ನೇಪಾಳದ ನಕ್ಷೆಯಲ್ಲಿ ಭಾರತದ ಭಾಗ
ಕಠ್ಮಂಡು, ಮೇ 31: ಭಾರತದ ಮಿತ್ರ ರಾಷ್ಟ್ರವಾಗಿ ಗುರುತಿಸಿಕೊಂಡಿದ್ದ ನೆರೆಯ ನೇಪಾಳ ಇದೀಗ ಭಾರತದ ಭೂಭಾಗದ ಮೇಲೆ ಕಣ್ಣು ಹಾಕಿದ್ದು, ಭಾರತ ಭೂಭಾಗವನ್ನು ತನ್ನ ನಕಾಶೆಯಲ್ಲಿ ಸೇರಿಸುವ ಮಸೂದೆಯನ್ನು ಸಂಸತ್‍ನಲ್ಲಿ ಮಂಡಿಸಿದೆ. ದೇಶದ ನಕ್ಷೆಯನ್ನು ಬದಲಾಯಿಸುವ ಉದ್ದೇಶದೊಂದಿಗೆ ನೇಪಾಳ ಸರ್ಕಾರವು ಭಾನುವಾರ ಸಂವಿಧಾನ ತಿದ್ದುಪಡಿ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಿದ್ದು, ಭಾರತದ ಜೊತೆಗಿನ ಗಡಿ ವಿವಾದದ ನಡುವೆಯೇ ನೇಪಾಳ ಸರ್ಕಾರ ಈ ಕ್ರಮಕ್ಕೆ ಮುಂದಾಗಿರುವುದು ಆ ಸರ್ಕಾರದ ಉದ್ಧಟತನವನ್ನು ತೋರಿಸುತ್ತಿದೆ. ನೇಪಾಳದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಶಿವಮಯ ತುಂಬಹಾಂಗ್‍ಪೆ ಅವರು ನೇಪಾಳ ಸರ್ಕಾರದ ಪರವಾಗಿ ಮಸೂದೆಯನ್ನು ಮಂಡಿಸಿದ್ದು, ನೇಪಾಳ ಸಂವಿಧಾನದ 3ನೇ ಪರಿಚ್ಛೇದದಲ್ಲಿ ಉಲ್ಲೇಖಿಸಲಾಗಿರುವ ಆಡಳಿತಾತ್ಮಕ ನಕಾಶೆ ತಿದ್ದುಪಡಿಗೆ ಸಂಬಂಧಿಸಿದ ಮಸೂದೆ ಇದಾಗಿದೆ. ಇದಕ್ಕೆ ಅನುಮೋದನೆ ದೊರೆತು ಕಾನೂನಾಗಿ ರೂಪುಗೊಂಡರೆ ಎಲ್ಲಾ ಅಧಿಕೃತ ದಾಖಲೆಗಳಲ್ಲಿ ಪರಿಷ್ಕೃತ ನಕಾಶೆಯನ್ನೇ ಬಳಸಲಾಗುತ್ತದೆ. ಸದ್ಯ ಸಂಸತ್ತಿನಲ್ಲಿ ಮಸೂದೆ ಮೇಲೆ ಚರ್ಚೆ ನಡೆಯಲಿದ್ದು, ಉಭಯ ಸದನಗಳು ಅನುಮೋದನೆ ನೀಡಿದ ನಂತರ ಮಸೂದೆ ರಾಷ್ಟ್ರಪತಿಗಳ ಸಹಿಗಾಗಿ ಕಳುಹಿಸಿಕೊಡಲಾಗುತ್ತದೆ.
