ಸೋಮವಾರಪೇಟೆ, ಮೇ 29: ಪಟ್ಟಣ ಸಮೀಪದ ಬೇಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೇಳೂರು, ಕಾರೇಕೊಪ್ಪ, ಕುಸುಬೂರು, ಕಾಟ್ನಮನೆ ವ್ಯಾಪ್ತಿಯಲ್ಲಿ ಕಾಡಾನೆಗಳ ಹಿಂಡು ಸಂಚರಿಸುತ್ತಿದ್ದು, ಸ್ಥಳೀಯರು ಭಯಭೀತರಾಗಿದ್ದಾರೆ.

ಕಳೆದ ಕೆಲ ದಿನಗಳಿಂದ ಈ ಭಾಗದಲ್ಲಿ ಆಗಾಗ್ಗೆ ಕಾಡಾನೆಗಳು ಕಾಣಿಸಿಕೊಳ್ಳುತ್ತಿದ್ದು, ಬೆಳಿಗ್ಗೆ ಮತ್ತು ಸಂಜೆ ವೇಳೆಯಲ್ಲಿ ಓಡಾಡುತ್ತಿವೆ. ಸೋಮವಾರಪೇಟೆ-ಕುಶಾಲನಗರ ರಾಜ್ಯ ಹೆದ್ದಾರಿಯ ಬದಿಯಲ್ಲಿರುವ ಕಾಟ್ನಮನೆ ಜಂಕ್ಷನ್‍ನಲ್ಲಿ ನಿನ್ನೆ 9 ಆನೆಗಳ ಹಿಂಡು ಸಂಚರಿಸಿದ್ದು, ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದೆ.

2 ಮರಿಯಾನೆಗಳೊಂದಿಗೆ 7 ಆನೆಗಳು ಕಾಟ್ನಮನೆ ಗ್ರಾಮ ವ್ಯಾಪ್ತಿಯಲ್ಲಿರುವ ಊರೊಳಗಿನ ಕೆರೆಗೆ ಸಂಜೆ ಆಗಮಿಸಿವೆ. ಕೆರೆಯ ನೀರನ್ನು ಕುಡಿದು ಕೆಲಕಾಲ ಕೆರೆಯೊಳಗೆ ಓಡಾಡಿದ್ದು, ಬೆಳಗ್ಗಿನ ವೇಳೆಯಲ್ಲಿ ರಾಜ್ಯ ಹೆದ್ದಾರಿ ದಾಟಿ ಕೋವರ್‍ಕೊಲ್ಲಿ ತೋಟದ ಮೂಲಕ ಅರಣ್ಯ ಪ್ರದೇಶಕ್ಕೆ ತೆರಳಿವೆ.

ಕಾಫಿ ತೋಟದೊಳಗೆ ಇದೀಗ ಹಲಸಿನ ಹಣ್ಣುಗಳಿದ್ದು, ಕಾಡಾನೆಗಳಿಗೆ ಅಚ್ಚುಮೆಚ್ಚಿನ ಆಹಾರವಾಗಿದೆ. ತೋಟದೊಳಗೆ ತೆರಳುವ ಆನೆಗಳು ಹಲಸಿನಹಣ್ಣು, ಬೈನೆ ಎಲೆಗಳನ್ನು ತಿಂದು ಊರಿನ ಕೆರೆಯಲ್ಲಿ ನೀರು ಕುಡಿದು ನಂತರ ಅರಣ್ಯಕ್ಕೆ ತೆರಳುತ್ತಿವೆ.

ಕಳೆದ ಎರಡು ವಾರಗಳ ಹಿಂದಷ್ಟೇ ಇಲ್ಲಿಂದ 3 ಕಿ.ಮೀ. ದೂರದ ಕಾರೇಕೊಪ್ಪದಲ್ಲಿ ಒಂಟಿ ಆನೆಯೊಂದು ಬೈಕ್ ಸವಾರರ ಮೇಲೆ ಧಾಳಿ ನಡೆಸಿ, ಸವಾರರನ್ನು ಗಾಯಗೊಳಿಸಿ ದ್ವಿಚಕ್ರ ವಾಹನವನ್ನು ಜಖಂಗೊಳಿಸಿದ ಘಟನೆ ನಡೆದಿತ್ತು.

ಇದೀಗ ಕಾಟ್ನಮನೆ ವ್ಯಾಪ್ತಿಯಲ್ಲಿ 9 ಆನೆಗಳ ಹಿಂಡು ಓಡಾಡುತ್ತಿದ್ದು, ಜನವಸತಿ ಪ್ರದೇಶವಾಗಿರುವದರಿಂದ ಗ್ರಾಮಸ್ಥರು ಭಯಭೀತರಾಗಿದ್ದಾರೆ. ರಾಜ್ಯ ಹೆದ್ದಾರಿಯಿಂದ ಕಾಟ್ನಮನೆಗೆ ತೆರಳುವ ಮುಖ್ಯರಸ್ತೆಯೇ ಕಾಡಾನೆಗಳ ಕಾರಿಡಾರ್ ಆಗಿದ್ದು, ಈ ಆನೆಗಳನ್ನು ಅರಣ್ಯಕ್ಕೆ ಅಟ್ಟುವ ಮೂಲಕ ಆನೆ ಕಂದಕ, ಸೋಲಾರ್ ಬೇಲಿಗಳನ್ನು ದುರಸ್ತಿಗೊಳಿಸಬೇಕೆಂದು ಈ ಭಾಗದ ಸಾರ್ವಜನಿಕರು ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ.