ಮಡಿಕೇರಿ, ಮೇ 26: ಕರ್ನಾಟಕ ಧಾರ್ಮಿಕ ದತ್ತಿ ಇಲಾಖೆಯ ಅಧೀನಕ್ಕೆ ಒಳಪಟ್ಟಿರುವ ದೇಗುಲಗಳನ್ನು ಜೂ. 1 ರಿಂದ ಭಕ್ತರ ದರ್ಶನಕ್ಕೆ ಅನುವು ಮಾಡಿಕೊಡಲಾಗುವುದು ಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ತಿಳಿಸಿದ್ದಾರೆ. ದೇವಾಲಯಗಳಲ್ಲಿ ಅಂತರ ಕಾಯ್ದುಕೊಂಡು ದರ್ಶನಕ್ಕೆ ಅವಕಾಶ ಕಲ್ಪಿಸುವುದಾಗಿಯೂ, ಚರ್ಚ್, ಮಸೀದಿಗಳ ಬಗ್ಗೆ ನಿರ್ಧಾರ ತೆಗೆದುಕೊಂಡಿಲ್ಲವೆಂದು ವಿವರಿಸಿದ್ದಾರೆ. ಆ ಮೇರೆಗೆ ಜಿಲ್ಲೆಯ ತಲಕಾವೇರಿ ಹಾಗೂ ಭಾಗಮಂಡಲ ಕ್ಷೇತ್ರ ಸೇರಿದಂತೆ ಮಡಿಕೇರಿಯ ಶ್ರೀ ಓಂಕಾರೇಶ್ವರ, ಕೋಟೆ ಮಹಾಗಣಪತಿ, ಆಂಜನೇಯ ಗುಡಿ, ಪಾಲೂರು ಮಹಾಲಿಂಗೇಶ್ವರ, ಪಾಡಿ ಶ್ರೀ ಇಗ್ಗುತ್ತಪ್ಪ ಹಾಗೂ ಇರ್ಪು ರಾಮೇಶ್ವರ ದೇಗುಲಗಳು ದರ್ಶನಕ್ಕೆ ಅವಕಾಶವಾಗಲಿದ್ದು, ಈ ಬಗ್ಗೆ ಜಿಲ್ಲಾಡಳಿತದಿಂದ ಅಂತಿಮ ನಿರ್ಧಾರ ಪ್ರಕಟಗೊಳ್ಳಬೇಕಿದೆ.