ಮಣಿ ಉತ್ತಪ್ಪ

ಮಡಿಕೇರಿ, ಮೇ 27: ಸಹಕಾರ ಸಂಘಗಳ ರೈತ ಸದಸ್ಯರಿಗೆ ನೀಡುವ ಸಾಲವನ್ನು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ‘ರುಪೇ ಕಾರ್ಡ್’ ಮೂಲಕವೇ ವಿತರಿಸಬೇಕೆಂದು ಸಹಕಾರ ಇಲಾಖೆ ಇತ್ತೀಚೆಗೆ ಹೊರಡಿ ಸಿರುವ ನೂತನ ಸುತ್ತೋಲೆಯಿಂದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ತಮ್ಮ ಅಸ್ತಿತ್ವವನ್ನೇ ಕಳೆದುಕೊಳ್ಳುವ ಸಾಧ್ಯತೆ ಇದೆ. ಈ ಕುರಿತು ಸರಕಾರ ಮಾ. 30 ರಂದು ಹೊರಡಿಸಿದ್ದ ಸುತ್ತೋಲೆ ಹಿಂಪಡೆ ದಿದ್ದರೂ ವಿ.ಎಸ್.ಎಸ್.ಎನ್.ಗಳು ಗೊಂದಲದಲ್ಲಿವೆ. ಈ ಬಗ್ಗೆ ಇನ್ನೂ ಸ್ಪಷ್ಟತೆ ಸಿಕ್ಕಿಲ್ಲ ಎಂದು ಚೆಟ್ಟಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಲ್ಲಾರಂಡ ಮಣಿ ಉತ್ತಪ್ಪ ಆತಂಕ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ಅವರು, ಸಹಕಾರ ಸಂಘಗಳು ಕೇವಲ ಡಿಸಿಸಿ ಬ್ಯಾಂಕ್‍ನ ಏಜೆಂಟರಂತೆ ಕಾರ್ಯನಿರ್ವಹಣೆ ಮಾಡುವ ಪರಿಸ್ಥಿತಿ ಎದುರಾಗಿದ್ದು, ರೈತರ ಕೃಷಿ ಜೀವನಕ್ಕೆ ಸಹಕಾರಿಯಾಗಿರುವ ಸಹಕಾರ ಸಂಘಗಳ ಅಸ್ತಿತ್ವಕ್ಕೆ ಧÀಕ್ಕೆ ತರಬಲ್ಲ ಸರಕಾರದ ಕ್ರಮಗಳನ್ನು ವಿರೋಧಿಸುವುದಾಗಿ ತಿಳಿಸಿದರು.

ಈ ಸಂಬಂಧವಾಗಿ ಈಗಾಗಲೇ ಮುಖ್ಯಮಂತ್ರಿಗಳು, ಸಹಕಾರ ಸಚಿವರು ಸೇರಿದಂತೆ ಸರಕಾರ ಪ್ರಮುಖರಿಗೆ ಮನವಿ ಸಲ್ಲಿಸಲಾಗಿದ್ದು, ರೈತರಿಗೆ ಹಾಗೂ ಸಹಕಾರ ಸಂಘಗಳಿಗೆ ಮಾರಕವಾಗಿರುವ ಅಂಶಗಳನ್ನು ಕೈಬಿಟ್ಟು ಹಿಂದಿನ ನಿಯಮವನ್ನೇ ಮುಂದುವರಿಸಬೇಕು ಎಂದು ಅವರು ಆಗ್ರಹಿಸಿದರು.

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಮೂಲತಃ ರೈತರ ಆರ್ಥಿಕ ಅನುಕೂಲಕ್ಕಾಗಿ ಪ್ರಾರಂಭಗೊಂಡಿದ್ದು, ಶೇ. 90 ರಷ್ಟು ರೈತರೇ ಸದಸ್ಯರಾಗಿರುತ್ತಾರೆ. ಬಿತ್ತನೆ ಬೀಜ, ರಸಗೊಬ್ಬರ, ಪಡಿತರ ಹಾಗೂ ಇನ್ನಿತರ ಅಗತ್ಯ ಸಾಮಗ್ರಿಗಳನ್ನು ಒದಗಿಸುತ್ತಿರುವ ಸಂಘ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ರೈತರ ಸೇವೆಯಲ್ಲಿ ತೊಡಗಿದೆ. ಆದರೆ ಈಗ ಹೊರಡಿಸಿರುವ ಸುತ್ತೋಲೆಯಿಂದ ರೈತ ಸಮೂಹಕ್ಕೆ ಆರ್ಥಿಕ ಸಂಕಷ್ಟ ಎದುರಾಗುವುದಲ್ಲದೆ ಸಹಕಾರ ಸಂಘಗಳ ಉಳಿವಿನ ಬಗ್ಗೆಯೂ ಸಂಶಯಗಳು ಮೂಡುತ್ತವೆ ಎಂದು ಆಕ್ಷೇಪಿಸಿದರು.

ಅವೈಜ್ಞಾನಿಕ ಅಂಶಗಳನ್ನು ತ್ವರಿತವಾಗಿ ಸರಿಪಡಿಸಿ ಈ ಹಿಂದೆ ಅನುಸರಿಸುತ್ತಿದ್ದ ರೀತಿಯಲ್ಲೇ ಸಾಲ ಹಾಗೂ ಬಡ್ಡಿ, ಸಹಾಯಧನ ನೀಡಿದಲ್ಲಿ ರೈತರ ಆರ್ಥಿಕ ಪರಿಸ್ಥಿತಿ ಸುಧಾರಿಸುವುದಲ್ಲದೆ ಸಹಕಾರ ಸಂಘಗಳು ಕೂಡ ಉಳಿಯ ಬಹುದಾಗಿದೆ ಎಂದು ಅಭಿಪ್ರಾಯಪಟ್ಟ ಅವರು, ಲಾಕ್‍ಡೌನ್‍ನಿಂದಾಗಿ ರೈತರು ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದ್ದು, ತರಾತುರಿಯಲ್ಲಿ ಸಾಲ ವಸೂಲಾತಿಗೆ ಮುಂದಾಗಬಾರದು ಎಂದೂ ಒತ್ತಾಯಿಸಿದರು. ಸಂಘದ ನಿರ್ದೇಶಕರುಗಳಾದÀ ಟಿ.ಎಸ್. ಧನಂಜಯ, ಬಿ.ಎಂ. ಕಾಶಿ ಹಾಗೂ ಪೇರಿಯನ ಪೂಣಚ್ಚ ಉಪಸ್ಥಿತರಿದ್ದರು.