ಇಡೀ ದೇಶದಲ್ಲಿಯೇ ಕೊರೊನಾ ವಿರುದ್ಧ ಸಮರ ಸಾರಿದ ಕೊಡಗು ಜಿಲ್ಲೆಯ ರೀತಿ ಗಮನ ಸೆಳೆದಿದೆ. ಯೋಧರ ನಾಡಾಗಿ, ಕಾಫಿಯ ಬೀಡಾಗಿ ಭಾರತದಲ್ಲಿ ಹೆಸರುವಾಸಿಯಾಗಿದ್ದ ಕಾವೇರಿ ನಾಡು ಈಗ ಕೊರೊನಾ ಸಂಕಷ್ಟವನ್ನು ಒಗ್ಗಟ್ಟಿನಿಂದ ಮೆಟ್ಟಿ ನಿಂತ ರೀತಿಯೂ ಶ್ಲಾಘನೆಗೆ ಪಾತ್ರವಾಗಿದೆ. ಈಗಾಗಲೇ ಕೇಂದ್ರ ಆರೋಗ್ಯ ಇಲಾಖೆ ಕೂಡ ಕೊಡಗಿನಲ್ಲಿ ಸೋಂಕು ವ್ಯಾಪಿಸದಂತೆ ಕೈಗೊಂಡ ಕ್ರಮಗಳನ್ನು ಪ್ರಶಂಸಿಸಿದ್ದು ಒಂದೆಡೆಯಾದರೆ, ರಾಜ್ಯದ ಹಲವಾರು ಜಿಲ್ಲೆಗಳ ಜನರು ತಮ್ಮ ಜಿಲ್ಲೆಗಳಲ್ಲಿ ಹಬ್ಬುತ್ತಿರುವ ಸೋಂಕಿನ ರೀತಿಯಿಂದ ಆತಂಕಗೊಂಡು ಕೊಡಗಿನಲ್ಲಿ ಕೈಗೊಂಡಂತೆ ನಿಯಮಗಳನ್ನು ಜಾರಿಗೊಳಿಸಿ ಎಂದು ಕೋರುವಂತಾಗಿದೆ. ಕಣ್ಣಿಗೆ ಕಾಣದ ಒಂದು ವೈರಸ್ ವಿರುದ್ದ ಕೊಡಗಿನ ಜನತೆಯೆಲ್ಲರೂ ಸೇರಿ ಒಗ್ಗಟ್ಟಾಗಿ ಹೋರಾಡಿದ ರೀತಿ ನಿಜಕ್ಕೂ ಗಮನಾರ್ಹ. ಈ ಹೋರಾಟದಲ್ಲಿ ಹಲವರ ಪಾತ್ರವಿದೆ. ಹಲವರ ಪರಿಶ್ರಮವಿದೆ. ಕೊರೊನಾ ಸಂಪೂರ್ಣ ಮುಕ್ತವಾಗಿ ಕೊಡಗು ಇನ್ನೂ ಗುರುತಿಸಿಕೊಳ್ಳದೇ ಇದ್ದರೂ ಈವರೆಗೂ ಆತಂಕಕ್ಕೆ ಕಾರಣವಾಗದಂತೆ ನಾವೆಲ್ಲಾ ಜೀವಿಸಲು ಕಾರಣಕರ್ತರಾದ ಕೊರೊನಾ ಸಮರ ಸೈನಿಕರನ್ನು ಸ್ಮರಿಸಲೇಬೇಕಾಗಿದೆ.
ಈಗಲೇ ಕೊಡಗು ಕೊರೊನಾ ಅಪಾಯದಿಂದ ಮುಕ್ತವಾಗಿದೆ ಎಂದು ಭ್ರಮಿಸಬೇಕಾಗಿಲ್ಲ. ಆದರೆ ಕೊರೊನಾ ಸೋಂಕು ಜಿಲ್ಲೆಯಲ್ಲಿ ನಿಯಂತ್ರಣ ದಲ್ಲಿದೆ, ಜನರ, ಜನಪ್ರತಿನಿಧಿಗಳ ಎಲ್ಲಾ ಮುಂಜಾಗ್ರತೆ ಕೈಗೊಂಡಿದ್ದೇವೆ ಎಂಬ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಭರವಸೆಯ ಮಾತುಗಳು ಭವಿಷ್ಯದ ಬಗ್ಗೆ ಜಿಲ್ಲೆಯ ಜನ ಭರವಸೆ ಇಡುವಂತೆ ಮಾಡಿದೆ. ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ. ಪಣ್ಣೇಕರ್, ಜಿ.ಪಂ. ಸಿ.ಇ.ಓ. ಲಕ್ಷ್ಮೀಪ್ರಿಯ ಅವರುಗಳು ಈ ಬಗ್ಗೆ ಎಲ್ಲರ ಸಹಕಾರದ ಸ್ಮರಣೆಯೊಂದಿಗೆ ಮುಂದಡಿ ಯಿಡಲು ಸಾಧ್ಯವಾಯಿತು ಎಂದು ನೆನಪಿಸಿಕೊಂಡಿದ್ದಾರೆ.
