ಸೋಮವಾರಪೇಟೆ, ಮೇ 27: ಸಮೀಪದ ನಗರಳ್ಳಿ ಗ್ರಾಮದಲ್ಲಿ ಅಪೂರ್ಣ ಕಾಮಗಾರಿಯಿಂದಾಗಿ ಸಂಪರ್ಕ ರಸ್ತೆ ಕೊಚ್ಚಿ ಹೋಗುವ ಆತಂಕ ಎದುರಾಗಿದೆ.

ನಗರಳ್ಳಿ ಗ್ರಾಮದಿಂದ ಮಾಗೇರಿ ಸಂಪರ್ಕಿಸಿ, ಕುಂದಳ್ಳಿ ಮಾರ್ಗವಾಗಿ ಶಾಂತಳ್ಳಿ, ಸೋಮವಾರಪೇಟೆ, ಮಾಗೇರಿ ಮಾರ್ಗವಾಗಿ ಸಕಲೇಶಪುರ ಸಂಪರ್ಕ ರಸ್ತೆಯು ಕಳೆದೆರಡು ದಿನಗಳ ಹಿಂದೆ ಸುರಿದ ಮಳೆಗೆ ಕುಸಿಯುತ್ತಿದ್ದು, ಸಂಪರ್ಕ ಕಡಿತಗೊಳ್ಳುವ ಭೀತಿ ಎದುರಾಗಿದೆ.

ಕಳೆದ 20 ವರ್ಷಗಳ ಹಿಂದೆ ಮಲೆನಾಡು ಅಭಿವೃದ್ಧಿ ಯೋಜನೆಯಡಿ ಈ ರಸ್ತೆ ಕಾಮಗಾರಿ ನಡೆದಿದ್ದು, ಅಲ್ಲಿಂದ ಇಲ್ಲಿಯವರೆಗೂ ಯಾವದೇ ಅಭಿವೃದ್ಧಿ ಕಂಡಿಲ್ಲ. ಇದೀಗ ಕೆರೆ ಏರಿಯ ರಸ್ತೆಗೆ ಜಿಲ್ಲಾ ಪಂಚಾಯತ್ ಅನುದಾನದಡಿ ತಡೆಗೋಡೆ ನಿರ್ಮಿಸಿದ್ದು, ಗುಂಡಿಗಳಿಗೆ ಮಣ್ಣು ಸುರಿದು ಕಾಮಗಾರಿಯನ್ನು ಪೂರ್ಣಗೊಳಿಸದ ಹಿನ್ನೆಲೆ, ರಸ್ತೆ ಕುಸಿಯುತ್ತಿದೆ.

ಕೆರೆ ಏರಿಯ ಬದಿಯಲ್ಲಿ 15 ಅಡಿ ಉದ್ದದ ರಿಟೈನಿಂಗ್ ವಾಲ್ ನಿರ್ಮಿಸಿದ್ದು, ರಸ್ತೆಯಿಂದ ತಡೆಗೋಡೆಯವರೆಗೆ ಮಣ್ಣು ಸುರಿಯುವ ಕೆಲಸವನ್ನು ಗುತ್ತಿಗೆದಾರ ಮಾಡಿಲ್ಲ. ಇದರಿಂದಾಗಿ ಇಡೀ ರಸ್ತೆ ಕುಸಿಯುವ ಆತಂಕ ಎದುರಾಗಿದ್ದು, ವಾಹನಗಳ ಸಂಚಾರ ದುಸ್ತರವಾಗಿದೆ ಎಂದು ಸ್ಥಳೀಯರು ಪತ್ರಿಕೆಯೊಂದಿಗೆ ಅಭಿಪ್ರಾಯಿಸಿದ್ದಾರೆ.