ಗೋಣಿಕೊಪ್ಪಲು, ಮೇ 26: ಕೇಂದ್ರ ಸರ್ಕಾರ ಕೆ.ಆರ್.ಡಿ.ಸಿ.ಎಲ್. ಮೂಲಕ ರೂ. 2.50 ಕೋಟಿ ಅನುದಾನವನ್ನು ಬಿಡುಗಡೆಗೊಳಿಸಿ ಹಾತೂರು ಪೊನ್ನಂಪೇಟೆ ಮುಖ್ಯರಸ್ತೆಯ ಸಂಪರ್ಕಕ್ಕೆ ಬೇಕಾದ ಬೃಹತ್ ಪ್ರಮಾಣದ ಸೇತುವೆ ಕಾಮಗಾರಿಯನ್ನು ಹಾಗೂ 300 ಮೀ. ರಸ್ತೆ ಕಾಮಗಾರಿಯನ್ನು ಕಳೆದೆರಡು ವರ್ಷಗಳ ಹಿಂದೆ ಆರಂಭಿಸಿತ್ತು. ಈ 300 ಮೀ. ರಸ್ತೆಯು 7.50 ಅಗಲದಲ್ಲಿ ನಿರ್ಮಾಣವಾಗಿದ್ದು, ಗುಣಮಟ್ಟದ ಕಾಮಗಾರಿ ನಡೆದಿದೆ. ಕಾಸರಗೋಡುವಿನ ಲಾಫ್ ಕನ್ಸ್ಟ್ರಕ್ಷನ್ ವಹಿಸಿಕೊಂಡಿರುವ ಈ ಕಾಮಗಾರಿಗೆ ಕೇಂದ್ರ ಸರ್ಕಾರ ಅನುದಾನ ಬಿಡುಗಡೆಗೊಳಿಸಿದೆ. ವೀರಾಜಪೇಟೆ, ಗೋಣಿಕೊಪ್ಪ, ಮುಖ್ಯರಸ್ತೆಯ ಹಾತೂರು ಜಂಕ್ಷನ್‍ನಿಂದ ಆರಂಭವಾಗುವ ಈ ರಸ್ತೆಯು ಇಂಜಿನಿಯರಿಂಗ್ ಕಾಲೇಜು, ಅರಣ್ಯ ಕಾಲೇಜು ಮೂಲಕ ಪೊನ್ನಂಪೇಟೆಗೆ ಸಂಪರ್ಕವಾಗುವ ರಸ್ತೆಯಾಗಿದೆ. ಈ ಸೇತುವೆಯು ರೂ. 2.50 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿದೆ. ಸೇತುವೆ ಹಾಗೂ 300 ಮೀ.ರಸ್ತೆ ನಿರ್ಮಾಣಕ್ಕೆ ಈ ಭಾಗದ ಆಯ್ದ ನಾಲ್ಕು ಕಾಫಿ ಬೆಳೆಗಾರರು ತಮ್ಮ ಸ್ವಂತ ಜಾಗವನ್ನು ಸಾರ್ವಜನಿಕರ ಅನುಕೂಲಕ್ಕಾಗಿ ನಿರ್ಮಾಣ ವಾಗುತ್ತಿರುವ ಸೇತುವೆ ಹಾಗೂ ರಸ್ತೆಗಾಗಿ ತಲಾ 5,10,15 ಸೆಂಟ್ ಜಾಗವನ್ನು ಬಿಟ್ಟುಕೊಡುವ ಮೂಲಕ ಮಾದರಿಯಾಗಿದ್ದಾರೆ.ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಈ ಭಾಗದಲ್ಲಿ ಸೇತುವೆ ನಿರ್ಮಾಣಕ್ಕೆ ಅವಶ್ಯಕತೆಯಿರುವ ಜಾಗವನ್ನು ಬಿಟ್ಟುಕೊಡುವ ಸಂಬಂಧ ಕಾಫಿ ಬೆಳೆಗಾರರೊಂದಿಗೆ ಸಭೆ ನಡೆಸಿ ಸೂಕ್ತ ಪರಿಹಾರ ಒದಗಿಸುವ ಭರವಸೆಯನ್ನು ಸಭೆಯಲ್ಲಿ ಅಧಿಕಾರಿಗಳು ನೀಡಿದ್ದರು. ಜಾಗ ಬಿಟ್ಟುಕೊಟ್ಟ ಪ್ರತಿ ಬೆಳೆಗಾರನಿಗೆ ರೂ. 