ವೀರಾಜಪೇಟೆ, ಮೇ 31: ಇಲ್ಲಿನ ಪಟ್ಟಣದ ನೀರು ಪೊರೈಕೆ ಕೇಂದ್ರವಾದ ಬೇತರಿಯ ಕಾವೇರಿ ಹೊಳೆಯಲ್ಲಿರುವ ಮೂಲ ಸ್ಥಾವರದ ವಿಭಾಗಕ್ಕೆ ಚೆಸ್ಕಾಂ ನಿರಂತರ ವಿದ್ಯುತ್ ಸಂಪರ್ಕ ಕಡಿತಗೊಳಿಸುತ್ತಿರುವುದರಿಂದ ಕಳೆದ 7ದಿನಗಳಿಂದ ಕುಡಿಯುವ ನೀರು ಪೊರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ ಎಂದು ಪಟ್ಟಣ ಪಂಚಾಯಿತಿ ಅಧಿಕಾರಿಗಳು ದೂರಿದ್ದಾರೆ.
ದಿನ ನಿತ್ಯ ವಿದ್ಯುತ್ ಸಂಪರ್ಕ ಕಡಿತಗೊಳಿಸುತ್ತಿರುವುದರಿಂದ ಜನರೇಟರ್‍ಗಳನ್ನು ಬಳಸಲಾಗುತ್ತಿದೆ. ಇದಕ್ಕೆ ನಿತ್ಯ ಡೀಸೆಲ್ ಪೊರೈಸಲು ದುಬಾರಿ ವೆಚ್ಚ ತಗಲುತ್ತಿದ್ದು ನೀರು ಪೊರೈಕೆಯ ವಾರ್ಷಿಕ ಬಜೆಟ್‍ನ್ನು ಸರಿದೂಗಿಸಲು ಸಾಧ್ಯವಾಗುತ್ತಿಲ್ಲ. ಬೇತರಿ ವಿಭಾಗಕ್ಕೆ ನೀರು ಪೊರೈಕೆಗೆ ಅಡಚಣೆ ಇಲ್ಲದೆ ವ್ಯವಸ್ಥಿತವಾಗಿ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಇಲ್ಲಿನ ಚೆಸ್ಕಾಂ ಅಧಿಕಾರಿಗಳಿಗೆ ಅನೇಕ ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಇದರಿಂದ ಪಟ್ಟಣದ ನಾಗರಿಕರಿಗೆ ಕುಡಿಯುವ ನೀರಿಲ್ಲದೆ ತೊಂದರೆಯಾಗುತ್ತಿದೆ ಎಂದು ಚೆಸ್ಕಾಂನ ಅಧಿಕಾರಿಗಳ ಗಮನಕ್ಕೆ ತಂದರೂ ಸ್ಪಂದಿಸುತ್ತಿಲ್ಲ. ಇನ್ನು ಎರಡು ದಿನಗಳಲ್ಲಿ ಬೇತರಿಯ ನೀರು ಪೊರೈಕೆ ವಿಭಾಗಕ್ಕೆ ಸಮರ್ಪಕವಾಗಿ ವಿದ್ಯುತ್ ಪೊರೈಸದಿದ್ದರೆ ಸಮಸ್ಯೆಗೆ ಸಂಬಂಧಿಸಿದಂತೆ ಜಿಲ್ಲೆಯ ಚೆಸ್ಕಾಂನ ಮೇಲಧಿಕಾರಿಗಳು ಹಾಗೂ ಉಸ್ತುವಾರಿ ಸಚಿವರಿಗೆ ದೂರು ನೀಡಲಾಗುವುದು ಎಂದು ನೀರು ಪೊರೈಕೆ ವಿಭಾಗದ ಉಸ್ತುವಾರಿ ಎನ್.ಪಿ.ಹೇಮ್‍ಕುಮಾರ್ ತಿಳಿಸಿದ್ದಾರೆ.