ಕೊಡಗಿನ ಪಕ್ಕದ ಜಿಲ್ಲೆಗಳಾದ ಮಂಗಳೂರಿನಲ್ಲಿ 81, ಮೈಸೂರಿನಲ್ಲಿ 2, ಹಾಸನದಲ್ಲಿ 136, ವಯನಾಡು 19, ಕಾಸರಗೋಡು 170 ಪ್ರಕರಣ ಹೀಗೆ ಕೊಡಗನ್ನು ಸುತ್ತುವರಿದ ಜಿಲ್ಲೆಗಳಲ್ಲಿ ಕೊರೊನಾ ಪ್ರಕರಣ ತಾಂಡವವಾಡುತ್ತಿದ್ದರೆ ನಾವು ಮಾತ್ರ ಕೊರೊನಾ ಸೋಂಕಿನ ಆತಂಕದಿಂದ ಬಹುತೇಕ ನಿರಾಳವಾಗಿದ್ದೇವೆ. ಕರ್ನಾಟಕದಲ್ಲಿ ಚಾಮರಾಜನಗರ ಹೊರತು ಪಡಿಸಿದರೆ ಉಳಿದೆಲ್ಲಾ ಜಿಲ್ಲೆಗಳಲ್ಲಿಯೂ ಕೊರೊನಾ ಸೋಂಕಿನ ಪ್ರಕರಣವಿದೆ. ಈ ಪೈಕಿ ಕೊಡಗಿಗೆ ಕೊನೇ ಸ್ಥಾನ ದೊರಕಿರುವುದು ಗಮನಾರ್ಹ. ಜಿಲ್ಲೆ ಹೀಗಿರಲು ಮತ್ತು ಕೊಡಗಿನಲ್ಲಿ ಲಾಕ್ಡೌನ್ ಸಂದರ್ಭ ಕೊರೊನಾ ವಿರುದ್ದದ ಸಮರ ಯಶಸ್ವಿಯಾಗಲು ಪ್ರಮುಖ ಕಾರಣಗಳು.
v ಸೋಂಕು ಹೊರ ರಾಜ್ಯದಿಂದ ಪ್ರವೇಶಿಸದಂತೆ ಕಟ್ಟೆಚ್ಚರ ವಹಿಸಿದ್ದು, ಕೇರಳದಲಿ ಈ ಹಿಂದೆ ಸೋಂಕು ಹೆಚ್ಚಿದ್ದ ಕಾರಣ ಮುನ್ನೆಚ್ಚರಿಕೆಯಿಂದ ಮಾರ್ಚ್ನಲ್ಲಿಯೇ ಮಾಕುಟ್ಟ, ಕುಟ್ಟ, ಕರಿಕೆಗಳಲ್ಲಿನ ಕೇರಳ ಗಡಿ ಬಂದ್ ಮಾಡಿದ್ದು. ಇದರಿಂದಾಗಿ ಕೇರಳದ ಸೋಂಕು ಕೊಡಗಿಗೆ ಪ್ರವೇಶಿಸುವುದು ತಪ್ಪಿತು.
v ಕೊಡಗಿನಲ್ಲಿ ಲಾಕ್ಡೌನ್ ಜಾರಿಯಾದ 53 ದಿನಗಳೂ ಜನರಿಗೆ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಂಡದ್ದು. ತರಕಾರಿ ಸಂತೆಯನ್ನು ಮಡಿಕೇರಿ, ವೀರಾಜಪೇಟೆ, ಕುಶಾಲನಗರದಲ್ಲಿನ ಸರ್ಕಾರಿ ಬಸ್ಸ್ಟಾಂಡ್ ಹಾಗೂ ಮಡಿಕೇರಿ, ಗೋಣಿಕೊಪ್ಪಲುವಿನ ಎಪಿಎಂಸಿ ಮಾರುಕಟ್ಟೆಗಳಂತ ವಿಶಾಲ ಜಾಗದಲ್ಲಿ ಪ್ರಾರಂಭಿಸಿ ಮಾದರಿಯಾದದ್ದು. ಸಾಮಾಜಿಕ ಅಂತರ ಕಾಯ್ದುಕೊಳ್ಳುವಲ್ಲಿ ಈ ವಿಶಾಲವಾದ ಸ್ಥಳಗಳು ಸಹಕಾರಿಯಾಯಿತು.
v ಲಾಕ್ಡೌನ್ನಿಂದಾಗಿ ಮನೆಯೊಳಗೆ ಇರಬೇಕಾದ ಜನತೆಗೆ ಆಹಾರ ಸಮಸ್ಯೆಯಾಗದಂತೆ ದಿನಸಿಗಳನ್ನು ರೇಷನ್ಶಾಪ್ನಲ್ಲಿ ಸಕಾಲಕ್ಕೆ ದೊರಕುವಂತೆ ಮಾಡಿದ್ದು. ವಿವಿಧ ದಾನಿಗಳು ಸಂಕಷ್ಟದಲ್ಲಿರುವವರಿಗೆ ತಡಮಾಡದೇ ನೆರವು ನೀಡಿದ್ದು.
v ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ವಿಳಂಬವಿಲ್ಲದಂತೆ ಕೋವಿಡ್ 19 ಆಸ್ಪತ್ರೆ ಪ್ರಾರಂಭಿಸಿದ್ದು. ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಇತರ ರೋಗಿಗಳಿಗಿದ್ದ ಚಿಕಿತ್ಸಾ ಸೌಲಭ್ಯಗಳನ್ನು ಖಾಸಗಿ ಆಸ್ಪತ್ರೆಯಾಗಿರುವ ಅಶ್ವಿನಿ ಆಸ್ಪತ್ರೆಗೆ ಸ್ಥಳಾಂತರಿ ಸುವ ಮಹತ್ವದ ನಿರ್ಧಾರ ಕೈಗೊಂಡದ್ದು ಕೋವಿಡ್ ಆಸ್ಪತ್ರೆಗೆ ವಿಶೇಷ ಪರಿಗಣನೆ ನೀಡಿ, ವಿಶೇಷ ಕೋವಿಡ್ ವಾರ್ಡ್ಗಳಲ್ಲಿ ಜ್ವರ, ಕೆಮ್ಮು ರೋಗಿಗಳನ್ನು ದಾಖಲಿಸಿ ಗಂಟಲ ದ್ರವ ಮಾದರಿ ಪರೀಕ್ಷೆಗೆ ರವಾನಿಸಿರುವುದು ಸಹಕಾರಿಯಾಯಿತು.
v ಮೈಸೂರಿಗೆ ಗಂಟಲ ದ್ರವ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸುವುದ ರಿಂದಾಗಿ ಉಂಟಾಗುತ್ತಿದ್ದ ವಿಳಂಬ ತಪ್ಪಿಸಲು ಮಡಿಕೇರಿಯಲ್ಲಿ ಕೋವಿಡ್ ಆಸ್ಪತ್ರೆಯಲ್ಲಿಯೇ 1.06 ಕೋಟಿ ರೂಪಾಯಿ ವೆಚ್ಚದಲ್ಲಿ ಕೋವಿಡ್ ಪರೀಕ್ಷೆಗಾಗಿ ನೂತನ ಪ್ರಯೋಗಾಲಯ ತೆರೆದದ್ದು.
