ಗೋಣಿಕೊಪ್ಪ ವರದಿ, ಮೇ 29: ಕಳೆದ 5 ದಿನಗಳಿಂದ ದಕ್ಷಿಣ ಕೊಡಗಿನ ಹಲವು ಗ್ರಾಮಗಳಲ್ಲಿ ನಡೆಯುತ್ತಿರುವ ಹುಲಿ ಪತ್ತೆ ಕಾರ್ಯಾಚರಣೆ ಕ್ಯಾಮೆರಾಕ್ಕೆ ಹುಲಿ ಸೆರೆಯಾಗದೆ ನಿರಾಸೆ ಮೂಡಿಸುತ್ತಿದೆ.

ಹರಿಹರ, ಚಿಕ್ಕಮುಂಡೂರು ವ್ಯಾಪ್ತಿಯಲ್ಲಿ ಇರಿಸಲಾಗಿರುವ ಕ್ಯಾಮೆರಾದಲ್ಲಿ ಹುಲಿ ಸೆರೆಯಾಗುತ್ತಿಲ್ಲ. ಬದಲಾಗಿ ಚಿರತೆ ಬೆಕ್ಕು, ಮುಳ್ಳು ಹಂದಿ, ನಾಯಿಗಳ ಓಡಾಟದ ಚಿತ್ರ ಸೆರೆಯಾಗುತ್ತಿವೆ.

ಹರಿಹರ ತೀತೀರ ಧರ್ಮಜ ಮತ್ತು ಸಮೀಪದ ಕಾಡ್ಯಮಾಡ ಮನು ಸೋಮಯ್ಯ ಅವರ ಮನೆ ಸಮೀಪ ಕ್ಯಾಮೆರಾ ಅಳವಡಿಸಿದ್ದು, ಮನು ಅವರಿಗೆ ಸೇರಿರುವ ಎರಡು ನಾಯಿಗಳು ಕೂಡ ಕಾಣೆಯಾಗಿವೆ. ಇದರಿಂದಾಗಿ ಅಲ್ಲಿ ಕೂಡ ಕ್ಯಾಮೆರಾ ಇರಿಸಲಾಗಿದೆ. ಅಲ್ಲಿಯೂ ಕೂಡ ಚಿರತೆ ಬೆಕ್ಕು ಓಡಾಟವೇ ಕಂಡು ಬರುತ್ತಿವೆ. ಇವುಗಳು ಕೂಡ ನಾಯಿಗಳನ್ನು ಕೊಲ್ಲುತ್ತವೆ. ಇದರಿಂದಾಗಿ ಇಲಾಖೆಗೆ ಹುಲಿಯ ಸುಳಿವು ಪತ್ತೆ ಹಚ್ಚಲು ಕಷ್ಟವಾಗುತ್ತಿದೆ.

ತಾ. 22 ರಂದು ಚಿಕ್ಕಮುಂಡೂರು ಗ್ರಾಮದಲ್ಲಿ ಕಳ್ಳಿಚಂಡ ರಘು ಎಂಬವರ ಹಸು ಹತ್ಯೆ ನಂತರದ ದಿನಗಳಲ್ಲಿ ಎಲ್ಲಿಯೂ ಕೂಡ ಜಾನುವಾರು ಹತ್ಯೆ ಪ್ರಕರಣ ದಾಖ ಲಾಗಿಲ್ಲ. ಇದರಿಂದಾಗಿ ಗ್ರಾಮದಲ್ಲಿ ಕೂಡ ಭಯ ಮರೆಯಾಗಿದೆ.

ವನ್ಯಜೀವಿ ಸಂಘ ಉಪಾಧ್ಯಕ್ಷ ಕುಂಞಂಗಡ ಬೋಸ್ ಮಾದಪ್ಪ, ವನ್ಯಜೀವಿ ಛಾಯಾಗ್ರಾಹಕ ಕಿರಿಯಮಾಡ ದಿಲನ್ ಮಂದಣ್ಣ, ಡೆಹ್ರಡೂನ್ ವನ್ಯಜೀವಿ ಇನ್ಸ್ಟಿಟ್ಯೂಟ್‍ನ ತಜ್ಞ ಚೆಕ್ಕೇರ ತಮ್ಮಯ್ಯ ಕಾರ್ಯಾಚರಣೆಗೆ ಸಹಕರಿಸುತ್ತಿದ್ದಾರೆ.

ಪೊನ್ನಂಪೇಟೆ ಆರ್‍ಎಫ್‍ಒ ಅರಮಣಮಾಡ ತೀರ್ಥ, ಡಿಆರ್‍ಎಫ್‍ಒ ಗಣೇಶ್, ದಿವಾಕರ್, ದೇಯಂಡ ಸಂಜಿತ್, ಚೊಟ್ಟೆಯಂಡ ಮಾಡ ಬೋಪಣ್ಣ, ಗಾರ್ಡ್ ಜಿಡ್ಡಿಮಣಿ ಸೇರಿದಂತೆ ಪೊನ್ನಂಪೇಟೆ, ವೀರಾಜಪೇಟೆ ಆರ್‍ಆರ್‍ಟಿ ತಂಡ ಕಾರ್ಯಾಚರಣೆ ನಡೆಸುತ್ತಿದೆ.

ನಾಯಿ ಕಾಣೆಯಾಗಿರುವ ಕಡೆಗಳಲ್ಲಿ ಕ್ಯಾಮೆರಾ ಅಳವಡಿಸಿ ಪತ್ತೆಗೆ ಮುಂದಾಗಿದ್ದೇವೆ. ಆದರೆ ಹುಲಿ ಸೆರೆಯಾಗುತ್ತಿಲ್ಲ. ಹುಲಿ ಗುರುತು ನಮಗೆ ಅವಶ್ಯವಿರುವುದ ರಿಂದ ಗ್ರಾಮಸ್ಥರು ಹುಲಿ ಕಂಡರೆ ತಕ್ಷಣ ಸ್ಥಳೀಯ ಅರಣ್ಯ ಇಲಾಖೆಗೆ ಮಾಹಿತಿ ನೀಡಿ ಸಹಕರಿಸಬೇಕು. ಇದರಿಂದ ಕಾರ್ಯಾಚರಣೆ ಚುರುಕುಗೊಳಿಸಲು ಸಹಕಾರಿಯಾಗು ತ್ತದೆ ಎಂದು ಡಿಸಿಎಫ್ ಕೋಣೇರಿರ ರೋಶನಿ ಮಾಹಿತಿ ನೀಡಿದ್ದಾರೆ.

- ಸುದ್ದಿಪುತ್ರ