ಭಾಗಮಂಡಲ, ಮೇ 26: ಒಂದೆಡೆ ಎಲ್ಲೆಡೆ ಕೊರೊನಾ ಸಂಕಟದಿಂದ ಲಾಕ್‍ಡೌನ್ ಸಂಕಷ್ಟ ಜೊತೆಗೂಡಿ ಜನರ ಬವಣೆ. ಮತ್ತೊಂದೆಡೆ ತಲಕಾವೇರಿ- ಭಾಗಮಂಡಲ ಸೇರಿದಂತೆ ದೇಶದ ಎಲ್ಲ ದೇವಾಲಯಗಳಲ್ಲಿ ಸಾರ್ವಜನಿಕ ಪೂಜೆ ದರ್ಶನ ಸ್ಥಗಿತ. ಮಗದೊಂದೆಡೆ ನಿರಾಳವಾಗಿ ಹರಿಯುತ್ತಿರುವ ಕಾವೇರಿ, ಕನ್ನಿಕೆಯರು ಹಾಗೂ ಕಾವೇರಿಯ ಇತರ ಉಪನದಿಗಳಲ್ಲಿ ಹೂಳು ತೆಗೆಯುವಿಕೆ, ಗಿಡಗಂಟಿ ತೆಗೆಯುವಿಕೆ ಮೂಲಕ ನದಿಪಾತ್ರವನ್ನು ಶುದ್ಧೀಕರಿಸುವ ಹಾಗೂ ಪ್ರವಾಹ ಬರದಂತೆ ನೀರು ಆಳ ಪ್ರದೇಶದಿಂದ ಹರಿಯುವಂತೆ ಮಾಡುವ ರೂ. 95.11 ಲಕ್ಷ ವೆಚ್ಚದ ಕಾಮಗಾರಿಗಳು ಕಾವೇರಿ ನೀರಾವರಿ ನಿಗಮದಿಂದ ಭರದಿಂದ ಸಾಗುತ್ತಿದೆ. ಜೊತೆ ಜೊತೆಯಲ್ಲಿಯೇ ಭಾಗಮಂಡಲ-ತಲಕಾವೇರಿ ದೇವಸ್ಥಾನ ವ್ಯವಸ್ಥಾಪನಾ ಸಮಿತಿಯಿಂದ ಪಿಂಡ ಪ್ರದಾನ ಹಾಗೂ ಮುಡಿ ತೆಗೆಯಲು ಸಮರ್ಪಕ ವ್ಯವಸ್ಥೆ ಹಾಗೂ ದೇವಾಲಯ ತಾಮ್ರದ ಹೊದಿಕೆ ದುರಸ್ತಿ ಕಾರ್ಯಗಳು ಸುಮಾರು ರೂ. 106 ಲಕ್ಷ ವೆಚ್ಚದಲ್ಲಿ ಸುಗಮವಾಗಿ ನಡೆಯುತ್ತಿದೆ.

ಈ ಹಿಂದೆ ಭಾಗಮಂಡಲದ ಕೆಲವು ಸ್ಥಳೀಯ ನಾಗರಿಕರ ಅರ್ಜಿ ಅನ್ವಯ ರಾಜ್ಯ ಉಚ್ಚ ನ್ಯಾಯಾಲಯವು ಭಾಗಮಂಡಲದಲ್ಲಿ ಕಾವೇರಿ, ಕನ್ನಿಕಾ ನದಿಗಳ ಹಾಗೂ ಕಾವೇರಿಯ ಇತರ ಉಪ ನದಿಗಳ ಶುದ್ಧೀಕರಣ ಕಾರ್ಯ ಕೈಗೊಳ್ಳಲು ನೀರಾವರಿ ನಿಗಮಕ್ಕೆ ಸ್ಪಷ್ಟ ನಿರ್ದೇಶನ ನೀಡಿತ್ತು. ಈ ಸಂಬಂಧ ಕೈಗೊಳ್ಳಲಾದ ಕಾರ್ಯಗಳ ಬಗ್ಗೆ ನ್ಯಾಯಾಲಯಕ್ಕೆ ವರದಿಯನ್ನು ಸಲ್ಲಿಸುವಂತೆಯೂ ಸೂಚಿಸಿತ್ತು. ಅಲ್ಲದೆ, ಸಂಗಮ ಪ್ರದೇಶÀದಲ್ಲಿ, ಚೇರಂಗಾಲ, ತಣ್ಣಿಮಾನಿ ಮೊದಲಾದ ಗ್ರಾಮಗಳಲ್ಲಿ ಪ್ರವಾಹ ಬಾರದಂತೆ, ಭತ್ತದ ಗದ್ದೆಗಳು ಮುಳುಗಡೆಯಾಗದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆಯೂ ನಿರ್ದೇಶನ ನೀಡಿತ್ತು. ಈ ಹಿನ್ನೆಲೆಯಲ್ಲಿ ನೀರಾವರಿ ನಿಗಮವು ಕಾರ್ಯೋನ್ಮುಖವಾಗಿದ್ದು