ಮಡಿಕೇರಿ, ಮೇ 27: ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ 2000ನೇ ಇಸವಿಯಲ್ಲಿ ವೀರ ಮರಣವನ್ನಪ್ಪಿದ ಯೋಧ ದಕ್ಷಿಣ ಕೊಡಗಿನ ಕೋಟೂರಿನ ನಾಯಕ್ ಕೋಳೇರ ಸವಿನ್ ಅವರ ಕುಟುಂಬವನ್ನು ಇತ್ತೀಚೆಗೆ ತಿರುವನಂತಪುರದಲ್ಲಿ ನಡೆದ ಅವರು ಸೇವೆ ಸಲ್ಲಿಸುತ್ತಿದ್ದ 19 ಮೆಡ್ರಾಸ್ ರೆಜಿಮೆಂಟ್‍ನ ರೈಸಿಂಗ್ ಡೇ (ಸಂಸ್ಥಾಪನಾ ದಿನ) ಸಂದರ್ಭ ಗೌರವಿಸಲಾಗಿದೆ. ಈ ಕಾರ್ಯಕ್ರಮ ದಲ್ಲಿ ಹುತಾತ್ಮ ಯೋಧ ಸವಿನ್ ತಾಯಿ ನಂಜಮ್ಮ, ಸಹೋದರಿ ಕುಲ್ಲಚ್ಚಿರ ಸುಮಿ ದಿನೇಶ್ ಅವರುಗಳು ಭಾಗವಹಿಸಿದ್ದು ರೆಜಿಮೆಂಟ್‍ನ ಮೂಲಕ ಗೌರವ ಸ್ವೀಕರಿಸುವದ ರೊಂದಿಗೆ, ಸೇನಾ ಸ್ಮಾರಕದಲ್ಲಿ ಸವಿನ್ ಹೆಸರಿನ ಫಲಕಕ್ಕೆ ಪುಷ್ಪ ನಮನ ಸಲ್ಲಿಸಿದರು. ಕಾರ್ಗಿಲ್ ಕಾರ್ಯಾ ಚರಣೆಯಲ್ಲಿ ಸವಿನ್ ಮೃತಪಟ್ಟು 20 ವರ್ಷಗಳು ಸಂದಿವೆ. ಕೋಟೂರಿನ ಕೋಳೇರ ದಿ. ಅಪ್ಪಯ್ಯ ಹಾಗೂ ನಂಜಮ್ಮ ದಂಪತಿಯ ಪುತ್ರ ಸೇನೆಯ ಆಸಕ್ತಿ ಮೈಗೂಡಿಸಿಕೊಂಡಿದ್ದ ಸವಿನ್ 1993ರಲ್ಲಿ ವಿದ್ಯಾಭ್ಯಾಸ ಮೊಟಕು ಗೊಳಿಸಿ ಸೇನೆ ಸೇರಿದ್ದರು. ತನ್ನ ಕರ್ತವ್ಯ ಪರತೆಯಿಂದ 7 ವರ್ಷದಲ್ಲಿ 2 ಬಾರಿ ಬಡ್ತಿ ಪಡೆದಿದ್ದರು. 2000ದಲ್ಲಿ ಕಾರ್ಗಿಲ್ ಕದನದ ಸಂದರ್ಭ ಇವರು ಜಮ್ಮುವಿನಲ್ಲಿ ಸೇನಾ ಗೂಢಾಚರ್ಯ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಇವರು, ಆ ಸಂದರ್ಭದಲ್ಲಿ ರಾತ್ರಿ ತಮ್ಮ ತಂಡದೊಂದಿಗೆ ಏರು ಪ್ರದೇಶದಲ್ಲಿ ಗಸ್ತಿನಲ್ಲಿದ್ದಾಗ ಭಾರತದ ವ್ಯಕ್ತಿ ಮಹಮದ್ ಸಿದ್ದಿಕ್ ಎಂಬಾತ ಪಾಕಿಸ್ತಾನಕ್ಕೆ ಗುಪ್ತವಾಗಿ ಮಾಹಿತಿ ನೀಡುತ್ತಿದ್ದುದನ್ನು ಪತ್ತೆಹಚ್ಚಿ, ಆತನನ್ನು ಬಂಧಿಸಿ ಕರೆತರುತ್ತಿದ್ದರು. ಆಗ ಇವರೊಂದಿಗಿದ್ದದ್ದು ಕೊಡಗಿನವರೇ ಆದ ಕುಶಾಲನಗರದ ಮತ್ತೊಬ್ಬ ಯೋಧ ರಫೇಲ್ ಎಂಬವರು. ಇವರಿಬ್ಬರು ಬಂಧಿತ ವ್ಯಕ್ತಿಯನ್ನೂ ಸೇರಿಸಿ ಹಗ್ಗದಿಂದ ಸೊಂಟಕ್ಕೆ ಕಟ್ಟಿಕೊಂಡು ಬರುತ್ತಿದ್ದಾಗ ಏಕಾಏಕಿ ಉಗ್ರಗಾಮಿಗಳು ದಾಳಿ ಮಾಡಿದ್ದರು. ಈ ಸಂದರ್ಭದ ಕದನದ ನಡುವೆ ಸವಿನ್‍ರಿಂದ ಬಂಧಿತನಾಗಿದ್ದ ವ್ಯಕ್ತಿ ದಿಢೀರನೆ 200 ಅಡಿ ಆಳದ ಪ್ರಪಾತಕ್ಕೆ ಹಾರಿದ್ದು, ಈತನೊಂದಿಗೆ ಸವಿನ್ ಹಾಗೂ ರಫೇಲ್ ಕೂಡ ಬೀಳಬೇಕಾಯಿತು. ಘಟನೆಯಲ್ಲಿ ಸವಿನ್ ಮೃತಪಟ್ಟರೆ, ರಫೇಲ್ ಗಂಭೀರ ಗಾಯಗೊಂಡಿದ್ದರು. ಇದು ಅಂದಿನ ಘಟನೆಯಾಗಿತ್ತು.

ಕಾರ್ಗಿಲ್ ಯುದ್ಧ ಆರಂಭದ ದಿನದಿಂದ ಕೊಡಗಿನವರಾದ ಮಡಿಕೇರಿಯ ಅಬ್ದುಲ್ ರಜಾಕ್, ಶಾಂತಳ್ಳಿಯ ಈರಪ್ಪ, ಅವಘಡದಲ್ಲಿ ಮೃತಪಟ್ಟಿದ್ದರೆ, ಸಿಂಗೂರು ಮೇದಪ್ಪ, ಪೆಮ್ಮಂಡ ಕಾವೇರಪ್ಪ, ಹೆಚ್.ವಿ. ವೆಂಕಟ, ವಿ.ಎಲ್. ಗಣೇಶ್, ಮೇಜರ್ ಮಂಗೇರಿರ ಮುತ್ತಣ್ಣ ಅವರುಗಳು ಈತನಕ ಬಲಿಯಾಗಿದ್ದು, 8ನೆಯ ಯೋಧರಾಗಿ ಸವಿನ್ ಹುತಾತ್ಮರಾಗಿದ್ದರು. - ಶಶಿ