ಉಚಿತ ಚಿಕಿತ್ಸೆ: ಆಸ್ಪತ್ರೆ ಗುರುತಿಸಲು ಸೂಚನೆ

ನವದೆಹಲಿ, ಮೇ 27: ಕೋವಿಡ್-19 ಸೋಂಕಿತ ರೋಗಿಗಳಿಗೆ ಉಚಿತವಾಗಿ ಅಥವಾ ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ ಪಡೆಯಬಹುದಾದ ಖಾಸಗಿ ಆಸ್ಪತ್ರೆಗಳನ್ನು ಗುರುತಿಸುವಂತೆ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ. ದೇಶಾದ್ಯಂತದ ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್-19 ಚಿಕಿತ್ಸೆಯ ದುಬಾರಿ ವೆಚ್ಚಕ್ಕೆ ಕಡಿವಾಣ ಹಾಕಬೇಕು ಎಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವೀಡಿಯೋ-ಕಾನ್ಫರೆನ್ಸಿಂಗ್ ಮೂಲಕ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೊಬ್ಡೆ ನೇತೃತ್ವದ ನ್ಯಾಯಪೀಠ, ಹಲವು ಖಾಸಗಿ ಆಸ್ಪತ್ರೆಗಳ ನಿರ್ಮಾಣಕ್ಕೆ ಸರ್ಕಾರ ಭೂಮಿಯನ್ನು ಉಚಿತವಾಗಿ ಅಥವಾ ಅತ್ಯಂತ ಕಡಿಮೆ ದರದಲ್ಲಿ ನೀಡಲಾಗಿದೆ. ಈಗ ಅಂತಹ ಕೊರೊನಾ ವೈರಸ್ ಸೋಂಕಿತ ರೋಗಿಗಳಿಗೆ ಉಚಿತವಾಗಿ ಚಿಕಿತ್ಸೆ ನೀಡಬೇಕು ಎಂದಿದೆ. ಆಸ್ಪತ್ರೆಗಾಗಿ ಉಚಿತ ಅಥವಾ ಕಡಿಮೆ ದರಕ್ಕೆ ಭೂಮಿ ಪಡೆದ ಚಾರಿಟೇಬಲ್ ಆಸ್ಪತ್ರೆಗಳನ್ನು ಸರ್ಕಾರ ಗುರುತಿಸಬೇಕು ಎಂದು ಸುಪ್ರೀಂ ಕೋರ್ಟ್, ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರಿಗೆ ಸೂಚಿಸಿದೆ.

ಗಡಿ ಉದ್ವಿಗ್ನ : ಟ್ರಂಪ್ ಮಧ್ಯಸ್ಥಿಕೆ...!

ವಾಷಿಂಗ್ಟನ್, ಮೇ 27: ಗಡಿಯಲ್ಲಿ ಶುರುವಾಗಿರುವ ಉದ್ವಿಗ್ನತೆ ಶಮನಕ್ಕೆ ಭಾರತ ಮತ್ತು ಚೀನಾ ಚರ್ಚಿಸಲು ಸಿದ್ಧರಿದ್ದರೆ ಅಮೆರಿಕ ಮಧ್ಯಸ್ಥಿಕೆ ವಹಿಸಲು ಸಿದ್ಧ ಎಂದು ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಲಡಾಖ್ ಮತ್ತು ಸಿಕ್ಕಿಂನಲ್ಲಿನ ವಾಸ್ತವಿಕ ನಿಯಂತ್ರಣ ರೇಖೆ (ಎಲ್‍ಎಸಿ) ಉದ್ದಕ್ಕೂ ಚೀನಾದ ತನ್ನ ಮಿಲಿಟರ್ ಸೇನೆಯನ್ನು ನಿಯೋಜಿಸಿದ್ದು ಗಸ್ತು ತಿರುಗುತ್ತಿರುವುದರಿಂದ ಆತಂಕ ಸೃಷ್ಟಿಯಾಗಿದೆ ಎಂದು ಭಾರತ ಆರೋಪಿದ ಬೆನ್ನಲ್ಲೆ ಟ್ರಂಪ್ ಅವರು ಈ ಟ್ವೀಟ್ ಮಾಡಿದ್ದಾರೆ. ಮತ್ತೊಂದೆಡೆ ಬೀಜಿಂಗ್ ಸಹ ಭಾರತೀಯ ಸೈನಿಕರು ಚೀನಾದ ಕಡೆಯಿಂದ ಅತಿಕ್ರಮಣ ಮಾಡಿದ್ದಾರೆ ಎಂದು ಆರೋಪಿಸಿದೆ. ಭಾರತ-ಚೀನಾ ನಡುವೆ ಉಲ್ಬಣಗೊಳ್ಳುತ್ತಿರುವ ಗಡಿ ವಿವಾದ ಇತ್ಯರ್ಥಕ್ಕೆ ಅಮೇರಿಕಾ ಸಿದ್ಧವಿದ್ದು ಮಧ್ಯಸ್ಥಿಕೆ ವಹಿಸಲು ಸಮರ್ಥವಾಗಿದೆ. ಈ ಬಗ್ಗೆ ನಾವು ಭಾರತ ಮತ್ತು ಚೀನಾ ಎರಡು ರಾಷ್ಟ್ರಗಳಿಗೂ ತಿಳಿಸಿದ್ದೇವೆ ಎಂದು ಅವರು ಟ್ವೀಟ್ ಮಾಡಿದ್ದಾರೆ.

ವಾಯುಪಡೆಗೆ 2ನೇ ಸ್ಕ್ವಾಡ್ರನ್ ಸೇರ್ಪಡೆ

ಕೊಯಮತ್ತೂರು, ಮೇ 27: ಭಾರತೀಯ ವಾಯುಪಡೆಯ ಶಕ್ತಿಯನ್ನು ಮತ್ತಷ್ಟು ಹೆಚ್ಚಿಸಲು ದೇಶಿ ನಿರ್ಮಿತ ತೇಜಸ್ ಎಂಕೆ-1 ಎಫ್‍ಒಸಿ (ಫೈನಲ್ ಆಪರೇಷನ್ಸ್ ಕ್ಲಿಯರೆನ್ಸ್) ಯುದ್ಧ ವಿಮಾನಗಳ ಎರಡನೇ ಸ್ಕ್ವಾಡ್ರನ್ ಬುಧವಾರ ಕೊಯಮತ್ತೂರಿನ ಸುಲೂರ್ ವಾಯುಪಡೆ ನಿಲ್ದಾಣದಲ್ಲಿ ಅಧಿಕೃತವಾಗಿ ಭಾರತೀಯ ವಾಯುಪಡೆಗೆ ಸೇರ್ಪಡೆಯಾಗಿವೆ. ವಾಯುಪಡೆ ಮುಖ್ಯಸ್ಥ ಆರ್.ಕೆ.ಎಸ್. ಭಡೌರಿಯಾ ಅವರು ತೇಜಸ್ ಯುದ್ಧ ವಿಮಾನ ನಂ. 45 ಸ್ಕ್ವಾಡ್ರನ್ (ಫ್ಲೈಯಿಂಗ್ ಬುಲೆಟ್ಸ್) ಅನ್ನು ವಾಯುನೆಲೆಯಲ್ಲಿ ಹಾರಿಸುವ ಮೂಲಕ ವಾಯುಪಡೆಗೆ ಸೇರಿಸಿಕೊಳ್ಳಲಾಯಿತು. ‘ಫ್ಲೈಯಿಂಗ್ ಬುಲೆಟ್ಸ್-45' ಎಂಬ ಹೆಸರಿನ ಈ ಲಘು ಯುದ್ಧ ವಿಮಾನ ಬೆಂಗಳೂರಿನ ಹೆಚ್‍ಎಎಲ್‍ನಲ್ಲಿ ನಿರ್ಮಾಣವಾಗಿದೆ. ಬಳಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಭಡೌರಿಯಾ ಅವರು, ಭಾರತೀಯ ವಾಯುಪಡೆ ಈಗ ವಿದೇಶಿ ಉತ್ಪನ್ನಗಳಿಗಿಂತ ಸ್ಥಳೀಯ ಉತ್ಪನ್ನಗಳನ್ನು ಅವಲಂಬಿಸಿದೆ ಎಂದರು.