ಕರವೇಯಿಂದ ಆರೋಪ

ಸುಂಟಿಕೊಪ್ಪ, ಮೇ 27: ಚಿಕ್ಲಿಹೊಳೆ ಜಲಾಶಯವನ್ನು ಲಾಕ್‍ಡೌನ್‍ನಿಂದ ಸಂಪೂರ್ಣವಾಗಿ ಬಂದ್ ಮಾಡಲಾಗಿದ್ದರೂ, ರಾತ್ರಿ ವೇಳೆ ತಪಾಸಣಾ ಗೇಟ್ ತೆರೆಯಲಾಗುತ್ತಿದೆ. ಆನೆಕಾಡು ಹಾಗೂ ಮೀನುಕೊಲ್ಲಿ ಅರಣ್ಯದಲ್ಲಿ ರಾತ್ರಿ ವೇಳೆ ವನ್ಯಪ್ರಾಣಿಗಳ ಬೇಟೆ ನಡೆಯುತ್ತಿದ್ದರೂ ಅರಣ್ಯ ಇಲಾಖಾ ಸಿಬ್ಬಂದಿಗಳು ಕಣ್ಣು ಮುಚ್ಚಿ ಕುಳಿತ್ತಿದ್ದಾರೆಂದು, ಕರ್ನಾಟಕ ರಕ್ಷಣಾ ವೇದಿಕೆ ಹೋಬಳಿ ಅಧ್ಯಕ್ಷ ನಾಗೇಶ್ ಪೂಜಾರಿ ತಿಳಿಸಿದ್ದಾರೆ. ಚಿಕ್ಲಿಹೊಳೆ ತಪಾಸಣಾ ಗೇಟ್ ರಾತ್ರಿ ವೇಳೆ 10 ರಿಂದ 11 ಗಂಟೆವರೆಗೆ ತೆರೆದು ವಾಹನಗಳನ್ನು ಒಳಗೆ ಬಿಡಲಾಗುತ್ತಿದೆ. ಚಿಕ್ಲಿಹೊಳೆ ಬಲಭಾಗಕ್ಕೆ ಮೀಸಲು ಅರಣ್ಯ, ಎಡಭಾಗಕ್ಕೆ ಆನೆಕಾಡು ಅರಣ್ಯ ಪ್ರದೇಶವಿದೆ. ರಾತ್ರಿ ವೇಳೆ ವನ್ಯಜೀವಿಗಳನ್ನು ದುಷ್ಕರ್ಮಿಗಳು ಬೇಟೆಯಾಡುತ್ತಿದ್ದು, ಗುಂಡಿನ ಸದ್ದು ಹೆಚ್ಚಾಗದಂತೆ 0.22 ಕೋವಿ ಬಳಸಿ ಗುಂಡು ಹಾರಿಸುತ್ತಿದ್ದಾರೆ. ಅರಣ್ಯ ಇಲಾಖಾ ಅಧಿಕಾರಿಗಳು ಇತ್ತ ಗಮನಹರಿಸುತ್ತಿಲ್ಲ ರಂಗಸಮುದ್ರ ರಸ್ತೆ, ಕಂಬಿಬಾಣೆ ರಸ್ತೆಗೆ 2 ಚೆಕ್‍ಪೋಸ್ಟ್ ಇದ್ದರೂ ಇದು ನಾಮಕಾವಸ್ಥೆಗೆ ಇದೆ. ಅರಣ್ಯಾಧಿಕಾರಿಗಳು ಕರ್ತವ್ಯ ಲೋಪದಿಂದ ವನ್ಯಪ್ರಾಣಿ ಬೇಟೆ, ಮರ ಹನನ ನಡೆಯುತ್ತಿದೆ. ಇಲಾಖಾ ಹಿರಿಯ ಅಧಿಕಾರಿಗಳು ಇದನ್ನು ತಡೆಗಟ್ಟಬೇಕೆಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.