v ಕೊಡಗು ಜಿಲ್ಲೆಯಲ್ಲಿನ 650 ರಷ್ಟು ಆಶಾಕಾರ್ಯಕರ್ತೆಯರು, 550 ಅಂಗನವಾಡಿ ಕಾರ್ಯಕರ್ತೆಯರು, ಕಿರಿಯ ಆರೋಗ್ಯ ಸಹಾಯಕಿಯರು, ಪೆÇಲೀಸರು, ಗ್ರಾಮ ಪಂಚಾಯತ್ ಪಿಡಿಓಗಳು, ಕಂದಾಯಾಧಿಕಾರಿಗಳ ನಡುವೇ ಸಮನ್ವಯ ಸಾಧಿಸಿ ಸಂಪರ್ಕ ತಡೆಯಲ್ಲಿರುವವರ ಆರೋಗ್ಯದ ಬಗ್ಗೆ ದಿನನಿತ್ಯ ಗಮನ ನೀಡಿದ್ದು.
v ಸೂಕ್ತ ಕಾಲದಲ್ಲಿ ಶಂಕಿತರೂ ಸೇರಿದಂತೆ ಅಗತ್ಯವಿದ್ದವರನ್ನು ಗೃಹ ಸಂಪರ್ಕ ಮತ್ತು ಸಾಂಸ್ಥಿಕ ತಡೆಗೆ ರವಾನಿಸಿದ್ದು. ಈ ನಿಟ್ಟಿನಲ್ಲಿ ಕೊಡಗು ಗಡಿಗಳ ಚೆಕ್ಪೆÇೀಸ್ಟ್ ನಿರ್ವಹಿಸಿದ ಪೆÇಲೀಸ್, ಕಂದಾಯ, ಆರೋಗ್ಯ, ಅರಣ್ಯ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿಗಳ ಪಾತ್ರ ಅತ್ಯಂತ ಮಹತ್ವದ್ದು.
v ಲಾಕ್ಡೌನ್ ಎರಡನೇ ಹಂತದಲ್ಲಿ ಇಡೀ ರಾಜ್ಯದಲ್ಲಿಯೇ ಕೊಡಗು ಜಿಲ್ಲೆಯಲ್ಲಿ ವಾರದಲ್ಲಿ ಮೂರು ದಿನಗಳ ಕಾಲ ವಿನಾಯಿತಿ ನೀಡಲಾಯಿತು. ದಿನಸಿ, ತರಕಾರಿ, ಹಣ್ಣಿನಂಗಡಿಗಳನ್ನು ತೆರೆಯಲು ಅವಕಾಶ ನೀಡಲಾಯಿತು. ಇದರಿಂದಾಗಿ ಜನರು ಅಗತ್ಯ ಸಾಮಾಗ್ರಿ ಖರೀದಿಸಿ ನಿಟ್ಟುಸಿರುಬಿಡು ವಂತಾಯಿತು.
v ಕೊಡಗು ಪೆÇಲೀಸ್ ಇಲಾಖೆಯಿಂದ ಜಿಲ್ಲೆಯ 15 ಕಡೆ ಚೆಕ್ ಪೆÇೀಸ್ಟ್ ಪ್ರಾರಂಭಿಸಿದ್ದು. ವಿಶೇಷವಾಗಿ ಲಾಕ್ಡೌನ್ ನಿಯಮ ಬಿಗಿಗೊಳಿಸಲು ಕೊಡಗು ಜಿಲ್ಲೆಗೆ ಪ್ರವೇಶಿಸುವವರು ಸಂಪಾಜೆ ಮತ್ತು ಕೊಪ್ಪ ಚೆಕ್ಪೆÇೀಸ್ಟ್ ಮೂಲಕವೇ ಕೊಡಗು ಜಿಲ್ಲೆಗೆ ಪ್ರವೇಶಿಸಬೇಕೆಂಬ ನಿಯಮ ಜಾರಿಗೆ ತಂದದ್ದು.
v ಪ್ರಾರಂಭದ ದಿನದಿಂದಲೂ ಲಾಕ್ಡೌನ್ ಉಲ್ಲಂಘಿಸಿದವರಿಗೆ ಅಲ್ಲಲ್ಲಿ ಪೆÇಲೀಸರು ಬಿಸಿ ಮುಟ್ಟಿಸಿದ್ದು. ಗೃಹರಕ್ಷಕ ದಳ, ವಯರ್ಲೆಸ್ , ಕಂಟ್ರೋಲ್ ರೂಮ್ಗಳ ಅವಿರತ ಕರ್ತವ್ಯವೂ ಲಾಕ್ಡೌನ್ ದಿನಗಳಲ್ಲಿ ಶ್ಲಾಘನಾರ್ಹ.
