ಸೋಮವಾರಪೇಟೆ, ಮೇ 29: ವಿವಿಧ ಬೇಡಿಕೆಗಳನ್ನು ಈಡೇರಿಸು ವಂತೆ ಆಗ್ರಹಿಸಿ ಕರ್ನಾಟಕ ರೈತ ಸಂಘದ ಜಿಲ್ಲಾ ಘಟಕದ ವತಿಯಿಂದ ತಾಲೂಕು ತಹಶೀಲ್ದಾರ್ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ರಾಜ್ಯ ಸರ್ಕಾರ ಜಾರಿಗೆ ತರುತ್ತಿರುವ ಎಪಿಎಂಸಿ ತಿದ್ದುಪಡಿ ಕಾಯ್ದೆಯನ್ನು ವಾಪಸ್ ಪಡೆಯಬೇಕು. ವಿದ್ಯುತ್ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಕಾರ್ಪೋರೇಟ್ ಕಂಪೆನಿಗಳಿಗೆ ಲಾಭ ಮಾಡಿಕೊಡುವ ಕೇಂದ್ರ ಸರ್ಕಾರದ ಕರಡು ಮಸೂದೆಯನ್ನು ತಿರಸ್ಕರಿಸಬೇಕು. ತರಕಾರಿ, ಹಣ್ಣು ಬೆಳೆದು ನಷ್ಟ ಅನುಭವಿಸುತ್ತಿರುವ ರೈತರಿಗೆ ಪ್ರತಿ ಏಕರೆಗೆ ರೂ. 30 ಸಾವಿರ ಪರಿಹಾರ ಒದಗಿಸಬೇಕು ಎಂದು ಸಂಘದ ಪದಾಧಿಕಾರಿಗಳು ಒತ್ತಾಯಿಸಿದರು.

ವಲಸೆ ಕಾರ್ಮಿಕರನ್ನು ಬಸ್ ಹಾಗೂ ರೈಲುಗಳಲ್ಲಿ ಉಚಿತವಾಗಿ ತಮ್ಮ ಜಿಲ್ಲೆ, ರಾಜ್ಯಗಳಿಗೆ ಕಳುಹಿಸ ಬೇಕು. ಗ್ರಾಮೀಣ ಭಾಗದಲ್ಲಿ ಉದ್ಯೋಗಖಾತ್ರಿ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಗೊಳಿಸಬೇಕು. ಈ ಯೋಜನೆಯನ್ನು ಸಣ್ಣ ಪಟ್ಟಣಗಳಿಗೂ ವಿಸ್ತರಿಸಬೇಕು ಎಂದು ಸಂಘದ ಜಿಲ್ಲಾಧ್ಯಕ್ಷ ಸಣ್ಣಪ್ಪ ಆಗ್ರಹಿಸಿದರು.

ಇದರೊಂದಿಗೆ ಕಾರ್ಮಿಕ ಕಾಯ್ದೆಗಳನ್ನು ಅಮಾನತುಗೊಳಿಸುವ ತೀರ್ಮಾನ ಕೈಬಿಡಬೇಕು. ಕಲ್ಲಿದ್ದಲು ಗಣಿ ನಿಕ್ಷೇಪಗಳನ್ನು ಕಾರ್ಪೋರೇಟ್ ಕಂಪೆನಿಗಳಿಗೆ ನೀಡಬಾರದು. ಕೊರೊನಾ ಸಂಕಷ್ಟದ ದಿನಗಳಲ್ಲಿ ಕಾರ್ಮಿಕರ ಎರಡು ತಿಂಗಳ ವೇತನವನ್ನು ಕಂಪೆನಿಗಳು ಭರಿಸುವಂತೆ ನಿರ್ದೇಶನ ನೀಡಬೇಕು ಎಂದು ಒತ್ತಾಯಿಸಿದರು.

ಈ ಸಂಬಂಧಿತ ಮನವಿ ಪತ್ರವನ್ನು ತಹಶೀಲ್ದಾರ್ ಗೋವಿಂದರಾಜು ಅವರ ಮೂಲಕ ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಯಿತು.

ಈ ಸಂದರ್ಭ ಸಂಘದ ರಾಜ್ಯ ಸಮಿತಿ ಸದಸ್ಯ ಎಸ್.ಆರ್. ಮಂಜುನಾಥ್, ನಿರ್ವಾಣಪ್ಪ, ಜಿಲ್ಲಾ ಸಮಿತಿಯ ಬಾಬು, ಕೆ.ಟಿ. ಆನಂದ ಅವರುಗಳು ಉಪಸ್ಥಿತರಿದ್ದರು.