ಭಾರತಕ್ಕೆ ಮತ್ತೆ ಚಂಡಮಾರುತ ಭೀತಿ
ನವದೆಹಲಿ, ಮೇ 31: ಪಶ್ಚಿಮ ಬಂಗಾಳ ಮತ್ತು ಒಡಿಶಾದಲ್ಲಿ ವ್ಯಾಪಕ ಹಾನಿ ಮಾಡಿದ್ದ ಅಂಫಾನ್ ಚಂಡಮಾರುತ ದುರಂತ ಹಸಿರಾಗಿರುವಂತೆಯೇ ಇತ್ತ ಭಾರತಕ್ಕೆ ಮತ್ತೆ ಚಂಡಮಾರುತ ಭೀತಿ ಆರಂಭವಾಗಿದೆ. ಮುಂದಿನ ಎರಡು ಮೂರು ದಿನಗಳಲ್ಲಿ ಗುಜರಾತ್ ಮತ್ತು ಉತ್ತರ ಮಹಾರಾಷ್ಟ್ರ ಕರಾವಳಿಗೆ ಚಂಡಮಾರುತ ಅಪ್ಪಳಿಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಭಾನುವಾರ ತಿಳಿಸಿದೆ. ಜೂನ್ 3 ರಂದು ಚಂಡಮಾರುತ ಅಪ್ಪಳಿಸುವ ಸಾಧ್ಯತೆ ಹೆಚ್ಚಿದೆ ಎನ್ನಲಾಗಿದೆ. ಮುಂಬೈ ಮೂಲದ ಪ್ರಾದೇಶಿಕ ಹವಾಮಾನ ಕೇಂದ್ರವು ಚಂಡಮಾರುತದ ಬೆಳವಣಿಗೆಗಳ ಮತ್ತು ತೀವ್ರತೆ ಮೇಲೆ ನಿಗಾ ಇರಿಸಿದೆ. ಆಗ್ನೇಯ, ಪೂರ್ವ ಕೇಂದ್ರ ಅರಬ್ಬಿ ಸಮುದ್ರ ಮತ್ತು ಲಕ್ಷದ್ವೀಪ ಪ್ರದೇಶಗಳಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ಇದು ಮುಂದಿನ 24 ಗಂಟೆಗಳಲ್ಲಿ ಚಂಡಮಾರುತವಾಗಿ ಪರಿವರ್ತನೆಗೊಳ್ಳುವ ಸಾಧ್ಯತೆ ಇದೆ. ಇದು ಜೂನ್ 3 ರ ವೇಳೆಗೆ ಚಂಡಮಾರುತ ಉತ್ತರ ಮಹಾರಾಷ್ಟ್ರ ಮತ್ತು ಗುಜರಾತ್ ಕರಾವಳಿಗೆ ಅಪ್ಪಳಿಸಬಹುದು ಎಂದು ಹವಾಮಾನ ಇಲಾಖೆ ತಿಳಿಸಿದೆ.
ಮೋದಿಯವರ ಜೀವನಚರಿತ್ರೆ ಬಿಡುಗಡೆÉ
ನವದೆಹಲಿ, ಮೇ 31: ಪ್ರಧಾನಿ ನರೇಂದ್ರ ಮೋದಿಯವರ ಬಾಲ್ಯದ ಅಪರೂಪದ ಸಂಗ್ರಾಹ್ಯ ಚಿತ್ರಗಳು, ಹೆಚ್ಚು ಪ್ರಸಿದ್ಧವಲ್ಲದ ಉಪಾಖ್ಯಾನಗಳಿಂದ ಕೂಡಿರುವ ಪ್ರಧಾನಿ ನರೇಂದ್ರ ಮೋದಿಯವರ ಹೊಸ ಜೀವನಚರಿತ್ರೆ ಬಿಡುಗಡೆಯಾಗಿದೆ. "ಓಚಿಡಿeಟಿಜಡಿಚಿ ಒoಜi-ಊಚಿಡಿbiಟಿgeಡಿ oಜಿ Pಡಿosಠಿeಡಿiಣಥಿ &amdiv; ಂಠಿosಣಟe oಜಿ Woಡಿಟಜ Peಚಿಛಿe", ಎನ್ನುವ ಹೆಸರಿನ ಪುಸ್ತಕವನ್ನು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಕೆ.ಜಿ. ಬಾಲಕೃಷ್ಣನ್ ಬಿಡುಗಡೆ ಮಾಡಿದ್ದಾರೆ. ಲಾಕ್‍ಡೌನ್ ಮಧ್ಯೆ, ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಶುಕ್ರವಾರ ಅಂತರ್ಜಾಲದಲ್ಲಿ ಆಯೋಜಿಸಲಾಗಿದ್ದು ಭಾರತ ಮತ್ತು ಯುಎಸ್ ಎರಡೂ ರಾಷ್ಟ್ರಗಳಲ್ಲಿನ ಗಣ್ಯರು ಈ ವೇಳೆ ಹಾಜರಿದ್ದರು. ಇಂಟರ್‍ನ್ಯಾಷನಲ್ ಕೌನ್ಸಿಲ್ ಆಫ್ ಜ್ಯೂರಿಸ್ಟ್ಸ್ ಅಧ್ಯಕ್ಷ ಮತ್ತು ಅಖಿಲ ಭಾರತ ಬಾರ್ ಅಸೋಸಿಯೇಶನ್ ಅಧ್ಯಕ್ಷ ಆದಿಶ್ ಸಿ ಅಗರ್‍ವಾಲಾ, ಅಮೇರಿಕಾದ ಲೇಖಕ ಮತ್ತು ಕವಿ ಎಲಿಸಬೆತ್ ಹೊರಾನ್ ಜತೆಯಾಗಿ ಈ ಪುಸ್ತಕ ಬರೆದಿದ್ದು "ಮೋದಿಯವರ ಬಾಲ್ಯ ಮತ್ತು ಆರಂಭಿಕ ಜೀವನದ ಅಪರೂಪದ ಛಾಯಾ ಚಿತ್ರಗಳು ಜೀವನ ಚರಿತ್ರೆಯು ಚಹಾವನ್ನು ಮಾರಿದ ಹುಡುಗನೊಬ್ಬ ಎರಡನೇ ಬಾರಿ ದೇಶದ ಪ್ರಧಾನಿಯಾದವರೆಗೆ ಜೀವನವನ್ನು ಅದ್ಭುತವಾಗಿ ಚಿತ್ರಿಸಿದೆ.
ವಿದ್ಯಾರ್ಥಿಗಳ ಸುರಕ್ಷತೆಗೆ ಆದ್ಯತೆ
ತುಮಕೂರು, ಮೇ 31: ಕೊರೊನಾ ಸಂಕಷ್ಟದ ನಡುವೆಯು ಈ ಬಾರಿ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಬರೆಯುವ ಮಕ್ಕಳ ಸುರಕ್ಷತೆ ಮತ್ತು ಆತ್ಮವಿಶ್ವಾಸಕ್ಕೆ ಮೊದಲ ಆದ್ಯತೆ ನೀಡಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣ ಸಚಿವ ಎಸ್. ಸುರೇಶ್‍ಕುಮಾರ್ ತಿಳಿಸಿದ್ದಾರೆ. ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿಂದು ನಡೆದ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಪೂರ್ವ ಸಿದ್ಧತೆ ಕುರಿತಂತೆ ಡಿಡಿಪಿಐ ಮತ್ತು ಬಿಇಓಗಳೊಂದಿಗೆ ಪ್ರಗತಿ ಪರೀಶೀಲನಾ ಸಭೆ ನಡೆಸಿ ಅನಂತರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ಕುಡಿಯಲು ಮನೆಯಿಂದಲೇ ಬಿಸಿ ನೀರನ್ನು ತರುವಂತೆ ಸೂಚಿಸಬೇಕು. ಜೊತೆಗೆ ಪರೀಕ್ಷಾ ಕೇಂದ್ರಗಳಲ್ಲಿ ವ್ಯವಸ್ಥಿತವಾಗಿ ನೀರಿನ ವ್ಯವಸ್ಥೆ ಕಲ್ಪಿಸಬೇಕು ಎಂದರಲ್ಲದೇ ಕೇಂದ್ರಗಳಲ್ಲಿ ಶೌಚಾಲಯದ ಸ್ವಚ್ಛತೆಯ ಬಗ್ಗೆ ಗಮನಹರಿಸಬೇಕು. ಪರೀಕ್ಷಾ ಕೇಂದ್ರಗಳಲ್ಲಿ ಮಕ್ಕಳ ಮನಸ್ಥಿತಿ ಕೆಡದಂತೆ ಎಚ್ಚರವಹಿಸಬೇಕು ಎಂದರು.
