ಮಡಿಕೇರಿ, ಮೇ 27: ಪರಸ್ಪರ ಸಾಮರಸ್ಯ-ಸಹಬಾಳ್ವೆಯಿಂದ ಕೂಡಿದ್ದ ಕೊಡಗು ಜಿಲ್ಲೆಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಜಾತಿ-ಜಾತಿಗಳ ಮಧ್ಯೆ ಬಿರುಕು ಮೂಡುವಂತಹ ಘಟನೆಗಳು ನಡೆಯುತ್ತಿರುವದನ್ನು ಬೆಂಗಳೂರು ಕೊಡವ ಸಮಾಜ ವಿಷಾದಿಸುತ್ತಿದ್ದು, ವೈಮನಸ್ಸಿನ ಈ ಬೆಳವಣಿಗೆಯನ್ನು ಖಂಡಿಸುವದಾಗಿ ತಿಳಿಸಿದೆ.

ಈ ಕುರಿತು ಬೆಂಗಳೂರು ಸಮಾಜದ ಅಧ್ಯಕ್ಷ ಮುಕ್ಕಾಟಿರ ಟಿ. ನಾಣಯ್ಯ, ಕಾರ್ಯದರ್ಶಿ ಚಿರಿಯಪಂಡ ಸುರೇಶ್ ನಂಜಪ್ಪ, ಉಪಾಧ್ಯಕ್ಷೆ ಮಲ್ಲೇಂಗಡ ಮೀರಾ ಜಲಜಕುಮಾರ್ ಹಾಗೂ ಆಡಳಿತ ಮಂಡಳಿಯವರು ಹೇಳಿಕೆ ನೀಡಿದ್ದು ಕೊಡವ ಜನಾಂಗದ ಮೇಲೆ ಅನ್ಯಾಯ ವಾದಲ್ಲಿ ಹೋರಾಟಕ್ಕೆ ಸಿದ್ಧವಾಗು ವದಾಗಿ ತಿಳಿಸಿದ್ದಾರೆ. ಪ್ರಸ್ತುತ ಒಂದು ರೀತಿಯಲ್ಲಿ ಕೊಡವ, ಅರೆಭಾಷೆ, ಮುಸ್ಲಿಂರ ನಡುವೆ ಒಗ್ಗಟ್ಟು ಮುರಿಯು ವಂತಾಗಿದೆ. ಈ ಪರಿಸ್ಥಿತಿಯ ಸತ್ಯಾಸತ್ಯತೆಯ ಬಗ್ಗೆ ಕೂಲಂಕುಷ ವಾಗಿ ಅವಲೋಕಿಸಿದಾಗ, ಇದು ಸುಮಾರು ಐದಾರು ವರ್ಷಗಳಿಂದ ಪ್ರಾರಂಭ ವಾಗಿದೆ ಎಂದು ಹೇಳಲು ವಿಷಾದ ವಾಗುತ್ತದೆ ಎಂದಿರುವ ಅವರುಗಳು, ಕೆಲವು ಮಂದಿ ಕೊಡವ ಜನಾಂಗದ ವಿರುದ್ಧ ವಿನಾಕಾರಣ ಕೊಡವರು ಬ್ರಿಟೀಷ್ ಪ್ರೇಮಿಗಳು ಎಂಬಂತೆ ಹಾಗೂ ಇಲ್ಲಸಲ್ಲದ ಆರೋಪಗಳನ್ನು ಮಾಡಲು ಮುಂದಾಗುತ್ತಿರುವದರಿಂದ ಈ ಜಾತಿ ಕಾಳಗ ಪ್ರಾರಂಭವಾದಂತಿದೆ. ಇದಕ್ಕೂ ಮುಂದೆ ಕೊಡಗಿನಲ್ಲಿ ಈ ರೀತಿಯ ಯಾವದೇ ಭಿನ್ನಾಭಿಪ್ರಾಯ ಗಳಿರಲಿಲ್ಲ. ಇದೀಗ ಜನಾಂಗದ ವ್ಯಕ್ತಿಯಾಗಿರುವ ಓರ್ವ ವ್ಯಂಗ್ಯಚಿತ್ರ ಕಲಾವಿದರಾಗಿರುವ ರಾಯ್ ಪೊನ್ನಣ್ಣ ಅವರನ್ನು ಬಲಿಪಶು ಮಾಡುವ ಯತ್ನ ಕಂಡುಬಂದಿದೆ. ಓರ್ವ ವ್ಯಂಗ್ಯ ಚಿತ್ರಕಾರನಿಗೆ ಅವರದ್ದೇ ಧಾಟಿಯಲ್ಲಿ ಎಲ್ಲಾ ವಿಚಾರವನ್ನು ಸಮಾಜದ ಮುಂದಿಡುವ ಹಕ್ಕಿದೆ. ಆದರೆ ಪ್ರಸ್ತುತ ರಾಯ್ ಪೊನ್ನಣ್ಣ ಮೇಲೆ ಮೊಕದ್ದಮೆ ಯೊಂದನ್ನು ದಾಖಲಿಸಲಾಗಿದ್ದು, ಈ ಪ್ರಕರಣದಲ್ಲಿ ಅವರು ಎಲ್ಲೂ ಯಾವದೇ ಜಾತಿಯ ಅಥವಾ ರಾಜಕಾರಣಿಗಳ ಹೆಸರನ್ನು ಪ್ರಸ್ತಾಪಿಸಿಲ್ಲವಾದರೂ ಒತ್ತಡದಂತೆ ಪ್ರಕರಣ ದಾಖಲಿಸಲಾಗಿದೆ. ಮಾತ್ರವಲ್ಲ, ಈ ಬಗ್ಗೆ ಅವರ ವಕೀಲರಿಗೆ ಪೊಲೀಸರು ಇದರ ಪ್ರತಿ ನೀಡಲೂ ನಿರಾಕರಿಸುತ್ತಿದ್ದಾರೆ. ಇದು ಮುಂದುವರಿದರೆ ಸಮಾಜ ಮಾನವ ಹಕ್ಕುಗಳ ಆಯೋಗದ ಮೆಟ್ಟಿಲೇರಲು ಹಿಂಜರಿಯುವದಿಲ್ಲ ಎಂದಿದ್ದಾರೆ. ಜಾತಿ-ಜಾತಿಯ ನಡುವಿನ ವಿಷಬೀಜ ಬಿತ್ತುವವರನ್ನೂ ಕೊಡವ ಸಮಾಜ ಒಪ್ಪುವದಿಲ್ಲ. ಆದರೆ ವ್ಯಂಗ್ಯಚಿತ್ರ ಕಲಾವಿದನ ಮೇಲೆ ಕಪೋಲಕಲ್ಪಿತವಾಗಿ ಹೂಡಿರುವ ಮೊಕದ್ದಮೆಯ ಹಿನ್ನೆಲೆಯಲ್ಲಿ ಸಮಾಜ ಅವರ ಪರ ನಿಲ್ಲುತ್ತದೆ. ಮುಂದೆಯೂ ಈ ರೀತಿಯ ಅನ್ಯಾಯ ಯಾರಿಗೂ ಆಗಬಾರದು ಎಂದು ಪ್ರಮುಖರು ಸ್ಪಷ್ಟಪಡಿಸಿದ್ದಾರೆ.