ಮಡಿಕೇರಿ, ಮೇ. 29: ಕೊರೊನಾ ನಡುವೆ ಭಾರತ ಲಾಕ್‍ಡೌನ್ ಹಿನ್ನೆಲೆ ಎಲ್ಲ ಚಟುವಟಿಕೆಗಳು ಸ್ಥಗಿತಗೊಂಡಿದ್ದ ಹಿನ್ನೆಲೆ, ಕಳೆದ ಎರಡು ತಿಂಗಳ ಬಳಿಕ ಇಂದು ಮಡಿಕೇರಿ ಎಪಿಎಂಸಿ ಆಡಳಿತ ಮಂಡಳಿ ಸಭೆ ನಡೆಯಿತು. ಮಡಿಕೇರಿ ತಾಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷರಾಗಿರುವ ಅಂಬಿಕಾರ್ಯಪ್ಪ ಅವರ ಅಧ್ಯಕ್ಷತೆಯಲ್ಲಿ ಅವರ ಅಧಿಕಾರ ಅವಧಿಯ ಕೊನೆಯ ಸಭೆ ಇದಾಗಿತ್ತು.

ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕೇಂದ್ರ ಕಚೇರಿಯ ಆವರಣದಲ್ಲಿ ನಬಾರ್ಡ್ ಅನುದಾನದಿಂದ ನಿರ್ಮಾಣಗೊಳ್ಳುತ್ತಿರುವ ರೂ. 25 ಲಕ್ಷ ಯೋಜನೆ ಮಳಿಗೆಗಳ ಮತ್ತು ಗೋದಾಮು ಕಟ್ಟಡ ಕಾಮಗಾರಿಗೆ ಸಭೆ ಅನುಮೋದನೆ ನೀಡಿತು. ಅಲ್ಲದೆ ಸಮಿತಿಯ ಹಳೆಯ ಜೀಪನ್ನು ಹರಾಜುಗೊಳಿಸಿ ಹೊಸ ವಾಹನ ಖರೀದಿಗೆ ನಿರ್ಣಯ ತೆಗೆದು ಕೊಂಡಿತು. ಮಾಸಿಕ ಜಮಾ ಖರ್ಚು ಪರಿಶೀಲನೆಯೊಂದಿಗೆ ಇತರ ಆಡಳಿತಾತ್ಮಕ ವಿಷಯಳಿಗೆ ಸಭೆ ಮಂಜೂರಾತಿ ನೀಡಿತು, ಸಭೆಯಲ್ಲಿ ಉಪಾಧ್ಯಕ್ಷ ಅನಂತೇಶ್ವರ ಎನ್.ಸಿ., ಕಾರ್ಯದರ್ಶಿ ಸಂಜಯ ಸೇರಿದಂತೆ ಆಡಳಿತ ಮಂಡಳಿ ಸದಸ್ಯರುಗಳಾದ ಕಾಂಗೀರ ಸತೀಶ್, ಬೆಪ್ಪುರನ ಮೇದಪ್ಪ, ಜಯನಂಜಪ್ಪ, ಗಿರೀಶ್ ಪೂಣಚ್ಚ, ಎ.ಬಿ. ತಮ್ಮಯ್ಯ, ಎಂ.ಕೆ. ಕುಟ್ಟಪ್ಪ ಮೊದಲಾದವರು ಪಾಲ್ಗೊಂಡಿದ್ದರು.

ಬೀದಿ ವ್ಯಾಪಾರ ನಿಯಂತ್ರಣಕ್ಕೆ ಸಲಹೆ: ಸಭೆಯ ಬಳಿಕ ‘ಶಕ್ತಿ’ಯೊಂದಿಗೆ ಮಾತನಾಡಿದ ಅಧ್ಯಕ್ಷ ಅಂಬಿ ಕಾರ್ಯಪ್ಪ, ಮಡಿಕೇರಿ ನಗರದಲ್ಲಿ ಅಶುಚಿತ್ವಕ್ಕೆ ಕಾರಣವಾಗುತ್ತಿರುವ ಬೀದಿ ವ್ಯಾಪಾರವನ್ನು ಆರ್.ಎಂ.ಸಿ. ಸಂಕೀರ್ಣಕ್ಕೆ ಸ್ಥಳಾಂತರಿಸಬೇಕೆಂದು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿರುವದಾಗಿ ತಿಳಿಸಿದರು. ಈ ಮೂಲಕ ನಗರಸಭೆ ಬೀದಿಗಳಲ್ಲಿ ಎಲ್ಲೆಂದರಲ್ಲಿ ವ್ಯಾಪಾರಕ್ಕೆ ಅವಕಾಶದೊಂದಿಗೆ, ವಾಹನಗಳ ನಿಲುಗಡೆ ಸಮಸ್ಯೆ ಸಂಚಾರ ಒತ್ತಡ, ಸಾಂಕ್ರಾಮಿಕ ರೋಗಗಳಿಗೆ ಕಡಿವಾಣ ಹಾಕಬಹುದೆಂದು ಅವರು ಅಭಿಪ್ರಾಯಪಟ್ಟರು.

ಮೂಲಭೂತ ಸೌಕರ್ಯ: ಪ್ರಸ್ತುತ ಎ.ಪಿ.ಯಂ.ಸಿ. ಆವರಣದಲ್ಲಿ ವರ್ತಕರು ಹಾಗೂ ಗ್ರಾಹಕರ ಅನುಕೂಲಕ್ಕಾಗಿ ಶುದ್ಧ ಕುಡಿಯುವ ನೀರು, ಶೌಚಾಲಯ ಸಹಿತ ವಾಹನಗಳ ನಿಲುಗಡೆ ವ್ಯವಸ್ಥೆ ಕಲ್ಪಿಸಿದ್ದು, ತಾಲೂಕಿನ ರೈತರು ಮತ್ತು ಮಡಿಕೇರಿ ವರ್ತಕರು ಈ ಆವರಣವನ್ನು ಸದ್ಬಳಕೆ ಮಾಡಿಕೊಳ್ಳುವಂತೆ ಸಲಹೆ ನೀಡಿದರು.