ನಾಪೋಕ್ಲು, ಮೇ 29: ಮಡಿಕೇರಿ ತಾಲೂಕು ಬಲ್ಲಮಾವಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೇರೂರು ಗ್ರಾಮದ ಪಂದೇಟ್ ಬಳಿಯಲ್ಲಿ ನಿರ್ಮಿಸಲಾದ ಕಿರು ಸೇತುವೆಯೊಂದು ಕಳೆದ ವರ್ಷದ ಮಹಾಮಳೆಗೆ ಕೊಚ್ಚಿ ಹೋಗಿದೆ. ಸೇತುವೆ ದುರಸ್ತಿ ಮಾಡದೇ ಇರುವುದರಿಂದ ಈ ವಿಭಾಗದ ಸಾರ್ವಜನಿಕರು ಮತ್ತು ಶಾಲಾ-ಕಾಲೇಜು ಮಕ್ಕಳಿಗೆ ತೊಂದರೆಯಾಗಿದೆ. ಮಳೆಗಾಲಕ್ಕೆ ಮುನ್ನ ಸೇತುವೆಯನ್ನು ನಿರ್ಮಿಸಿ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಈ ವಿಭಾಗದ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಕಳೆದ ವರ್ಷದ ಮಹಾಮಳೆಗೆ ಸೇತುವೆಯ ಒಂದು ಭಾಗ ಕೊಚ್ಚಿ ಹೋಗಿದೆ. ಮಣವಟ್ಟಿರ, ಮಚ್ಚುರ, ಪಂದೇಟು ಕಾಲೋನಿಯ ಮಂದಿ ಹಾಗೂ ಪುಲಿಕೋಟು ಗ್ರಾಮದ ಕೋಳಿಯಂಡ ಕುಟುಂಬಸ್ಥರು ಈ ಸೇತುವೆ ಮೂಲಕ ಒಂದು ಕಿ.ಮೀ. ಕ್ರಮಿಸಿ ಮುಖ್ಯರಸ್ತೆ ತಲುಪಬಹುದಿತ್ತು. ಈಗ ಐದು ಕಿ.ಮೀ. ಸುತ್ತುಬಳಸಿ ತೆರಳುವಂತಾಗಿದೆ. ಇದುವರೆಗೆ ಕಾಮಗಾರಿ ಕೈಗೊಂಡಿಲ್ಲ. ಮುಂಗಾರು ಹಿಡಿಯುವ ಮುನ್ನ ಸೇತುವೆ ನಿರ್ಮಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಮಳೆಗಾಲದಲ್ಲಿ ಸೇತುವೆ ಕೊಚ್ಚಿಹೋಗಿದ್ದು, ತಾಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಸದಸ್ಯರ ಗಮನಕ್ಕೆ ತಂದರೂ ಇದುವರೆಗೆ ಯಾವುದೇ ಕಾಮಗಾರಿ ಆಗಿಲ್ಲ. ಇನ್ನಾದರೂ ಸಂಬಂಧಪಟ್ಟವರು ಮಳೆಗಾಲ ಪ್ರಾರಂಭಕ್ಕೆ ಮೊದಲು ಸೇತುವೆಯನ್ನು ದುರಸ್ತಿಪಡಿಸಿ ಅನುಕೂಲ ಮಾಡಿಕೊಡಬೇಕು. ತಪ್ಪಿದರೆ ಪ್ರತಿಭಟನೆ ನಡೆಸಲಾಗುವುದು ಎಂದು ಮೂವೇರ ಮೊಣ್ಣಪ್ಪ, ಮಚ್ಚುರ ಸೋಮಯ್ಯ, ರವೀಂದ್ರ, ಪೂಣಚ್ಚ ಪತ್ರಿಕಾ ಹೇಳಿಕೆ ನೀಡಿದ್ದಾರೆ.
- ದುಗ್ಗಳ.