ಕಾರ್ಮಿಕರ ಕೊರತೆ : ಕೈಗಾರಿಕೆಗೆ ಸಂಕಷ್ಟ
ಬೆಂಗಳೂರು, ಮೇ 31: ರಾಜ್ಯದಲ್ಲಿ ಕೈಗಾರಿಕಾ ಚಟುವಟಿಕೆಗಳು ಆರಂಭವಾಗಿದ್ದು, ಕಾರ್ಮಿಕರ ತೀವ್ರ ಕೊರತೆ ಎದುರಾಗಿದೆ. ಇದರಿಂದಾಗಿ ಕೈಗಾರಿಕಾ ಉತ್ಪಾದನೆ ಕುಂಠಿತಗೊಳ್ಳುವ ಆತಂಕ ವ್ಯಕ್ತವಾಗಿದೆ. ಹೊರ ರಾಜ್ಯಗಳ ಕಾರ್ಮಿಕರು ವಲಸೆ ಹೋಗಿದ್ದಾರೆ. ನುರಿತ ಕಾರ್ಮಿಕರು ತಮ್ಮ ಸ್ವಸ್ಥಾನಗಳಿಗೆ ತೆರಳಿದ್ದು, ಪರಿಣಾಮ ಕೈಗಾರಿಕೆಗಳಲ್ಲಿ ಮಾನವ ಸಂಪನ್ಮೂಲದ ತೀವ್ರ ಸಮಸ್ಯೆ ಎದುರಾಗಿದೆ. ಸಣ್ಣ, ಮಧ್ಯಮ ಕೈಗಾರಿಕೆಗಳಲ್ಲಿ ಕಾರ್ಮಿಕರಿಗೆ ಪರ್ಯಾಯವಿಲ್ಲ. ಬೃಹತ್ ಕೈಗಾರಿಕೆಗಳಲ್ಲಿ ರೊಬೋಟಿಕ್, ಆಟೋಮೇಷನ್ ಮತ್ತಿತರ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡು ಕೈಗಾರಿಕೆಗಳನ್ನು ಮುನ್ನಡೆಸಲು ಸೂಕ್ತ ವ್ಯವಸ್ಥೆ ಮಾಡಲಾಗಿದೆ. ಆದರೆ ಈ ಸೌಲಭ್ಯ ಸಣ್ಣ ಮಟ್ಟದ ಉದ್ಯಮಗಳಲ್ಲಿಲ್ಲ. ದೇಶಾದ್ಯಂತ ಸುಮಾರು ನಾಲ್ಕು ಸಾವಿರ ಶ್ರಮಿಕ್ ರೈಲುಗಳ ಮೂಲಕ 50 ಲಕ್ಷಕ್ಕೂ ಹೆಚ್ಚು ಕಾರ್ಮಿಕರು ಸಂಚರಿಸಿದ್ದು, ಬಹುತೇಕ ಮಂದಿ ತಮ್ಮ ಊರುಗಳನ್ನು ಸೇರಿಕೊಂಡಿದ್ದಾರೆ.
