ಮಡಿಕೇರಿ, ಮೇ 26 : ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ರೂ. 7 ಕೋಟಿಗೂ ಅಧಿಕ ವೆಚ್ಚದೊಂದಿಗೆ ಎಂಟು ವರ್ಷಗಳ ಹಿಂದೆ ರೂಪಿಸಿರುವ ಒಳಾಂಗಣ ಕ್ರೀಡಾಂಗಣ ಹಾಗೂ ವ್ಯಾಯಾಮ ಶಾಲೆ ಸಹಿತ ಈಜುಕೊಳ ಇತ್ಯಾದಿ ಇಂದು ಕ್ರೀಡಾಪ್ರೇಮಿಗಳ ನಂಟು ಕಳೆದುಕೊಂಡು ಕೊರೊನಾ ಸೋಂಕಿನ ನೆರಳಿನಲ್ಲಿ ಸೊರಗತೊಡಗಿದೆ.ಮೊನ್ನೆಯಷ್ಟೆ ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಅವರ ಸಮ್ಮುಖದಲ್ಲಿ ಈ ಒಳಾಂಗಣ ಕ್ರೀಡಾಂಗಣದಲ್ಲಿ ಬ್ಯಾಡ್ಮಿಂಟನ್, ಶಟಲ್ ಆಟಗಳಿಗೆ ಅನುವು ಮಾಡಿ ಕೊಡಬೇಕೆಂದು ತೀರ್ಮಾನಿಸಲಾಗಿತ್ತು. ಈ ಬಗ್ಗೆ ಇಂದು ಸಾರ್ವಜನಿಕರ ದೂರಿನ ಮೇರೆಗೆ ಮೇಲ್ಮನೆ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ ಭೇಟಿ ನೀಡಿ ಖುದ್ದು ಪರಿಶೀಲನೆ ನಡೆಸಿದರು. ಈ ವೇಳೆ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಯ ಉಪನಿರ್ದೇಶಕಿ ಜಯಲಕ್ಷೀಬಾಯಿ ಸಹಿತ ಬಹುತೇಕ ಸಿಬ್ಬಂದಿಗಳು ನಾಪತ್ತೆಯಾಗಿದ್ದರು. ನಿನ್ನೆಯಷ್ಟೆ ದೂರವಾಣಿ ಕರೆ ಮೂಲಕ ಇಂದು 10.30ಕ್ಕೆ ಪರಿಶೀಲನೆ ವೇಳೆ ಸ್ಥಳದಲ್ಲಿ ಇರಬೇಕೆಂದು ಈ ಅಧಿಕಾರಿಗೆ ತಿಳಿಸಿದ್ದಾಗಿ ವಿಧಾನ ಪರಿಷತ್ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.ಪೋಷಕರ ಅಸಮಾಧಾನ: ಕೊರೊನಾ ಲಾಕ್ಡೌನ್ ನಡುವೆ ಈಜುಕೊಳ ಹಾಗೂ ವ್ಯಾಯಾಮ ಶಾಲೆ (ಜಿಮ್) ಹೊರತು, ಒಳಾಂಗಣ ಕ್ರೀಡಾಂಗಣದ ಚಟುವಟಿಕೆಗೆ ಸಚಿವರು ಅವಕಾಶ ಕಲ್ಪಿಸಿದ್ದರೂ, ಕ್ರೀಡಾ ಕೋರ್ಟ್ಗೆ ಬೀಗ ಹಾಕಲಾಗಿದೆ ಎಂದು ಮಕ್ಕಳ ಪೋಷಕರು ಅಸಮಾಧಾನ ತೋಡಿಕೊಂಡರು. ಈ ಬಗ್ಗೆ ಅಲ್ಲಿನ ಒಂದಿಬ್ಬರು ಸಿಬ್ಬಂದಿಯನ್ನು ಕರೆಸಿ ಸುನಿಲ್ ಸುಬ್ರಮಣಿ ವಿಚಾರ ಮಾಡಿದಾಗ, ಅಧಿಕಾರಿ ಊರಿನಲ್ಲಿ ಇಲ್ಲವೆಂಬ ಉತ್ತರ ಬಂತು.