10 ರಿಂದ 12 ಲಕ್ಷಕ್ಕೂ ಅಧಿಕ ಪರಿಹಾರ ನೀಡುವ ಬಗ್ಗೆ ಸಭೆಯಲ್ಲಿ ಭರವಸೆ ವ್ಯಕ್ತವಾಗಿತ್ತು. ಈ ಬಗ್ಗೆ ಬೆಳೆಗಾರರಿಂದ ಕಾಗದ ಪತ್ರಗಳನ್ನು ಸ್ವೀಕರಿಸಲಾಗಿತ್ತು. ಸೇತುವೆ ಕಾಮಗಾರಿಯ ಸಭೆಗೆ ಜಿಲ್ಲಾಡಳಿತದಿಂದ ನೋಟೀಸ್ ನೀಡಿ ಸಭೆಗೆ ಹಾಜರಾಗುವಂತೆ ಆಯ್ದ ಕಾಫಿ ಬೆಳೆಗಾರರನ್ನು ಜಿಲ್ಲಾಡಳಿತದ ಪರವಾಗಿ ಆಹ್ವಾನಿಸಿ ಚರ್ಚೆ ನಡೆಸಿದ್ದರು. ಸೇತುವೆ ಕಾಮಗಾರಿಯ ವಿಚಾರದಲ್ಲಿ ಗಂಭೀರ ಚರ್ಚೆ ನಡೆಯಿತು. ಜಾಗ ಬಿಟ್ಟುಕೊಟ್ಟ ಕಾಫಿ ಬೆಳೆಗಾರರು ಪರಿಹಾರ ನೀಡುವಂತೆ ಮನವಿ ಮಾಡಿದ್ದರು. ಜಿಲ್ಲಾಡಳಿತ ಮನವಿಗೆ ಸ್ಪಂದಿಸಿ ಪರಿಹಾರ ನೀಡುವ ಬಗ್ಗೆ ಅಂತಿಮ ನಿರ್ಧಾರ ಕೈಗೊಂಡಿತ್ತು. ಈ ಸಭೆಗೆ ಓರ್ವ ಬೆಳೆಗಾರ ಜಿಲ್ಲಾಡಳಿತ ನೀಡಿದ ನೋಟೀಸ್ ತಿರಸ್ಕರಿಸಿ ಸಭೆಗೆ ಹಾಜರಾಗಲಿಲ್ಲ. ಆದರೆ ಗುತ್ತಿಗೆ ಪಡೆದ ಸಂಸ್ಥೆಯು ಸೇತುವೆ ಕಾಮಗಾರಿಗೆ ಚಾಲನೆ ನೀಡಿತ್ತು. ಅವಶ್ಯವಿರುವ ಕಾಮಗಾರಿಗಳನ್ನು ಪೂರೈಸಿ ಕಾಮಗಾರಿ ಸಂಪೂರ್ಣ ಗೊಳಿಸಿತ್ತು. ಕೆಲವೇ ಕೆಲವು ಭಾಗದ ಕಾಮಗಾರಿಗಳು ಬಾಕಿ ಉಳಿದುಕೊಂಡಿದ್ದವು.
ಈ ರಸ್ತೆಯ ಡಿಕ್ಷನ್ ಕಾಫಿ ಕ್ಯೂರಿಂಗ್ ವಕ್ರ್ಸ್‍ನ ಸಮೀಪ ದೊಡ್ಡ ಪ್ರಮಾಣದಲ್ಲಿ ನಿರ್ಮಾಣವಾಗಿರುವ ಸೇತುವೆ ಕೆಲಸ ಬರದಿಂದ ಸಾಗಿತ್ತು. ಕೆ.ಆರ್.ಡಿ.ಸಿ.ಎಲ್. ಸೇತುವೆಯ ಎಡಭಾಗದಲ್ಲಿ ಸಾರ್ವಜನಿಕರು ಸಂಚರಿಸಲು ಫುಟ್‍ಪಾತ್ ನಿರ್ಮಾಣ ಮಾಡಿತ್ತು.
