹಾಸಿಕ ಉದಾಹರಣೆಗಳಿವೆ. ಜ್ಯೋತಿಷಿಯವರು ತನ್ನ ಬಾಯಿ ಬಡುಕುತನಕ್ಕಾಗಿ ಕೊಡಗಿಗೆ ಆಪತ್ತು ಎದುರಾಗುತ್ತದೆ ಎಂದೆಲ್ಲ ಹೇಳಿರುವದಕ್ಕೆ ಯಾವದೇ ಆಧಾರಗಳಿಲ್ಲ. ಆದರೆ, ಸರಳ-ಸಜ್ಜನಿಕೆಯ, ಉದಾರತೆಗೆ ಹೆಸರಾದ ಕೊಡಗಿನವರ ಮನೋಸ್ಥೈರ್ಯವನ್ನು ಕುಗ್ಗಿಸಲು ಇಂತಹ ಬೂಟಾಟಿಕೆಯ ಕಪಟ ಗುರುಗಳು ಕೊಡಗಿನ ಅಸ್ತಿತ್ವದ ವಿರುದ್ಧವೇ ಮಾತನಾಡಿರುವದು ಅಕ್ಷಮ್ಯ ಘೋರ ಅಪರಾಧ.

ಇಂತಹ ಹೇಳಿಕೆಗಾಗಿ ಈ ಸ್ವಯಂಘೋಷಿತ ಬ್ರಹ್ಮಾಂಡ ಗುರು ಕ್ಷಮೆ ಕೇಳಿದರೂ ಈ ಚಟ ಕಾಲಕ್ರಮೇಣ ಪುನರಾವರ್ತನೆಯಾದೀತು. ಹಾಗಾಗಿ ಸರಕಾರವೇ ಇಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತಾಗಬೇಕು. ಇಂತಹರನ್ನು ಈ ಸಮಗ್ರ ನಾಡಿನಿಂದಲೇ ಗಡೀಪಾರು ಮಾಡುವಂತಾಗಬೇಕು.

- ಬೈ.ಶ್ರೀ. ಪ್ರಕಾಶ್, ಮಡಿಕೇರಿ.

ಕಾವೇರಿ ತಕ್ಕ ಶಿಕ್ಷೆ ವಿಧಿಸಲಿ: ಬ್ರಹ್ಮಾಂಡ ಗುರೂಜಿಗಳೆಂದು ಸ್ವಯಂ ಘೋಷಿಸಿಕೊಂಡು ಭವಿಷ್ಯ ನುಡಿಯುತ್ತಿರುವ ಮಹಾನುಭಾವರೊಬ್ಬರು ಯಾವ ಆಧಾರದಲ್ಲಿ ಕೊಡಗು ಭೂಕಂಪನವಾಗಿ ಈ ವರ್ಷ ಮುಳುಗಿಹೋಗುತ್ತದೆ ಎಂದರು? ಇವರು ಭೂ ವಿಜ್ಞಾನಿಗಳೇ ಅಥವಾ ಖಗೋಳ ಗಣಿತದ ಜ್ಞಾನ ಇರುವವರೇ? ಕಾವೇರಿ ಜನ್ಮವೆತ್ತಿದ ಕೊಡಗು ಹಿಮಾಲಯ ಹುಟ್ಟುವದಕ್ಕೆ ಮೊದಲೇ ಇತ್ತೆಂದು ಭೂ ವಿಜ್ಞಾನವು ಹೇಳುತ್ತದೆ. ಅಂದರೆ ಕಾವೇರಿಯು ಗಂಗಾ ನದಿಗಿಂತ ಹಿರಿಯಳು. ಪುರಾತನ ಕಾಲದಲ್ಲಿ ಕಾವೇರಿಯು ಈಗ ಇರುವದಕ್ಕಿಂತ ಅಧಿಕ ವಿಸ್ತøತ ಪ್ರದೇಶಗಳಲ್ಲಿ ಹರಿಯುತ್ತಿದ್ದ ಬಗ್ಗೆ ಐತಿಹ್ಯಗಳಿವೆ. ವಾಲ್ಮೀಕಿ ಮಹರ್ಷಿಗಳು ರಾಮಾಯಣ ಮಹಾಕಾವ್ಯದಲ್ಲಿ ಸಹ್ಯಾದ್ರಿಯ ಕೊಡಗಿನ ಭಾಗಕ್ಕೆ ಹೋಗುವ ದಾರಿಯನ್ನು ಅಲ್ಲಿ ಬೀಸುವ ಗಂಧದ ಪರಿಮಳವು ತೋರಿಸುತ್ತದೆ ಎಂದು ವರ್ಣಿಸುತ್ತಾರೆ. ಇಂತಹ ಐತಿಹ್ಯವುಳ್ಳ ದೇವ ಸನ್ನಿಧಿಯಾದ ಬ್ರಹ್ಮ ದೇಶವೆಂದೇ ಹೆಸರಾದ ಕೊಡಗನ್ನು, ಕೊಡಗಿನ ಜನರನ್ನು ಮಾನಸಿಕವಾಗಿ ಹಿಂಸಿಸಲು ಪ್ರಯತ್ನಿಸಿದ ಅಜ್ಞಾನಿಗೆ ಧಿಕ್ಕಾರವಿರಲಿ. ನಮ್ಮ ಕಾವೇರಿ ತಾಯಿಯು ಅವರಿಗೆ ತಕ್ಕ ಶಿಕ್ಷೆ ವಿಧಿಸಲಿ.

