ಮಡಿಕೇರಿ, ಮೇ 27: ಈಗಾಗಲೇ ಪೂರ್ಣಗೊಂಡಿರುವ ಕಾಮಗಾರಿಗಳಿಗೆ ಬಿಲ್ ಗಳನ್ನು ನೀಡಿದ್ದರೂ ಹಣ ಬಿಡುಗಡೆಯಾಗದೆ ಇರುವ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಕೊಡಗು ಜಿಲ್ಲಾ ಲೋಕೋಪಯೋಗಿ ಗುತ್ತಿಗೆದಾರರ ಸಂಘ, ತಕ್ಷಣ ಹಣ ಪಾವತಿಗೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರಿಗೆ ಮನವಿ ಸಲ್ಲಿಸಿದೆ.

ಜಿಲ್ಲಾ ಖಜಾನೆಯಿಂದ ಕೋಟ್ಯಾಂತರ ಹಣ ಸರ್ಕಾರಕ್ಕೆ ವಾಪಾಸ್ಸಾಗಿದೆ ಎಂದು ಮನವಿ ಪತ್ರದಲ್ಲಿ ಗಮನ ಸೆಳೆಯಲಾಗಿದೆ.

ಇದೇ ವರ್ಷ ಮಾರ್ಚ್ ತಿಂಗಳಿನಲ್ಲಿ ಪಂಚಾಯತ್ ರಾಜ್ ಇಲಾಖೆಯ ಅಂದಾಜು 1 ಕೋಟಿ, ಲೋಕೋಪಯೋಗಿ ಇಲಾಖೆಯ 13 ಕೋಟಿ ಮತ್ತು ಮಡಿಕೇರಿ ತಾಲೂಕು ಪಂಚಾಯತ್‍ನಿಂದ 1.9 ಕೋಟಿ ರೂ.ಗಳು ಸರ್ಕಾರಕ್ಕೆ ಹಿಂದಿರುಗಿದೆ. ಮಾ. 23 ಕ್ಕೆ ಜಿಲ್ಲಾ ಖಜಾನೆಯ ಅಧಿಕಾರಿಗಳು ಯಾವುದೇ ಬಿಲ್ಲುಗಳನ್ನು ಸ್ವೀಕರಿಸದೆ ಸರ್ಕಾರದಿಂದ ಬಿಲ್ಲು ಸ್ವೀಕರಿಸಬಾರದು ಎನ್ನುವ ಆದೇಶ ಬಂದಿರುವುದಾಗಿ ತಿಳಿಸಿರುತ್ತಾರೆ.

ಮಾ. 24, 25 ಮತ್ತು 28 ರಂದು ಲೋಕೋಪಯೋಗಿ ಇಲಾಖೆಗೆ ಸರ್ಕಾರದಿಂದ ಹಣ ಬಿಡುಗಡೆಯಾಗಿದ್ದರೂ ಜಿಲ್ಲಾ ಖಜಾನಾಧಿಕಾರಿಗಳು ಯಾವುದೇ ಬಿಲ್ಲುಗಳನ್ನು ಸ್ವೀಕರಿಸದೆ ಗುತ್ತಿಗೆದಾರರಿಗೆ ತೊಂದರೆಯಾಗಿದೆ ಎಂದು ಪ್ರಮುಖರು ಆರೋಪಿಸಿದರು.

ಹಾಸನ, ಮಂಗಳೂರು ಮತ್ತು ಚಿಕ್ಕಮಗಳೂರು ಜಿಲ್ಲೆಯ ಖಜಾನಾಧಿಕಾರಿಗಳು ಮಾ.30ರ ವರೆಗೂ ಕಾಮಗಾರಿ ಬಿಲ್ಲುಗಳನ್ನು ಸ್ವೀಕರಿಸಿ ಹಣವನ್ನು ಪಾವತಿಸಿದ್ದಾರೆ. ಆದರೆ ಕೊಡಗಿನಲ್ಲಿ ಮಾತ್ರ ಗುತ್ತಿಗೆದಾರರಿಗೆ ಅನ್ಯಾಯವಾಗಿದೆ ಎಂದು ತಿಳಿಸಿದರು.

2019ನೇ ಸಾಲಿನಲ್ಲಿ ಮಳೆಹಾನಿ ಕಾಮಗಾರಿಗಳು ಪೂರ್ಣಗೊಂಡು ಬಿಲ್ಲುಗಳನ್ನು ಜಿಲ್ಲಾ ಖಜಾನೆಗೆ ಪಾವತಿಗಾಗಿ ಸಲ್ಲಿಸಿದರೂ ಜಿಲ್ಲಾ ಖಜಾನಾಧಿಕಾರಿಗಳು ಬಿಲ್ಲುಗಳನ್ನು ಸ್ವೀಕರಿಸದೇ ತೊಂದರೆ ಉಂಟು ಮಾಡಿದ್ದಾರೆ ಎಂದು ಆರೋಪಿಸಿರುವ ಸಂಘದ ಅಧ್ಯಕ್ಷ ಕೆ.ಎ. ರವಿ ಚಂಗಪ್ಪ ಅವರು, ಗುತ್ತಿಗೆದಾರರು ಮುಂದಿನ ಮಳೆಗಾಲದಲ್ಲಿ ತುರ್ತು ಕಾಮಗಾರಿ ಕೈಗೊಳ್ಳಲು ಸಾಧ್ಯವಿಲ್ಲವೆಂದಿದ್ದಾರೆ.

ಈ ಬಗ್ಗೆಯೂ ಪರಿಶೀಲನೆ ನಡೆಸಿ ಈಗಾಗಲೇ ಪೂರ್ಣ ಗೊಂಡಿರುವ ಎಲ್ಲಾ ಕಾಮಗಾರಿಗಳ ಬಿಲ್ಲುಗಳಿಗೆ ಸಂಬಂಧಿಸಿದ ಹಣವನ್ನು ಪಾವತಿ ಮಾಡಲು ಮತ್ತು ಠೆವಣಿ ಇಟ್ಟಿರುವ ಹಣವನ್ನು ಬಿಡುಗಡೆ ಗೊಳಿಸಲು ಕ್ರಮ ಕೈಗೊಳ್ಳಬೇಕೆಂದು ಪ್ರಮುಖರು ಮನವಿ ಮಾಡಿದರು.

ಸಂಘದ ಕಾರ್ಯಕಾರಿ ಮಂಡಳಿಯ ಸದಸ್ಯ ಬಿ.ಸಿ.ರಾಜೀವ್ ಲೋಚನ ಮತ್ತಿತರರು ಮನವಿ ಸಲ್ಲಿಸುವ ಸಂದರ್ಭ ಹಾಜರಿದ್ದರು.