ಸೋಮವಾರಪೇಟೆ, ಮೇ 27: ಕನ್ನಡದ ಖಾಸಗಿ ವಾಹಿನಿಯೊಂದರಲ್ಲಿ ಮೂಡಿಬರುತ್ತಿದ್ದ ‘ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು’ ರಿಯಾಲಿಟಿ ಶೋ ಮೂಲಕ ತನ್ನ ಪ್ರತಿಭೆಯನ್ನು ಹೊರ ಜಗತ್ತಿಗೆ ತೋರ್ಪಡಿಸಿದ್ದ ಮೂಲತಃ ಪಟ್ಟಣ ಸಮೀಪದ ಐಗೂರು ಗ್ರಾಮ ನಿವಾಸಿ ಮೆಬಿನಾ ಮೈಕಲ್ (23) ಅವರು ನಿನ್ನೆ ಸಂಜೆ ಬೆಂಗಳೂರು-ಚನ್ನರಾಯಪಟ್ಟಣ ಹೆದ್ದಾರಿಯ ಬೆಳ್ಳೂರು ಕ್ರಾಸ್ ಬಳಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ದುರ್ಮರಣಕ್ಕೀಡಾಗಿದ್ದಾರೆ.ಪ್ರಸ್ತುತ ದೊಡ್ಡ ಬಳ್ಳಾಪುರದಲ್ಲಿ ನೆಲೆಸಿದ್ದ ಮೆಬಿನ ಮೈಕಲ್ ನಿನ್ನೆ ದಿನ ತನ್ನ ಕುಟುಂಬದ ಸ್ನೇಹಿತರಾದ ವಿನೋದ್ ಅವರೊಂದಿಗೆ ಸೋಮವಾರಪೇಟೆಯ ಐಗೂರು ಗ್ರಾಮದಲ್ಲಿರುವ ಅಜ್ಜಿ ಮನೆಗೆ ಕಾರಿನಲ್ಲಿ ಆಗಮಿಸುತ್ತಿದ್ದ ಸಂದರ್ಭ, ಬೆಳ್ಳೂರು ಕ್ರಾಸ್ ಬಳಿ ಟ್ರ್ಯಾಕ್ಟರ್‍ಗೆ ಕಾರು ಡಿಕ್ಕಿಯಾಗಿದ್ದು, ಮೆಬಿನಾ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ವಿನೋದ್ ಅವರು ಐಗೂರು ಗ್ರಾಮ ನಿವಾಸಿಯಾಗಿದ್ದು, ಪ್ರಸ್ತುತ ದೊಡ್ಡಬಳ್ಳಾಪುರದಲ್ಲಿ ಕೆಲಸ ಮಾಡುತಿದ್ದಾರೆ. ಇವರ ಪತ್ನಿ ಐಗೂರು ಗ್ರಾಮದಲ್ಲಿದ್ದರಿಂದ ನಿನ್ನೆ ದಿನ ಕಾರಿನಲ್ಲಿ ಐಗೂರಿಗೆ ಆಗಮಿಸುತ್ತಿದ್ದು, ಕುಟುಂಬದ ಸ್ನೇಹಿತರಾಗಿರುವದರಿಂದ ಮೆಬಿನಾ ಸಹ, ತನ್ನ ಅಜ್ಜಿಯ ಮನೆಗೆ ಇದೇ ಕಾರಿನಲ್ಲಿ ಹೊರಟಿದ್ದಾರೆ.

(ಮೊದಲ ಪುಟದಿಂದ) ಬೆಳ್ಳೂರು ಕ್ರಾಸ್ ಬಳಿ ನಿನ್ನೆ ಸಂಜೆ ಟ್ರ್ಯಾಕ್ಟರ್‍ಗೆ ಕಾರು ಡಿಕ್ಕಿಯಾಗಿದ್ದು, ಮುಂಬದಿ ಸೀಟಿನಲ್ಲಿ ಕುಳಿತಿದ್ದ ಮೆಬಿನಾ ಅವರು ಗಂಭೀರ ಗಾಯಗಳೊಂದಿಗೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಾರನ್ನು ಚಲಾಯಿಸುತ್ತಿದ್ದ ತೋಳೂರುಶೆಟ್ಟಳ್ಳಿ ಗ್ರಾಮದ ಅಪ್ಪಚ್ಚು ಎಂಬವರಿಗೂ ಗಂಭೀರ ಗಾಯಗಳಾಗಿದ್ದು ಜೀವನ್ಮರಣ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾರಿನ ಹಿಂಬದಿ ಮಲಗಿದ್ದ ವಿನೋದ್ ಅವರು ಸಣ್ಣಪುಟ್ಟ ಗಾಯಗಳೊಂದಿಗೆ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರು ತೆರಳುತಿದ್ದ ಸಂದರ್ಭ ಬೆಳ್ಳೂರು ಕ್ರಾಸ್ ಬಳಿ, ಹಳ್ಳಿರಸ್ತೆಯಿಂದ ರಾಷ್ಟ್ರೀಯ ಹೆದ್ದಾರಿಯತ್ತ ಆಗಮಿಸುತ್ತಿದ್ದ ಟ್ರ್ಯಾಕ್ಟರ್‍ಗೆ ಡಿಕ್ಕಿಯಾಗಿ, ದುರ್ಘಟನೆ ಸಂಭವಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಇಂದು ಅಪರಾಹ್ನ 3 ಗಂಟೆಗೆ ಸುಂಟಿಕೊಪ್ಪ ಸಂತ ಅಂತೋಣಿ ಶಾಲೆಯ 86-87ನೇ ಸಾಲಿನ ಹಳೆ ವಿದ್ಯಾರ್ಥಿಗಳು 2018 ರಲ್ಲಿ ಮಕ್ಕಳ ದಿನಾಚರಣೆಗೆÉ ಮುಖ್ಯ ಅತಿಥಿಯಾಗಿ ಮೆಬಿನಾ ಅವರನ್ನು ಬರಮಾಡಿಕೊಂಡು ಸನ್ಮಾನಿಸಲಾಗಿತ್ತು.

