ಮಡಿಕೇರಿ, ಮೇ. 27 : ಪ್ರಸಕ್ತ ಸಾಲಿನ ಬೇಸಿಗೆಯ ಅವಧಿ ಮುಕ್ತಾಯದ ಹಂತದಲ್ಲಿದ್ದು ಜಿಲ್ಲೆಯಲ್ಲಿ ಈ ಬಾರಿ ಜೂನ್ ಮೊದಲ ವಾರದಲ್ಲಿ ಅಂದರೆ, ತಾ. 5 ರಿಂದ ಮುಂಗಾರು ಮಳೆ ಆರಂಭಗೊಳ್ಳುವ ನಿರೀಕ್ಷೆಯಿದೆ. ಭಾರತೀಯ ಹವಾಮಾನ ಇಲಾಖೆಯು ನೀಡಿರುವ ಹವಾಮಾನ ಮುನ್ಸೂಚನೆಯಂತೆ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಮೂಲಕ ಜಿಲ್ಲಾಡಳಿತ ಈ ಕುರಿತು ಪ್ರಕಟಣೆ ನೀಡಿದೆ.ಜೂ. 5 ರಿಂದ ಅಥವಾ ಈ ದಿನಾಂಕದ ಹಿಂದೆ ಅಥವಾ ಮುಂದಿನ ನಾಲ್ಕು ದಿನಗಳಲ್ಲಿ ಈ ವರ್ಷ ಕೊಡಗಿನಲ್ಲಿ ಮುಂಗಾರು ಆರಂಭಗೊಳ್ಳುವ ನಿರೀಕ್ಷೆ ಇರುವದಾಗಿ ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿದೆ. ಜಿಲ್ಲೆಯಲ್ಲಿ ಕಳೆದ ವರ್ಷ ಜೂನ್ ಆರಂಭದಿಂದ ವಾಡಿಕೆಯಂತೆ ಮಳೆ ಕಂಡುಬಂದಿರಲಿಲ್ಲ. ಆದರೆ ನಂತರದ ದಿನಗಳಲ್ಲಿ ಜಿಲ್ಲೆಯಲ್ಲಿ ಮುಂಗಾರು ಮಳೆ ತನ್ನ ಪ್ರತಾಪವನ್ನು ತೋರಿತ್ತು. ಇದರಿಂದಾಗಿ ಪ್ರಾಕೃತಿಕ ವಿಕೋಪಗಳು ಅಲ್ಲಲ್ಲಿ ಸಂಭವಿಸಿತ್ತು. ಈ ಹಿನ್ನೆಲೆಯಲ್ಲಿ ಪ್ರಸಕ್ತ ವರ್ಷದ ಮುಂಗಾರು ಹೇಗಿರುತ್ತದೋ ಎಂಬ ಆತಂಕ ಕೂಡ ಜಿಲ್ಲೆಯ ಜನತೆಯಲ್ಲಿದೆ. ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಪ್ರಕಾರ ಪಸಕ್ತ ವರ್ಷವೂ ಜಿಲ್ಲೆಯಲ್ಲಿ ಮಳೆಯ ಪ್ರಮಾಣ ಹೆಚ್ಚಿರುವ ಸಾಧ್ಯತೆ ಇದೆ ಎನ್ನಲಾಗಿದೆ.

ಮಳೆಗಾಲವನ್ನು ಎದುರಿಸುವ ನಿಟ್ಟಿನಲ್ಲಿ ಈಗಾಗಲೇ ಜಿಲ್ಲಾಡಳಿತವೂ ಅಗತ್ಯ ಮುಂಜಾಗ್ರತಾ ಕ್ರಮಗಳತ್ತ ಸಿದ್ಧತೆ ನಡೆಸಿದೆ.

(ಮೊದಲ ಪುಟದಿಂದ) ಕಳೆದೆರಡು ವರ್ಷಗಳಲ್ಲಿ ಜಿಲ್ಲೆಯಲ್ಲಿ ಉಂಟಾಗಿದ್ದ ದುರ್ಘಟನೆಗಳ ಹಿನ್ನೆಲೆಯಲ್ಲಿ ಈ ಬಾರಿಯೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ (ಎನ್.ಡಿ.ಆರ್.ಎಫ್) ತಂಡವನ್ನು ಮುಂಜಾಗ್ರತೆಗಾಗಿ ನಿಯೋಜಿಸಲು ಜಿಲ್ಲಾಡಳಿತ ಕೋರಿದ್ದು, ಈ ವಾರಾಂತ್ಯದೊಳಗೆ ಎನ್.ಡಿ.ಆರ್.ಎಫ್ ತಂಡವೂ ಜಿಲ್ಲೆಗೆ ಆಗಮಿಸಲಿದೆ.

ಇದೀಗ ಮೇ 27ರ ದಿನಾಂಕ ಕಳೆದಿದ್ದು, ಜಿಲ್ಲೆಯಲ್ಲಿ ಮೋಡ ಕವಿದ ವಾತಾವರಣದೊಂದಿಗೆ ಸಣ್ಣ ಪ್ರಮಾಣದ ಗಾಳಿಯೂ ಕಂಡು ಬರುತ್ತಿದ್ದು, ಮಳೆಗಾಲ ಆರಂಭದ ಮುನ್ಸೂಚನೆ ಈಗಾಗಲೇ ಕಂಡುಬರುತ್ತಿದೆ.

ಕೊರೊನಾ ಲಾಕ್‍ಡೌನ್ ಪರಿಣಾಮದಿಂದ ಜನತೆ ಹಲವು ಸಮಸ್ಯೆಗಳನ್ನು ಇನ್ನೂ ಎದುರಿಸುತ್ತಿದ್ದು, ಇದರ ಬೆನ್ನಲ್ಲೇ ಕೊಡಗಿನ ಮಳೆಗಾಲವೂ ಆರಂಭವಾಗುವ ಕಾಲ ಸನ್ನಿಹಿತವಾಗುತ್ತಿದೆ. ಈ ನಿಟ್ಟಿನಲ್ಲಿ ಜನತೆಯೂ ಕೂಡ ಅಗತ್ಯ ಕೆಲಸ-ಕಾರ್ಯಗಳನ್ನು ಪೂರೈಸಲು, ಸರಕು-ಸಾಮಗ್ರಿಗಳನ್ನು ಸಂಗ್ರಹಿಸಿಕೊಳ್ಳುವ ಪ್ರಯತ್ನದಲ್ಲಿದ್ದಾರೆ.

ಜಿಲ್ಲೆ ಕೃಷಿ ಪ್ರಧಾನವಾಗಿದ್ದು, ಹಲವೆಡೆಗಳಲ್ಲಿ ಕೃಷಿ ಕೆಲಸಕ್ಕಾಗಿ ಗದ್ದೆಗಳನ್ನು ಹಸನುಗೊಳಿಸುವದು, ತೋಡು-ತೊರೆಗಳನ್ನು ಸರಾಗಗೊಳಿಸುವ ನಿಟ್ಟಿನಲ್ಲೂ ಜನತೆ ಮುಂದಾಗಿದ್ದಾರೆ. ಇದರೊಂದಿಗೆ, ಕಾಫಿ ತೋಟಗಳಿಗೆ ಗೊಬ್ಬರ ಪೂರೈಸುವ ಕೆಲಸ ಕಾರ್ಯಗಳೂ ಪ್ರಗತಿಯಲ್ಲಿವೆ.