ಗಂಧ ಸಿಗುತ್ತೆ-ತೀರ್ಥ ಸಿಗಲ್ಲ
ಉಡುಪಿ, ಮೇ 31: ಜೂನ್ ಎಂಟರಿಂದ ಮುಜರಾಯಿ ದೇವಸ್ಥಾನಗಳು ತೆರೆದುಕೊಳ್ಳುತ್ತವೆ. ದೇವಸ್ಥಾನದಲ್ಲಿ ಕುಂಕುಮ, ಗಂಧ ಕೊಡ್ತೇವೆ ಆದ್ರೆ ತೀರ್ಥ ಕೊಡುವುದಿಲ್ಲ ಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ. ಉಡುಪಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರಾಜ್ಯದ ಎಲ್ಲ ಧಾರ್ಮಿಕ ದತ್ತಿ ಮತ್ತು ಮುಜರಾಯಿ ಇಲಾಖೆಯ ಅಧೀನ ದೇವಸ್ಥಾನಗಳು ನಾಳೆಯಿಂದ ತೆರೆಯುವುದಿಲ್ಲ. ಈ ಹಿಂದೆ ಜೂನ್ 1 ರಿಂದ ಎಲ್ಲ ದೇವಸ್ಥಾನಗಳನ್ನು ತೆರೆಯಲಿವೆ ಎಂದು ಹೇಳಲಾಗಿತ್ತು. ಅದಕ್ಕೆ ಕೇಂದ್ರ ಸರ್ಕಾರದಿಂದ ಸಹಮತ ನಿರೀಕ್ಷೆ ಮಾಡಲಾಗಿತ್ತು. ಕೇಂದ್ರ ಸರ್ಕಾರ ಜೂನ್ 8 ರಿಂದ ತೆರೆಯಲು ಅನುಮತಿಸಿದೆ. ನಾವು ಕೇಂದ್ರದ ಆದೇಶವನ್ನು ಪಾಲಿಸುತ್ತೇವೆ ಎಂದರು.
ಹುಲಿ ಪ್ರದೇಶದ ಕಟ್ಟಡ ತೆರವು
ಚಾಮರಾಜನಗರ, ಮೇ 31: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಪರಿಸರ ಸೂಕ್ಷ್ಮ ವ್ಯಾಪ್ತಿಗೆ ಬರುವ ಪ್ರದೇಶದಲ್ಲಿ ಅನಧಿಕೃತವಾಗಿ ಕಟ್ಟಡ ನಿರ್ಮಾಣ ಮಾಡಿರುವವರ ವಿರುದ್ಧ ಕ್ರಮಕ್ಕೆ ಮುಂದಾಗಿರುವ ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಅವರು, ಈಗಾಗಲೇ ಕಟ್ಟಡ ನಿರ್ಮಾಣ ಮಾಡಿರುವವರಿಗೆ ಕಟ್ಟಡ ತೆರವುಗೊಳಿಸಲು ಸೂಚಿಸಿ ನೋಟೀಸ್ ಜಾರಿ ಮಾಡಿದ್ದಾರೆ. ಪ್ರವಾಸೋದ್ಯಮ ಇಲಾಖೆಯವರು ಅನುಮತಿಸಿರುವ ಯಾವುದೇ ಅನ್ಯಕ್ರಾಂತವಾಗದೇ ನಿರ್ಮಿಸಿರುವ 3 ಹೋಂಸ್ಟೇ ಕಟ್ಟಡಗಳಿಗೆ ನೀಡಿರುವ ಅನುಮತಿಯನ್ನು ಹಿಂಪಡೆಯುವ ಆದೇಶಕ್ಕೆ ಜಿಲ್ಲಾಧಿಕಾರಿಯವರು ಕ್ರಮ ತೆಗೆದುಕೊಂಡಿದ್ದಾರೆ. ಅನುಮತಿ ಪಡೆಯದ ಇನ್ನೊಂದು ಹೋಂಸ್ಟೇ ನಡೆಸದಂತೆ ಬೀಗಮುದ್ರೆ ಹಾಕಲಾಗಿತ್ತು. ಆದರೂ ಸಹ ಬೀಗಮುದ್ರೆ ಆದೇಶ ಉಲ್ಲಂಘಿಸಿ ಹೋಂಸ್ಟೇ ತೆರೆದು ಕಟ್ಟಡ ದುರಸ್ತಿ ಕಾರ್ಯ ಕೈಗೊಂಡಿದ್ದ ಸದರಿ ಮಾಲೀಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲು ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಅವರು ಕ್ರಮ ತೆಗೆದುಕೊಳ್ಳಲು ಮುಂದಾಗಿದ್ದಾರೆ.