(ಮೊದಲ ಪುಟದಿಂದ) ಹಾವು-ಕಪ್ಪೆ ತಾಣ: ಈ ವೇಳೆ ಆಕ್ರೋಶ ವ್ಯಕ್ತಪಡಿಸಿದ ಕ್ರೀಡಾ ಪ್ರೇಮಿಗಳು ಹಾಗೂ ಮಕ್ಕಳ ಪೋಷಕರು, ಮಳೆಯಲ್ಲಿ ಒಳಾಂಗಣ ಕ್ರೀಡಾಂಗಣದೊಳಗೆ ಸೋರುವಿಕೆ ಯೊಂದಿಗೆ ಯಾವದೇ ಆಟಕ್ಕೆ ಅವಕಾಶವಾಗದು ಎಂದರಲ್ಲದೆ, ವಿಷಪೂರಿತ ಹಾವು, ಕಪ್ಪೆ, ಕ್ರಿಮಿಕೀಟಗಳ ತಾಣವಾಗಿದೆ ಎಂದು ಬೊಟ್ಟು ಮಾಡಿದರು.
ದುಬಾರಿ ಶುಲ್ಕ: ಇಲ್ಲಿ ತರಬೇತಿ ಅಥವಾ ಆಟಕ್ಕೆ ಬರುವವರಿಂದ ಮಾಸಿಕ ರೂ. 500 ಶುಲ್ಕ ಪಡೆಯುತ್ತಿದ್ದರೂ ಕನಿಷ್ಟ ಸೌಲಭ್ಯವಿಲ್ಲವೆಂದು ಟೀಕಿಸಿದರು. ಆಸಕ್ತರು ಬಂದರೆ ಕನಿಷ್ಟ ಕುಳಿತುಕೊಳ್ಳಲು ಕುರ್ಚಿಗಳೇ ಇಲ್ಲವೆಂದು ದೂರಿದರು. ಈ ಬಗ್ಗೆ ಜನಪ್ರತಿನಿಧಿಗಳು ಜಿಲ್ಲಾಡಳಿತದ ಗಮನ ಸೆಳೆದು ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಒತ್ತಾಯಿಸಿದರು.
ಅಲ್ಲದೆ ಇಡೀ ಸಭಾಂಗಣ ಆರೆಂಟು ವರ್ಷದೊಳಗೆ ಸಂಪೂರ್ಣ ಕಾಡುಪಾಲಾಗಿದ್ದು, ಪುಟ್ಟ ಮಕ್ಕಳನ್ನು ಕಳುಹಿಸಲು ಭಯವಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಯೋಗ ಸಭಾಂಗಣ ಅಪೂರ್ಣ
ಕಳೆದ ಸಾಲಿನಲ್ಲಿ ಮೇಲ್ಮನೆ ಸದಸ್ಯರು ರೂ. 30 ಲಕ್ಷ ಅನುದಾನದೊಂದಿಗೆ, ಒಳಾಂಗಣ ಕ್ರೀಡಾಂಗಣಕ್ಕೆ ಹೊಂದಿಕೊಂಡಂತೆ ಯೋಗ ಸಭಾಂಗಣಕ್ಕೆ ಸೂಚಿಸಿದ್ದರೂ, ಭೂಸೇನಾ ನಿಗಮದ ನಿರ್ಲಕ್ಷ್ಯದಿಂದ ಕೆಲಸ ಪೂರ್ಣಗೊಳ್ಳದೆ ಕಳಪೆಯಿದ್ದು, ಜಿಲ್ಲಾಧಿಕಾರಿ ಖುದ್ದು ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ಅಲ್ಲದೆ, ಹತ್ತಾರು ಸಿಮೆಂಟ್ ಚೀಲಗಳಲ್ಲಿ ದಾಸ್ತಾನು ವ್ಯರ್ಥ ವಾಗಿದ್ದು, ಸರಕಾರದ ಹಣ ದುರ್ಬಳಕೆಯಾಗುತ್ತಿದೆ ಎಂದು ಕಳವಳ ಹೊರಗೆಡವಿದರು. ಈ ಬಗ್ಗೆ ಜಿಲ್ಲಾಧಿಕಾರಿಗಳ ಗಮನ ಸೆಳೆದು ಒಳಾಂಗಣ ಕ್ರೀಡಾಂಗಣಕ್ಕೆ ಮರಳಿ ಕಾಯಕಲ್ಪದೊಂದಿಗೆ, ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಕೋರಲಾಗುವದು ಎಂದು ಮೇಲ್ಮನೆ ಸದಸ್ಯರು ಭರವಸೆ ನೀಡಿದರು.