v ಕಾನೂನು ಪಾಲನೆಯೊಂದಿಗೆ ನೊಂದವರ ಬದುಕಿಗೂ ನೆರವಾದ ಕೊಡಗು ಪೆÇಲೀಸರಿಂದ ಹಸಿದ ಹೊಟ್ಟೆಗೆ ತಣಿವು ಪೆಟ್ಟಿಗೆ ಎಂಬ ವಿನೂತನ ಯೋಜನೆಗೆ ಚಾಲನೆ ನೀಡಿದ್ದು. ದಿನಸಿ ಅಂಗಡಿಗಳಲ್ಲಿ ದಿನಸಿ ಪದಾರ್ಥ ಖರೀದಿಸಿದ ಜನರು, ಸಂಕಷ್ಟದಲ್ಲಿದ್ದವರಿಗೆ ಈ ಪೆಟ್ಟಿಗೆಯ ಮೂಲಕ ಅಗತ್ಯ ವಸ್ತುಗಳನ್ನು ಕೊಡುಗೆಯಾಗಿ ನೀಡುವ ಪರಿಕಲ್ಪನೆ ಉತ್ತಮ ಸ್ಪಂದನಕ್ಕೆ ಪಾತ್ರವಾಯಿತು.
v ಕೊಡಗು ಜಿಲ್ಲಾಧಿಕಾರಿ ಕಛೇರಿಯಲ್ಲಿ ಜನರ ನೆರವಿಗಾಗಿ 1077 ಸಂಖ್ಯೆಯ ಕಂಟ್ರೋಲ್ ರೂಮ್ ಪ್ರಾರಂಭಿಸಿದ್ದು, ವಾಟ್ಸಾಪ್ ಮೂಲಕವೂ ಜಿಲ್ಲೆಯ ಜನರು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡು ಪರಿಹಾರ ಕಂಡುಕೊಳ್ಳಲು ಸಹಕಾರಿಯಾಯಿತು. ಹಾಗೇ ಹೊರಊರುಗಳಿಗೆ ತೆರಳಲು ಪಾಸ್ ವಿತರಣೆ ಸೇರಿದಂತೆ ಕೆಲವೊಂದು ಗೊಂದಲಗಳು, ಸಂದೇಹಗಳನ್ನೂ ಜನರು ಕಂಟ್ರೋಲ್ ರೂಮ್ ಗೆ ಕರೆ ಮಾಡಿ ಪರಿಹರಿಸಿಕೊಂಡರು.
v ಕೊಡಗು ಜಿಲ್ಲೆಯ ವಿವಿಧ ಸರ್ಕಾರಿ ಇಲಾಖಾಧಿ ಕಾರಿಗಳೊಂದಿಗೆ ಫೆÇೀನ್ಇನ್ ಕಾರ್ಯ ಕ್ರಮ ಏರ್ಪಡಿಸಿ ಜನರಿಗೆ ಫೆÇೀನ್ ಮೂಲಕ ಉತ್ತರ ಸಿಗುವಂತೆ ಮಾಡಿದ್ದು ಅನೇಕರಿಗೆ ಉಪಕಾರ ವಾಯಿತು.
v ಕೊಡಗಿನ ಉಸ್ತುವಾರಿ ಸಚಿವರು, ಸಂಸದರು, ಶಾಸಕರು, ಜಿ.ಪಂ. ಸೇರಿದಂತೆ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು ಅಧಿಕಾರಿ ವರ್ಗದ ಕ್ರಮಗಳಿಗೆ ಹಸ್ತಕ್ಷೇಪ ಮಾಡದೇ ನಿಮ್ಮೊಂದಿಗೆ ನಾವಿದ್ದೇವೆ ಎಂದು ಸಹಕರಿಸಿದ ರೀತಿ ಖಂಡಿತಾ ಶ್ಲಾಘನೀಯ. ರಾಜಕಾರಣಿ ಗಳು ಒಗ್ಗಟ್ಟಾಗಿ ಒಮ್ಮತ ತೋರಿ ಕಾರ್ಯಾಂಗಕ್ಕೆ ಬೆಂಬಲ ನೀಡಿದ್ದು ಗಮನಾರ್ಹ.