- ಕರೋಟಿರ ಶಶಿ ಸುಬ್ರಮಣಿ, ವೀರಾಜಪೇಟೆ.

ಎಲ್ಲರೂ ಖಂಡಿಸುವಂತಾಗಬೇಕು

ತಾ. 27 ರ “ಶಕ್ತಿ”ಯಲ್ಲಿ ಬ್ರಹ್ಮಾಂಡ ಗುರೂಜಿ ಎಂಬವರ ವಿರುದ್ಧ ಪೊಲೀಸ್ ದೂರು ಎಂಬ ಸುದ್ದಿ ನೋಡಿ ಬಹಳ ಸಂತೋಷವಾಯಿತು. ಏಕೆಂದರೆ ಇವರು ಬ್ರ್ರಹ್ಮಾಂಡ ಗುರೂಜಿ ಎಂಬ ಹೆಸರನ್ನಿಟ್ಟುಕೊಂಡು ಇಡೀ ವಿಶ್ವವನ್ನೇ ತಮ್ಮ ಮಾತುಗಳಿಂದ ಹೆದರಿಸುವ ನಿಪುಣರೆಂದರೆ ತಪ್ಪಾಗಲಾರದು. ಈ ಹಿಂದೆ ಇಡೀ ವಿಶ್ವವೇ ಪ್ರಳಯದಲ್ಲಿ ಮುಳುಗಿ ಹೋಗುತ್ತದೆಂದು ಭವಿಷ್ಯ ನುಡಿದಿದ್ದುದನ್ನು ಇಲ್ಲಿ ಸ್ಮರಿಸಬಹುದು. ಈಗ ಕೊಡಗು ಜಿಲ್ಲೆ ಮುಂದಿನ ದಿನಗಳಲ್ಲಿ ಭಾರೀ ಭೂಕಂಪದಿಂದ ನೆಲಸಮವಾಗಲಿದೆ ಎಂಬ ಭವಿಷ್ಯ ನುಡಿದು ಕೊಡಗಿನ ಜನರನ್ನು ಭಯ ಪಡುವಂತೆ ಮಾಡಿರುವದು ಆತಂಕಕ್ಕೆ ಎಡೆ ಮಾಡಿದೆ. ಇವರ ಭವಿಷ್ಯ ವಾಣಿ ಆಧಾರ ರಹಿತವಾದುದಾಗಿದೆ. ಶ್ರೀಮಂಗಲದ ಬೆಳೆಗಾರರ ಒಕ್ಕೂಟವು ಇವರ ಮೇಲೆ ಕಾನೂನು ರೀತಿಯ ದಿಟ್ಟ ಕ್ರಮ ಕೈಗೊಂಡಿರುವದು ಸ್ವಾಗತಾರ್ಹ. ಅಲ್ಲದೆ, ಈ ಬಗ್ಗೆ ತಾ. 28 ರಂದು ಶಕ್ತಿ ದಿನ ಪತ್ರ್ರಿಕೆಯ ಪ್ರಧಾನ ಸಂಪಾದಕ ಜಿ,.ರಾಜೇಂದ್ರ ಅವರು ಪ್ರಕಟಿಸಿರುವ ಲೇಖನವು ಅರ್ಥಪೂರ್ಣ ಮತ್ತು ಪ್ರಶಂಸನೀಯ. ಪೊಳ್ಳು ನುಡಿ ಮೂಲಕ ಜನರನ್ನು ಭಯಪಡಿಸುವ ಇಂತಹ ಗುರೂಜಿಗಳಿಂದ ಸಮಾಜದ ಜನರ ಭವಿಷ್ಯಕ್ಕೆ ಮಾರ್ಗದರ್ಶಕವಾಗುತ್ತಿರುವ ಇತರ ಸ್ವಾಮೀಜಿಗಳಿಗೆ ಕಳಂಕ ಬರುವದರಲ್ಲಿ ಎರಡು ಮಾತಿಲ್ಲ. ಸುಳ್ಳು ಭವಿಷ್ಯ ನುಡಿಯುವ ಬ್ರಹ್ಮಾಂಡ ಗುರೂಜಿಯಿಂದ ಜನರು ದೂರವಿದ್ದಷ್ಟು ಸಮಾಜಕ್ಕೆ ಒಳ್ಳೆಯದು. ಸುಳ್ಳು ಭವಿಷ್ಯಗಳನ್ನು ನುಡಿದು ಜನರನ್ನು ತಪ್ಪು ದಾರಿಗೆಳೆಯುವ ಮತ್ತು ಭಯಪಡಿಸುವ ಯಾವದೇ ಸ್ವಾಮೀಜಿಗಳ ಬಗ್ಗೆ ಕಾನೂನು ರೀತಿಯ ಕ್ರಮ ಕೈಗೊಳ್ಳುವಂತಾಗಬೇಕು.

