ವೀರಾಜಪೇಟೆ, ಮೇ 27: ಕೊರೊನಾ ವೈರಸ್ ನಿರ್ಬಂಧದಿಂದ ಸುಮಾರು 65 ದಿನಗಳಿಂದ ಇಲ್ಲಿನ ಸಮುಚ್ಚಯ ನ್ಯಾಯಾಲಯಗಳ ಕಾರ್ಯಕಲಾಪ ಸ್ಥಗಿತಗೊಂಡಿದ್ದು, ಜೂನ್ ಮೊದಲ ವಾರದಲ್ಲಿ ಸಮುಚ್ಚಯ ನ್ಯಾಯಾಲಯಗಳನ್ನು ಪುನರಾರಂಭಿಸಲು ಸಿದ್ಧತೆಗಳು ನಡೆಯುತ್ತಿವೆ.

ಈಗಾಗಲೇ ಸರಕಾರದ ಆದೇಶದಂತೆ ಶೇ. 33 ರಷ್ಟು ಸಿಬ್ಬಂದಿಗಳು ಸಮುಚ್ಚಯ ನ್ಯಾಯಾಲಯಗಳ ಕಚೇರಿಗೆ ಹಾಜರಾಗುತ್ತಿದ್ದು, ಇವರುಗಳ ಆರೋಗ್ಯ ತಪಾಸಣೆಗಾಗಿ ಸಮುಚ್ಚಯ ನ್ಯಾಯಾಲಯಗಳ ಗೇಟ್‍ನಲ್ಲಿ ಸ್ಯಾನಿಟೈಸರ್, ಥರ್ಮಲ್ ಸ್ಕ್ರೀನಿಂಗ್ ಉಪಕರಣದೊಂದಿಗೆ ಸಾರ್ವಜನಿಕ ಆಸ್ಪತ್ರೆಯ ಇಬ್ಬರು ಶುಶ್ರೂಷಕಿಯರನ್ನು ನೇಮಕ ಮಾಡಲಾಗಿದೆ. ಸಿಬ್ಬಂದಿಗಳ ಹಾಜರಾತಿಯನ್ನು ದಾಖಲಿಸಲು ವಿಶೇಷ ಸಿಬ್ಬಂದಿಯನ್ನು ಗೇಟ್‍ನ ಬಳಿಯಲ್ಲಿಯೇ ಇರಿಸಲಾಗಿದೆ. ಜಿಲ್ಲಾ ನ್ಯಾಯಾಲಯ ಆದೇಶಿಸುವ ತುರ್ತು ವಿವಾದಗಳಿಗೆ ಮಾತ್ರ ಸಮುಚ್ಚಯ ನ್ಯಾಯಾಲಯದಲ್ಲಿ ಅವಕಾಶವಿದೆ. ನಿಗದಿತ ಸಮಯದಲ್ಲಿ ನಡೆಯುವ ವಿಚಾರಣೆಯ ವಕೀಲರು, ಕಕ್ಷಿದಾರರು ಹೊರತುಪಡಿಸಿದಂತೆ ನ್ಯಾಯಾಲಯದೊಳಗೆ ಇತರ ಯಾರಿಗೂ ಪ್ರವೇಶವಿಲ್ಲವೆನ್ನಲಾಗಿದೆ.