ಕುಶಾಲನಗರ, ಮೇ 27: ಕುಶಾಲನಗರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸದಸ್ಯರುಗಳಿಗೆ ಲಾಕ್‍ಡೌನ್ ಹಿನ್ನೆಲೆಯಲ್ಲಿ ಹಲವು ಸೌಲಭ್ಯಗಳನ್ನು ಒದಗಿಸಲು ಆಡಳಿತ ಮಂಡಳಿ ನಿರ್ಧರಿಸಿದೆ. ಜಾಮೀನು ಸಾಲ, ವ್ಯಾಪಾರ ಅಭಿವೃದ್ಧಿ, ಪಿಗ್ಮಿ ಓವರ್ ಡ್ರಾಫ್ಟ್ ಸಾಲಗಳಿಗೆ ಶೇ. 1 ರಂತೆ ಮಧ್ಯಮಾವಧಿ, ಸ್ವಸಹಾಯ ಗುಂಪು, ಆಭರಣ ಸಾಲಗಳಿಗೆ ಶೇ. 5 ರಂತೆ ಸಾಲದ ಮೇಲಿನ ಬಡ್ಡಿ ದರಗಳನ್ನು ಜೂನ್ 1 ರಿಂದ ಚಾಲ್ತಿಗೆ ಬರುವಂತೆ ಕಡಿತಗೊಳಿಸಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ಟಿ.ಆರ್. ಶರವಣಕುಮಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಮೂಲಕ ಸಂಘಕ್ಕೆ 26 ಲಕ್ಷದಷ್ಟು ಹೊರೆಯಾಗಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಲಾಕ್‍ಡೌನ್ ಪರಿಸ್ಥಿತಿಯಿಂದ ಸಮಸ್ಯೆಗೊಳಗಾದ ಜನರಿಗೆ ಸಂಘದ ಸ್ವಂತ ಬಂಡವಾಳದಿಂದ ರೂ. 50 ಸಾವಿರಗಳಷ್ಟು ನೂತನ ಸಾಲ ಯೋಜನೆ ಪ್ರಾರಂಭಿಸಲಾಗಿದೆ. ಸಂಘದ ಸದಸ್ಯರ ಮಕ್ಕಳ ವಿದ್ಯಾಭ್ಯಾಸ, ಖರ್ಚು-ವೆಚ್ಚಕ್ಕೆ ಕೂಡ ನೂತನ ಸಾಲ ಯೋಜನೆ ಪ್ರಾರಂಭಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಬಡ ಕುಟುಂಬ ಸದಸ್ಯರ ಮಕ್ಕಳಿಗೆ 1 ರಿಂದ 10ನೇ ತರಗತಿವರೆಗೆ ವ್ಯಾಸಂಗ ಮಾಡುವ ಓರ್ವ ವಿದ್ಯಾರ್ಥಿಗೆ ಒಂದು ವರ್ಷಕ್ಕೆ ಅವಶ್ಯಕತೆಯಿರುವ ನೋಟ್ ಬುಕ್, ಶಾಲಾ ಬ್ಯಾಗ್, ಲೇಖನಿ ಸಾಮಗ್ರಿ ಸಂಘದಿಂದ ನೀಡಲಾಗುವುದು. ಓರ್ವ ವಿದ್ಯಾರ್ಥಿಗೆ ರೂ. 1500 ರಂತೆ ಅಂದಾಜು 7 ಲಕ್ಷ ರೂ.ಗಳ ಸಾಮಗ್ರಿಗಳನ್ನು ನೀಡಲು ಸಭೆ ತೀರ್ಮಾನಿಸಿದೆ ಎಂದು ಟಿ.ಆರ್. ಶರವಣಕುಮಾರ್ ತಿಳಿಸಿದ್ದಾರೆ.