- ಎಸ್.ಬಿ. ದೊರೆ ಗಣಪತಿ, ನಿವೃತ್ತ ಎ.ಎಸ್.ಐ, ಗುಮ್ಮನಕೊಲ್ಲಿ.

ಸಂಪಾದಕೀಯದಲ್ಲಿ ಸಾತ್ವಿಕ ಆಕ್ರೋಶ ಸರಿಯಾಗಿ ವ್ಯಕ್ತವಾಗಿದೆ.

- ಆಶಾ ಹೆಗಡೆ, ಬೆಂಗಳೂರು.

ಉತ್ತಮ ಸಂಪಾದಕೀಯ. ಆದರೆ, ‘ಪಿಂಡಾಂಡ’ ಪದ ಪ್ರಯೋಗ “ಶಕ್ತಿ”ಯ ಭಾಷಾ ಗುಣಮಟ್ಟಕ್ಕೆ ಸಮರ್ಪಕವಾಗಿಲ್ಲ.

- ಉಷಾ ಆರ್. ಮಡಿಕೇರಿ

ಸಂಪಾದಕೀಯವನ್ನು ಮೆಚ್ಚಿದವರು

ಅಮ್ಮತ್ತಿಯ ಮಂಡೇಪಂಡ ಗೀತಾ ಮಂದಣ್ಣ, ಕುಶಾಲನಗರದ ಸುನೀತಾ, ಬೆಂಗಳೂರಿನ ಎನ್ ವಿ.ಜಿ.ಕೆ ಭಟ್, ಎಂಸಿ ರಾಜು, ಬಿ.ಜಿ. ರವಿಕುಮಾರ್ ಹಾಗೂ ಮನೆಯಪಂಡ ಪೊನ್ನಪ್ಪ, ಶ್ರೀನಗರದ ಇ.ಕೆ. ತಿಮ್ಮಪ್ಪ, ಸುಭಾಷ್ ತಾಳತ್ಮನೆ, ಹೊಸೊಕ್ಲು ಹೇಮರಾಜ್, ನೆರವಂಡ ಗೌತಂ ಅಚ್ಚಯ್ಯ, ಚಾನಲ್ ಕೂರ್ಗ್‍ನ ಶ್ರೀಧರ್ ನೆಲ್ಲಿತ್ತಾಯ, ಯಜಾಸ್ ದುದ್ದಿಯಂಡ, ಮೂವೇರ ಚಂದನ್ ಪೊನ್ನಪ್ಪ, ಡಾ. ರಾಧಿಕಾ, ಹರಿದಾಸ್ ಹರಿ ಕೊಡಗು, ನಿತ್ಯ ಆನಂದ, ಅಬ್ದಲ್ ಸಲೀಂ, ಸಿದ್ದಾಪುರದ ಎಂ.ಎ. ಅಜೀಜ್, ರೆಜಿತ್ಕುಮರ್ ಗುಹ್ಯ, ಉಷಾ ಪ್ರೀತಂ, ಜಿಲ್ಲಾ ಹೊಟೇಲ್ ಉದ್ಯಮಿಗಳ ಸಂಘದ ಅಧ್ಯಕ್ಷ ಬಿ.ಆರ್. ನಾಗೇಂದ್ರ ಪ್ರಸಾದ್, ಇಸ್ಮಾಯಿಲ್ ಕೆ.ಎಂ., ರಘುನಾಥ್ ಗೌಡ, ಕುಶಾಲನಗರದ ಚಂದ್ರಮೋಹನ್, ಯಜ್ಞೇಶ್ವರ ಐತಾಳ್, ಬಿದ್ದಂಡ ಜಗದೀಶ್ ಮಂದಣ್ಣ, ಹಾ.ತಿ. ಜಯಪ್ರಕಾಶ್, ಫಾರೂಕ್ ಅಹ್ಮದ್, ಸದಾಶಿವ ಶೆಟ್ಟಿ, ಅನ್ವೇಶ್ ಕೇಕುಣ್ಣಾಯ.