v ಕೊಡಗು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ತನ್ನ ವಿವಿಧ ಸ್ಥಾನೀಯ ಸಮಿತಿಗಳ ಸಹಕಾರದಲ್ಲಿ ಜಿಲ್ಲಾಡಳಿತಕ್ಕೆ ಅಗತ್ಯ ನೆರವು ನೀಡಿದ್ದು ಮಾದರಿ ಕಾರ್ಯವಾಗಿ ಗುರುತಿಸಲ್ಪಡುತ್ತದೆ.
v ಪೆÇನ್ನಂಪೇಟೆಯ ಶ್ರೀರಾಮಕೃಷ್ಣ ಶಾರದಾಶ್ರಮದ ಶ್ರೀ ಬೋಧಸ್ವರೂಪಾನಂದ ಸ್ವಾಮೀಜಿಗಳ ನೇತೃತ್ವದಲ್ಲಿ ಜಿಲ್ಲೆಯ ಮೂಲೆಮೂಲೆ ಯಲ್ಲಿನ ಸಂಕಷ್ಟದಲ್ಲಿರುವ ಜನತೆಗೆ 30 ಲಕ್ಷ ರೂ. ಮೌಲ್ಯದ ಪರಿಹಾರ ಸಾಮಾಗ್ರಿಗಳನ್ನು ವಿತರಿಸಲಾಗಿದೆ.
v ಕೊಡಗಿನ ಪತ್ರಕರ್ತರು, ಮಾಧ್ಯಮ ಪ್ರತಿನಿಧಿಗಳೂ ವೃತ್ತಿಯೊಂದಿಗೆ ಸಮಾಜ ಸೇವೆಗೂ ಮುಂದಾಗಿ ಮಾಧ್ಯಮ ಸ್ಪಂದನ ಎಂಬ ತಂಡದ ಮೂಲಕ ಸಮಸ್ಯೆಯಲ್ಲಿದ್ದವರಿಗೆ ನೆರವು ನೀಡಿ ರಾಜ್ಯದಲ್ಲಿಯೇ ಸ್ಪಂದನ ಅನುಕರಣೀಯರಾಗಿದ್ದಾರೆ.
v ಮಡಿಕೇರಿ ಚೇಂಬರ್ ಆಫ್ ಕಾಮರ್ಸ್ ಹಾಗೂ ಪೆÇಲೀಸ್ ಇಲಾಖೆ ಜಂಟಿಯಾಗಿ ದಿನಸಿ ಅಂಗಡಿಗಳ ಹೆಸರು ದಾಖಲೀಕರಣ ಮಾಡಿ ವೆಬ್ ಸೈಟ್ ರೂಪಿಸಿ ಈ ಮೂಲಕ ಮನೆಯಲ್ಲಿರುವ ಜನರು ದಿನಸಿ ಪದಾರ್ಥ ಖರೀದಿಸಲು ಹೊಸ ರೀತಿಯಲ್ಲಿ ಅವಕಾಶ ನೀಡಿದ್ದು ಕೂಡ ಮಾದರಿಯಾಗಿದೆ. ಗೋಣಿಕೊಪ್ಪಲು ಕೃಷಿ ವಿಜ್ಞಾನ ಕೇಂದ್ರದವರು ಹಣ್ಣು, ತರಕಾರಿಗಳನ್ನು ಗ್ರಾಮೀಣ ರೈತರಿಂದ ಖರೀದಿಸಿ ಬೆಂಗಳೂರಿನಲ್ಲಿ ಮಾರುಕಟ್ಟೆ ಕಲ್ಪಿಸಿದ್ದೂ ಕೂಡ ಬೆಳೆಗಾರರಿಗೆ ಒಂದಿಷ್ಟು ಆರ್ಥಿಕ ಚೈತನ್ಯ ನೀಡಿದಂತಾಗಿದೆ.
v ಮಡಿಕೇರಿ ಕೊಡವ ಸಮಾಜದವರು ಸಾವಿರಾರು ಜನರಿಗೆ ಊಟೋಪಾಚಾರ ಕಲ್ಪಿಸಿದ್ದು, ಕೊಡವ ಸೇವಾ ಕೇಂದ್ರದವರು ಗ್ರಾಮೀಣ ಜನತೆಯಿಂದ ಉತ್ತಮ ದರಕ್ಕೆ ತರಕಾರಿ ಖರೀದಿಸಿ ಜನರಿಗೆ ತಲುಪಿಸಿದ್ದು, ಸೇವಾ ಕೇಂದ್ರದ ಮೂಲಕ ಹಳ್ಳಿಗರಿಗೆ ದಿನಸಿ ಕಿಟ್ಗಳ ವಿತರಣೆ, ಅಂತರರಾಷ್ಟ್ರೀಯ ಸೇವಾ ಸಂಸ್ಥೆಯಾದ ರೆಡ್ಕ್ರಾಸ್ ಕಾರ್ಮಿಕ ಇಲಾಖೆ, ವಾರ್ತಾ ಇಲಾಖೆಯ ಮೂಲಕ ಕೊರೊನಾ ವಾರಿಯರ್ಸ್ ತಂಡ ಕಟ್ಟಿದ್ದು ಹಾಗೂ ರೆಡ್ ಕ್ರಾಸ್ ಜಿಲ್ಲೆಯಾದ್ಯಂತ ಸಂಕಷ್ಟದಲ್ಲಿರುವವರಿಗೆ ಲಕ್ಷಾಂತರ ರೂ. ಮೌಲ್ಯದ ಕಿಟ್ಗಳನ್ನು ವಿತರಿಸಿ ಗಮನಸಳೆಯಿತು.
v ಗ್ರೀನ್ಸಿಟಿಫೆÇೀರಂ, ಕೊಡಗು ಫಾರ್ ಟುಮಾರೋ, ರೋಟರಿ, ಲಯನ್ಸ್, ಮಿಸ್ಟಿ ಹಿಲ್ಸ್, ಜೇಸೀಸ್, ಮೋಬೀಸ್ ಫೌಂಡೇಶನ್ನಂಥ ವಿವಿಧ ಸಾಮಾಜಿಕ ಸೇವಾ ಸಂಘಗಳ ಸಾಮಾಜಿಕ ಸೇವೆ ಕೂಡ ಶ್ಲಾಘನೀಯ. ನಿವೃತ್ತ ಪೆÇಲೀಸರ ಸಂಘ ಸೇರಿದಂತೆ ಜಿಲ್ಲೆಯ ಹಲವಾರು ಸಂಘ ಸಂಸ್ಥೆಗಳು ಸಂಕಷ್ಟದಲ್ಲಿರುವವರ ನೆರವಿಗೆ ಧಾವಿಸಿ ಮಾನವೀಯತೆ ತೋರಿದರು.
v ಕೊಡಗಿನ ವೈದ್ಯರು, ವೈದ್ಯಕೀಯ ಸಿಬ್ಬಂದಿಗಳು ಕಣ್ಣಿಗೆ ಕಾಣದ ಕೋವಿಡ್-19 ಎಂಬ ಹೊಸ ರೀತಿಯ ವೈರಾಣು ವಿರುದ್ದ ಜೀವ ಪಣಕ್ಕಿಟ್ಟು ಕೆಲಸ ನಿರ್ವಹಿಸುತ್ತಲೇ ಬಂದಿದ್ದಾರೆ. ಈ ವೈರಾಣು ಯಾವ ರೀತಿ ತಮ್ಮ ಮೇಲೆ ಆಕ್ರಮಣ ಮಾಡಿ ಜೀವಕ್ಕೇ ಕುತ್ತು ತರಬಹುದು ಎಂಬ ನಿಖರತೆ ಇಲ್ಲದ ದಿನಗಳಲ್ಲಿಯೂ ರೋಗಿಗಳ ರಕ್ಷಣೆ ಮುಖ್ಯ ಎಂಬಂತೆ ವೈದ್ಯಕೀಯ ಸಿಬ್ಬಂದಿ ಕಾರ್ಯನಿರ್ವಹಿಸಿದ್ದು ಶ್ಲಾಘನೀಯ.
