ಗೋಣಿಕೊಪ್ಪ ವರದಿ, ಮೇ 27: ತೂಚಮಕೇರಿ ಗ್ರಾಮದ ಪುಟ್ಟಂಗಡ ಕುಟುಂಬ ರಸ್ತೆಗೆ ಬಿಡುಗಡೆಯಾಗಿರುವ ಅನುದಾನವನ್ನು ಬಳಸಿಕೊಂಡು ಕಾಮಗಾರಿಯನ್ನು ತುರ್ತಾಗಿ ಮುಗಿಸುವಂತೆ ವೀರಾಜಪೇಟೆ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗೆ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಸೂಚನೆ ನೀಡಿದರು.

ಸ್ಥಳಕ್ಕೆ ಭೇಟಿ ನೀಡಿದ ವೀಣಾ ಅಚ್ಚಯ್ಯ ವಸ್ತುಸ್ಥಿತಿ ಬಗ್ಗೆ ಪರಿಶೀಲನೆ ನಡೆಸಿದರು. ರಸ್ತೆ ಅಭಿವೃದ್ಧಿಗೆ ಬಿಡುಗಡೆಯಾಗಿರುವ ಅನುದಾನವನ್ನು ಬಳಕೆ ಮಾಡಲಾಗಿದೆ ಎಂದು ದಾಖಲಿಸಿ ಕಾಮಗಾರಿ ಕೈಗೊಳ್ಳದ ಕ್ರಮಗಳ ಬಗ್ಗೆ ಅಸಮಧಾನ ವ್ಯಕ್ತಪಡಿಸಿದರು. ತಕ್ಷಣ ಕಾಮಗಾರಿ ಪೂರ್ಣಗೊಳಿಸುವಂತೆ ಅಧಿಕಾರಿ ಷಣ್ಮುಗಂ ಅವರಿಗೆ ಸೂಚನೆ ನೀಡಿದರು.

ಕಾಮಗಾರಿ ನಡೆಸದೆ ವಿಳಂಬ ನೀತಿ ಅನುಸರಿಸುತ್ತಿರುವ ಕ್ರಮ ಸರಿಯಲ್ಲ. ಕೂಡಲೇ ರಸ್ತೆ ನಿರ್ಮಾಣ ಮಾಡಿ ಮಳೆಗಾಲಕ್ಕೂ ಮುನ್ನ ಸಂಚಾರ ವ್ಯವಸ್ಥೆಗೆ ಅನುವು ಮಾಡಿಕೊಡುವಂತೆ ಒತ್ತಾಯಿಸಿದರು.

ಈ ಸಂದರ್ಭ ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೀದೇರಿರ ನವೀನ್, ವಕ್ತಾರ ಟಾಟು ಮೊಣ್ಣಪ್ಪ, ಹಿರಿಯರಾದ ಪೆಮ್ಮಂಡ ಪೊನ್ನಪ್ಪ ಇದ್ದರು.