(ಮೊದಲ ಪುಟದಿಂದ) ಫುಟ್‍ಪಾತ್‍ನ ಮಾರ್ಗ ದಿಂದ ಜನ ಸಂಚರಿಸಲು ಅವಕಾಶ ಕಲ್ಪಿಸಿತ್ತು. ಶೇ. 90 ಕೆಲಸ ಪೂರ್ಣಗೊಂಡ ನಂತರ ಮುಂದೆಸಾಗಬೇಕಾದ ಕಾಮಗಾರಿಗೆ ನಿಯಮದಂತೆ ಕಾಫಿ ಬೆಳೆಗಾರರೊಬ್ಬರ ಮೂರು ಸೆಂಟ್ ಜಾಗ ಬಿಡಬೇಕಾಗಿತ್ತು. ಸೇತುವೆ ನಿರ್ಮಾಣಕ್ಕೆ ಜಾಗ ಬಿಡಬೇಕಾದ ಈ ಕಾಫಿ ಬೆಳೆಗಾರ ಕೆಲಸ ಸಂಪೂರ್ಣವಾಗುತ್ತಿದ್ದಂತೆಯೇ ತನ್ನ ಜಾಗವನ್ನು ಬಿಟ್ಟುಕೊಡಲು ಸಾಧ್ಯವಿಲ್ಲ ಎನ್ನುತ್ತಿದ್ದಾರೆ. ಇದರ ಪರಿಣಾಮ ಕೆಲವು ಭಾಗದ ಕಾಮಗಾರಿ ಅರ್ಧಕ್ಕೆ ನಿಂತಿದ್ದು ಗುತ್ತಿಗೆದಾರರು ಕೆಲಸ ನಿಲ್ಲಿಸಿ ತೆರಳಿದ್ದಾರೆ. - ಹೆಚ್.ಕೆ. ಜಗದೀಶ್‍ಸೇತುವೆ ನಿರ್ಮಾಣಕ್ಕೆ ಜಾಗ ಬಿಡಬೇಕಾದ ಕಾಫಿ ಬೆಳೆಗಾರರೊಂದಿಗೆ ರಸ್ತೆ ಬದಿ ಇರುವ 3 ಸೆಂಟ್ ಜಾಗ ಬಿಡುವಂತೆ ಮನವಿ ಮಾಡಲಾಗಿದೆ. ಜಾಗಕ್ಕೆ ಸರ್ಕಾರದ ನಿಯಮದಂತೆ ಪರಿಹಾರ ಲಭ್ಯವಾಗಲಿದೆ. ಆದರೆ ಜಾಗ ಬಿಡಲು ಸಕಾರಣವಿಲ್ಲದೆ ಅನವಶ್ಯಕ ವಿಳಂಬ ಮಾಡುತ್ತಿದ್ದಾರೆ. ಈ ಬಗ್ಗೆ ಜಿಲ್ಲಾಡಳಿತಕ್ಕೆ ಪತ್ರ ಬರೆಯಲಾಗಿದೆ. ಸದ್ಯದಲ್ಲಿಯೇ ಇಲಾಖೆ ವತಿಯಿಂದ ಸರ್ವೆ ಕಾರ್ಯ ನಡೆಯಲಿದೆ. ಸಾರ್ವಜನಿಕರಿಗೆ ಅನುಕೂಲವಾಗುವ ರೀತಿಯಲ್ಲಿ ಕೆಲಸ ನಿರ್ವಹಿಸಲಾಗಿದೆ. ಕೇವಲ ಶೇ. 10 ರಷ್ಟು ಕೆಲಸ ಮಾತ್ರ ಬಾಕಿ ಉಳಿದಿದೆ. ಕಾಮಗಾರಿಗೆ ಬೇಕಾದ ಸಂಪೂರ್ಣ ಹಣವನ್ನು ಗುತ್ತಿಗೆದಾರರು ವಿನಿಯೋಗಿಸಿದ್ದಾರೆ. ಕೆಲಸ ಸಂಪೂರ್ಣಗೊಂಡ ನಂತರ ಬಿಲ್ ಮಂಜೂರಾತಿ ಮಾಡಲಾಗುವುದು.
- ಚಂಗಪ್ಪ, ಇಂಜಿನಿಯರ್ ಕೆ.ಆರ್.ಡಿ.ಸಿ.ಎಲ್.