ಭಾಗಮಂಡಲ, ಮೇ 27: ಮುಂಗಾರು ಸಮೀಪಿಸುತ್ತಿದ್ದಂತೆ ಆತಂಕದ ನಡುವೆಯೂ ಕೃಷಿ ಚಟುವಟಿಕೆ ಬಿರುಸುಗೊಂಡಿದೆ. ಭಾಗಮಂಡಲ ವ್ಯಾಪ್ತಿಯಲ್ಲಿ ಮುಂಗಾರು ಪೂರ್ವ ಮಳೆ ಸುರಿದಿದ್ದು ಭೂಮಿ ತಂಪಾಗಿದೆ. ನದಿ ತೋಡುಗಳಲ್ಲಿ ನೀರಿನ ಪ್ರಮಾಣ ಹೆಚ್ಚಿದ್ದು, ರೈತರು ಭತ್ತದ ಬೇಸಾಯ ದತ್ತ ಗಮನ ಹರಿಸುತ್ತಿದ್ದಾರೆ. ಗದ್ದೆ ಉಳುಮೆಗೆ ಪೂರಕ ವಾತಾ ವರಣ ಇದ್ದು, ವಿವಿಧೆಡೆ ಉಳುಮೆ ಕಾರ್ಯ ಆರಂಭಗೊಂಡಿದೆ. ಸಮೀಪದ ತಣ್ಣಿಮಾನಿ ಗ್ರಾಮದಲ್ಲಿ ಭತ್ತದ ಗದ್ದೆಯ ಉಳುಮೆ ಕಾರ್ಯ ನಡೆಯಿತು. ಒಂದೆಡೆ ಕೊರೊನಾ ಸೋಂಕಿನ ಆತಂಕ. ಮತ್ತೊಂದೆಡೆ ಮಹಾಮಳೆಯ ಆತಂಕದಲ್ಲಿ ರೈತರು ಕೃಷಿ ಚಟುವಟಿಕೆಯನ್ನು ಆರಂಭಿಸಿದ್ದಾರೆ. ಈ ವ್ಯಾಪ್ತಿಯಲ್ಲಿ ಜೂನ್ ಮೊದಲ ವಾರದಲ್ಲಿ ಬಿತ್ತನೆ ಕಾರ್ಯ ಆರಂಭಗೊಳ್ಳಲಿದೆ. ಭಾಗಮಂಡಲ ವ್ಯಾಪ್ತಿಯಲ್ಲಿ ಜೂನ್ 15 ರ ನಂತರ ಬಿತ್ತನೆ ಕಾರ್ಯ ನಡೆಯಲಿದೆ ಎಂದು ಕೃಷಿಕ ನಂಜುಂಡಪ್ಪ ಹೇಳಿದರು.

ಭಾಗಮಂಡಲದ ತಾವೂರು, ಕೋರಂಗಾಲ, ಗ್ರಾಮಗಳಲ್ಲೂ ಉಳುಮೆ ಕಾರ್ಯ ಬಿರುಸುಗೊಂಡಿದೆ. ಕಾಫಿ ತೋಟಗಳ ಕೆಲಸ ಪೂರ್ಣಗೊಂಡಿದ್ದು, ರೈತರು ಭತ್ತದ ಕೃಷಿಗಾಗಿ ಗದ್ದೆಯತ್ತ ಮುಖ ಮಾಡಿದ್ದಾರೆ. ಲಾಕ್‍ಡೌನ್ ಹೇರಿದ ಬಳಿಕ ಬೆಂಗಳೂರಿನಲ್ಲಿ ಕೆಲಸ ನಿರ್ವಹಿಸುತ್ತಿದ್ದ ರೈತರ ಮಕ್ಕಳು ಊರು ಸೇರಿದ್ದು ಕೃಷಿ ಚಟುವಟಿಕೆಯತ್ತ ಗಮನ ಹರಿಸಿದ್ದಾರೆ.

ಮಹಾಮಳೆಯ ಆತಂಕದ ನಡುವೆ ಮಾರುಕಟ್ಟೆಯ ಆತಂಕವು ರೈತರನ್ನು ಕಾಡುತ್ತಿದೆ. ಕೊರೊನಾ ಸೋಂಕಿನಿಂದಾಗಿ ಈ ಭಾಗದ ಪ್ರಮುಖ ಬೆಳೆಗಳಾದ ಕಾಫಿ, ಕಾಳುಮೆಣಸು ಮತ್ತಿತರ ಉತ್ಪನ್ನಗಳಿಗೆ ಮಾರುಕಟ್ಟೆ ಧಾರಣೆ ಹೇಗಿರುತ್ತದೋ ಎಂಬ ಆತಂಕ ಕಾಡುತ್ತಿದೆ. ಒಟ್ಟಿನಲ್ಲಿ ತೋಟದ ಕೆಲಸಗಳಿಗೆ ವಿರಾಮ ಹಾಡಿರುವ ರೈತರು ಭತ್ತದ ಬೇಸಾಯದತ್ತ ಮನಸು ಮಾಡಿದ್ದು ಕೃಷಿ ಚಟುವಟಿಕೆಗಳು ಬಿರುಸಿನಿಂದ ಸಾಗುತ್ತಿವೆ. - ಸುನಿಲ್ ಕುಯ್ಯಮುಡಿ