ಸುಂಟಿಕೊಪ್ಪ ಬ್ಲೂಬಾಯ್ಸ್ ಸಂಸ್ಥೆಯ ವತಿಯಿಂದ ರಾಜ್ಯಮಟ್ಟದ ಡಿ.ಶಿವಪ್ಪ ಮೆಮೋರಿಯಲ್ ಗೋಲ್ಡ್ ಪುಟ್ಬಾಲ್ ಪಂದ್ಯಾವಳಿಯನ್ನು ಈ ಹಿಂದೆ ಮೆಬಿನಾ ಉದ್ಘಾಟಿಸಿದ್ದರು. ವರ್ಗದಲ್ಲಿ ದಿಗ್ಭ್ರಮೆ ಮೂಡಿಸಿದ್ದು, ಕಣ್ಣೀರಧಾರೆ ಹರಿಯುವಂತೆ ಮಾಡಿತು.

ಭರವಸೆ ಮೂಡಿಸಿದ್ದ ಪ್ರತಿಭೆ: ಐಗೂರು ನಿವಾಸಿ ಐರಿನ್ ವಾಸ್ ಅವರ ಪುತ್ರ ಮೈಕಲ್ ಹಾಗೂ ಸುಂಟಿಕೊಪ್ಪದ ಬೆನ್ಸಿ ಅವರ ಪುತ್ರಿಯಾಗಿದ್ದ ಮೆಬಿನಾ, ‘ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು’ ರಿಯಾಲಿಟಿ ಶೋ ಮೂಲಕ ಬಣ್ಣದ ಲೋಕಕ್ಕೆ ಪ್ರವೇಶ ಪಡೆದಿದ್ದರು. ಈ ರಿಯಾಲಿಟಿ ಶೋ ಸೀಸನ್ 4ರಲ್ಲಿ ವಿಜೇತೆಯಾಗುವ ಮೂಲಕ ಗಮನ ಸೆಳೆದಿದ್ದ ಮೆಬಿನಾಗೆ ತಮಿಳು ಸಿನಿಮಾದಲ್ಲಿ ನಾಯಕಿಯಾಗಿ ನಟಿಸುವ ಅವಕಾಶವೂ ಒದಗಿಬಂದಿತ್ತು.

ಕೊರೊನಾ ಲಾಕ್‍ಡೌನ್‍ಗೂ ಮುನ್ನ 15 ದಿನಗಳ ಕಾಲ ಚಿತ್ರೀಕರಣದಲ್ಲಿ ಪಾಲ್ಗೊಂಡು ದೊಡ್ಡಬಳ್ಳಾಪುರಕ್ಕೆ ವಾಪಸ್ ಆಗಿದ್ದರು. ಬಣ್ಣದ ಲೋಕದಲ್ಲಿ ಸಾಧನೆ ಮಾಡುವ ಹಂಬಲ ಹೊಂದಿದ್ದ ಮೆಬಿನಾಗೆ ಮಾಡೆಲಿಂಗ್ ಕ್ಷೇತ್ರದಲ್ಲೂ ಅವಕಾಶಗಳಿದ್ದವು. ಆದರೆ ತನ್ನ ಪ್ರತಿಭೆಗೆ ಅವಕಾಶಗಳು ತೆರೆದುಕೊಳ್ಳುವ ಮೊದಲೇ ಇಹಲೋಕ ತ್ಯಜಿಸಿರುವದು ದುರದೃಷ್ಟ ಎಂದು ಆಕೆಯ ಸ್ನೇಹಿತರು ನೊಂದುಕೊಳ್ಳುತ್ತಿದ್ದಾರೆ.