ಇದೀಗ ಲಾಕ್‍ಡೌನ್‍ನಿಂದಾಗಿ ಯಾತ್ರಾರ್ಥಿಗಳ ಆಗಮನವಿಲ್ಲದಿರುವದರಿಂದ ಯೋಜನೆಯನ್ನು ಸುಸೂತ್ರವಾಗಿ ನೆರವೇರಿಸುತ್ತಿದೆ. ಈಗಾಗಲೇ ನದಿಪಾತ್ರಗಳು, ನದಿ ದಂಡೆಗಳು ಶುದ್ಧೀಕರಣದ ಹಾದಿಯಲ್ಲಿದ್ದು ಕಾಮಗಾರಿ ಪೂರ್ಣಗೊಂಡ ಬಳಿಕ ಚಿತ್ರಣವೇ ಬದಲಾಗಲಿದೆ ಎಂದು ಸ್ಥಳೀಯ ನಿವಾಸಿಗಳು ಅಭಿಪ್ರಾಯಪಟ್ಟಿದ್ದಾರೆ. ಒಂದೆಡೆ ಹೆಚ್ಚು ಶುದ್ಧತೆ ಸಾಧ್ಯತೆ, ಮತ್ತೊಂದೆಡೆ ಪ್ರವಾಹವಾಗದಿರುವ ಸಾಧ್ಯತೆಗೆ ಪ್ರಯೋಜನ - ಈ ಕಾರ್ಯ ಯೋಜನೆಯಿಂದ ಕಂಡುಬಂದಿದೆ ಎಂದು ಅನಿಸಿಕೆ ವ್ಯಕ್ತಪಡಿಸಿದ್ದಾರೆ. ಯೋಜನೆಯನ್ವಯ ನದಿಪಾತ್ರದಲ್ಲಿ ಹೂಳೆತ್ತುವಿಕೆ, ಅಲ್ಲದೆ, ನದೀಪಾತ್ರ ಮತ್ತು ನದಿ ದಂಡೆಗÀಳಲ್ಲಿ ಗಿಡಗಂಟಿÉಗಳನ್ನು ತೆರವುಗೊಳಿಸುವಿಕೆ ಪ್ರಗತಿಯಲ್ಲಿದೆ. ಬೆಂಗಳೂರು ಇ.ಐ ಟೆಕ್ನಾಲಜಿ ಮೂಲಕ ಕಾಮಗಾರಿಗೂ ಮುನ್ನ ಸರ್ವೆಕ್ಷಣೆ ಕೈಗೊಳ್ಳಲಾಯಿತು. ಜಲ ಸಂಪನ್ಮೂಲ ಇಲಾಖೆ ಹಾಗೂ ಲೋಕೋಪಯೋಗಿ ಇಲಾಖಾ ದರ

(ಮೊದಲ ಪುಟದಿಂದ) ಸೂಚಿಯನ್ವಯ ರೂ. 95.11 ಲಕ್ಷಕ್ಕೆ ಅಂದಾಜುಪಟ್ಟಿಯನ್ನು ತಯಾರಿಸಲಾಯಿತು. ಪ್ರವಾಹ ನಿವಾರಣಾ ಯೋಜನೆಯನ್ವಯ ಮಂಜೂರಾತಿ ಕಲ್ಪಿಸಲಾಯಿತು. ಯೋಜನೆಯ ಕಾರ್ಯಗಳು ಹೀಗಿವೆ: ಕಾವೇರಿ ನದಿಯ 11.50 ಕಿ.ಮೀ, ಉಪನದಿ ಕನ್ನಿಕೆಯ 6.20 ಕಿ.ಮೀ ಮತ್ತು ಕಾವೇರಿಯ ಇತರ ಉಪನದಿಗಳ 12 ಕಿ.ಮೀ ಉದ್ದಕ್ಕೆ ಗಿಡಗಂಟಿಗಳನ್ನು ಸರಾಸರಿ 10 ರಿಂದ 50 ಮೀಟರ್ ಅಗಲದವರೆಗೆ ತೆರವುಗೊಳಿಸುವದು, ಗಿಡಗಂಟಿಗಳನ್ನು ಭೂಮಿಯೊಳಗೆ ಕೊರೆಯುವಂತೆ ಮಾಡಲು ಆಯ್ದ ಭಾಗಗಳಲ್ಲಿ 6 ಕಿ.ಮೀ.ಉದ್ದದವರೆಗೆ ಕಂದಕಗಳನ್ನು ಅಗೆದು, ತೆಗೆದ ಗಿಡಗಂಟಿಗಳನ್ನು ಆ ಕಂದಕದಲ್ಲಿ ಹಾಕಿ ಮಣ್ಣಿನಿಂದ ಮುಚ್ಚುವದು. ಇದೀಗ ಪ್ರಾರಂಭಿಕವಾಗಿ ಬಿ.ವೆಂಕಟೇಶ್ ಎಂಬ ಗುತ್ತಿಗೆದಾರರೊಂದಿಗೆ ರೂ. 79.18 ಲಕ್ಷ ವೆಚ್ಚದ ಕಾಮಗಾರಿಗೆ ಗುತ್ತಿಗೆ ