ಮಡಿಕೇರಿ, ಮೇ 27 : ತಲಕಾವೇರಿ ವನ್ಯಜೀವಿ ರಕ್ಷಿತಾರಣ್ಯ ವ್ಯಾಪ್ತಿಯಲ್ಲಿ ಪಟ್ಟಿ ತೊಡಿಕಾನ ಮಾರ್ಗದಲ್ಲಿ ರಸ್ತೆ ನಿರ್ಮಾಣ ಮಾಡುತ್ತಿರುವ ಯೋಜನೆಗೆ ಪರಿಸರ ಪ್ರೇಮಿ ಸಂಘಟನೆ ವೈಲ್ಡ್ ಲೈಫ್ ಫಸ್ಟ್ ಆಕ್ಷೇಪ ವ್ಯಕ್ತಪಡಿಸಿದೆ ರಸ್ತೆ ಮಾರ್ಗ ನಿರ್ಮಿಸಲು ಈಗಾಗಲೇ ಸಾಕಷ್ಟು ಮರಗಳನ್ನು ಗುರುತಿಸಲಾಗಿದ್ದು, ಕಾಂಕ್ರಿಟ್ ಪಿಲ್ಲರ್‍ಗಳ ಅಳವಡಿಕೆಗೂ ಲೋಕೋಪಯೋಗಿ ಇಲಾಖೆ ಸಜ್ಜಾಗಿರುವ ಬಗ್ಗೆ ವೈಲ್ಡ್ ಲೈಫ್ ಫಸ್ಟ್ ಸಂಸ್ಥೆಯ ಪರವಾಗಿ ಪ್ರಮುಖರಾದ ಕೆ.ಎಂ. ಚಿಣ್ಪ್ಪಪ್ಪ ಹಾಗೂ ಎ.ಎ. ತಮ್ಮು ಪೂವಯ್ಯ ಅವರುಗಳು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಪತ್ರ ಬರೆದು ಕಾಮಗಾರಿಯನ್ನು ಸ್ಥಗಿತಗೊಳಿಸುವಂತೆಯೂ ಇಲ್ಲವಾದಲ್ಲಿ ನ್ಯಾಯಾಲಯದ ಮೂಲಕ ತಡೆಯಾಜ್ಞೆ ತರುವುದಾಗಿಯೂ ಎಚ್ಚರಿಸಿದ್ದಾರೆ. ಈ ಬಗ್ಗೆ ಕೊಡಗು ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಬರೆದಿರುವ ಪತ್ರದಲ್ಲಿ ಯೋಜನೆಗೆ ಸಂಬಂಧಿಸಿದಂತೆ ನಿಯಮಗಳನ್ನು ಮೀರಿ ರಸ್ತೆ ಮಾರ್ಗಕ್ಕೆ ಲೋಕೋಪಯೋಗಿ ಇಲಾಖೆ ಮುಂದಾಗಿರುವುದು ಅಕ್ರಮ ಹಾಗೂ ರಾಷ್ಟ್ರೀಯ ವನ್ಯಜೀವಿ ಅರಣ್ಯ ಪ್ರದೇಶಗಳಲ್ಲಿ ರಸ್ತೆ ನಿರ್ಮಾಣಕ್ಕೆ ಅವಕಾಶವಿಲ್ಲದಿದ್ದರೂ, ಇಲಾಖೆ ಹೇಗೆ ಕಾರ್ಯವನ್ನು ಕೈಗೆತ್ತಿಕೊಂಡಿದೆ ಎಂದು ಪ್ರಶ್ನಿಸಿದ್ದಾರೆ.

2008ರಲ್ಲಿ ಕಡಮಕಲ್ ಸುಬ್ರಹ್ಮಣ್ಯ ರಸ್ತೆ ನಿರ್ಮಾಣಕ್ಕೆ ಮುಂದಾದ ಸಂದರ್ಭದಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ವಿರುದ್ಧ ತಾವುಗಳು ಸರ್ವೋಚ್ಚ ನ್ಯಾಯಾಲಯದಲ್ಲಿ ದಾವೆ ಹೂಡಿದ್ದನ್ನು ಸ್ಮರಿಸಿಕೊಂಡಿದ್ದಾರೆ. ರಸ್ತೆ ನಿರ್ಮಾಣ : 2014ರಲ್ಲಿ ಕೇಂದ್ರ ಪರಿಸರ ಇಲಾಖೆ ರಾಜ್ಯದ ಎಲ್ಲ ಸಂಬಂಧಿತ ಇಲಾಖೆಗಳಿಗೆ ಕಳುಹಿಸಿರುವ ಸುತ್ತೋಲೆಯಲ್ಲಿ ಯಾವುದೇ ರಾಷ್ಟ್ರೀಯ ಉದ್ಯಾನವನದ ಮೂಲಕ ನೂತನ ರಸ್ತೆಗಳು ನಿರ್ಮಾಣ ಮಾಡುವಂತಿಲ್ಲ ಎಂದು ಸ್ಪಷ್ಟವಾಗಿ ಉಲ್ಲೇಖಿಸಿದ್ದನ್ನು ಈ ಸಂದರ್ಭದಲ್ಲಿ ಫಸ್ಟ್ ನೆನಪಿಸಿದೆ. ಉಚ್ಚ ನ್ಯಾಯಾಲಯದ ಆದೇಶವನ್ನು ಧಿಕ್ಕರಿಸಿ ಈ ಮಾರ್ಗದಲ್ಲಿ ರಸ್ತೆ ನಿರ್ಮಾಣಕ್ಕೆ ಇಲಾಖೆ ಸಜ್ಜಾಗಿದೆ ಎಂದು ವೈಲ್ಡ್ ಲೈಫ್ ಫಸ್ಟ್ ಆರೋಪಿಸಿದೆ. ಈ ರಸ್ತೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ದಾಖಲಾತಿಗಳನ್ನು ಪರಿಶೀಲಿಸಿದಾಗ ಅಲ್ಲಿ 12 ಮೀಟರ್ ವ್ಯಾಪ್ತಿಗೆ ದಾರಿಯೇ ಇಲ್ಲದಿರುವುದು ಸ್ಪಷ್ಟವಾಗಿದ್ದು ಇಂತಹ ಸಂದರ್ಭದಲ್ಲಿ (ಮೊದಲ ಪುಟದಿಂದ) ಯಾವ ಕಾರಣದಿಂದ ರಸ್ತೆ ನಿರ್ಮಾಣಕ್ಕೆ ಮುಂದಾಗಿದೆ ಎಂದು ಇವರುಗಳು ಅರಣ್ಯಾಧಿಕಾರಿಗಳನ್ನು ಪ್ರಶ್ನಿಸಿದ್ದಾರೆ.

ತಕ್ಷಣವೇ ಕಾಮಗಾರಿಯನ್ನು ಸ್ಥಗಿತಗೊಳಿಸದಿದ್ದಲ್ಲಿ ತಾವುಗಳು ನ್ಯಾಯಾಲಯದ ಮೊರೆ ಹೋಗುವುದಾಗಿಯೂ ಕಾನೂನು ಉಲ್ಲಂಘನೆ ಮಾಡಿರುವುದಕ್ಕೆ ಇಬ್ಬರು ಅರಣ್ಯ ಅಧಿಕಾರಿಗಳನ್ನು ಜವಾಬ್ದಾರಿ ಮಾಡುವುದಾಗಿಯೂ ಪತ್ರದಲ್ಲಿ ಎಚ್ಚರಿಸಿದ್ದಾರೆ

ಈ ಬಗ್ಗೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಭಾಕರನ್ ಅವರನ್ನು ಪ್ರಶ್ನಿಸಿದಾಗ ತಮಗೆ ಯಾವುದೇ ಪತ್ರ ಇದುವರೆಗೂ ತಲುಪಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