v ಜಿಲ್ಲೆಯಾದ್ಯಂತ ಲಾಕ್ಡೌನ್ನಿಂದಾಗಿ ಮನೆಯಲ್ಲಿ 55-60 ದಿನಗಳು ಜನತೆ ಉಳಿಯುವಂಥ ಸ್ಥಿತಿಯಲ್ಲಿ ಮನೆ-ಮನೆಗೆ ಪತ್ರಿಕೆ ತಲುಪಿಸಿದ ವಿತರಕರು, ಟಿವಿಗಳಲ್ಲಿ ಕೇಬಲ್ ಸಮಸ್ಯೆಯಾಗದಂತೆ ಗಮನ ಹರಿಸಿದ ಕೇಬಲ್ ಸಂಸ್ಥೆಗಳ ಸಿಬ್ಬಂದಿಗಳು, ಗ್ಯಾಸ್ ಸಿಲಿಂಡರ್ ವಿತರಿಸಿದ ಉದ್ಯೋಗಿಗಳು, ಅವಿರತ ವಿದ್ಯುತ್ ನೀಡಿದ ಚೆಸ್ಕಾಂ ಸಿಬ್ಬಂದಿ ದೂರವಾಣಿ ಸಂಪರ್ಕದ ಕಾಳಜಿ ತೋರಿದ ಬಿ.ಎಸ್.ಎನ್.ಎಲ್. ಸೇರಿದಂತೆ ಖಾಸಗಿ ದೂರವಾಣಿ ಸಂಸ್ಥೆಯ ಸಿಬ್ಬಂದಿಗಳು, ಲಾಕ್ಡೌನ್ ನಡುವೆಯೂ ಜಿಲ್ಲಾಡಳಿತದೊಂದಿಗೆ ಅಗತ್ಯ ಕಾರ್ಯಗಳ ಜಾರಿಗೆ ಕೈಜೋಡಿಸಿದ ಸರ್ಕಾರಿ ಇಲಾಖಾ ಸಿಬ್ಬಂದಿಗಳು, ಬ್ಯಾಂಕ್, ಅಂಚೆ ಇಲಾಖೆ ಸಿಬ್ಬಂದಿಗಳು ಮುಂತಾದವರು ಖಂಡಿತಾ ಮರೆಯಲೇ ಬಾರದ ಸೇವಾಕರ್ತರು. ಹೀಗೆ ಕೊಡಗು ಒಂದಾಗಿ ಕೊರೊನಾ ವಿರುದ್ಧ ಹೋರಾಡಿದ ಪ್ರತಿಫಲವೇ ಈಗ ರಾಜ್ಯದಲ್ಲಿಯೇ ಅತ್ಯಂತ ಕಡಿಮೆ ಪ್ರಕರಣ ಕೊಡಗಿನಲ್ಲಿ ಇರಲು ಕಾರಣವಾಗಿದೆ.
ಕೊನೇ ಹನಿ
ಕೊರೊನಾ ವಿರುದ್ಧ ಕೊಡಗಿನ ಜನರ ಸಮರ ಮುಗಿಯಿತೇ ? ಖಂಡಿತಾ ಇಲ್ಲ. ಇದು ಹಲವು ವರ್ಷಗಳವರೆಗೆ, ಸೂಕ್ತ ಲಸಿಕೆ ದೊರಕುವ ವರೆಗೆ ನಿರಂತರ. ಹೀಗಾಗಿ ಕೊಡಗಿನ ಶಿಸ್ತುಬದ್ಧ ಜನ ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ, ಮಾಸ್ಕ್ ಧರಿಸುವಿಕೆ, ಸ್ಯಾನಿಟೈಸರ್ ಬಳಸುವಿಕೆ ಗಳಂತ ಪರಿಣಾಮಕಾರಿ ಕ್ರಮಗಳ ಮೂಲಕ ಕೊರೊನಾ ಸೋಂಕು ತಗುಲದಂತೆ ತಮ್ಮ ಎಚ್ಚರಿಕೆಯಲ್ಲಿ ತಾವಿರಬೇಕು. ಸರ್ಕಾರ ಜನತೆಯ ಆರೋಗ್ಯ ರಕ್ಷಣೆಗೆ ಎಲ್ಲಾ ರೀತಿಯ ಕ್ರಮ ಕೈಗೊಂಡದ್ದಾಗಿದೆ. ಈಗೇನಿದ್ದರೂ ತಮ್ಮ ಜೀವ ತಮ್ಮ ಹೊಣೆ ಎಂಬ ಜವಾಬ್ದಾರಿಯನ್ನು ಕೊಡಗಿನ ಜನರು ಮೆರೆಯಬೇಕು. ಜೀವ ಇದ್ದರೆ ಜಗತ್ತು ಎಂಬುದು ನಿತ್ಯದ ಮಂತ್ರವಾಗ ಬೇಕು.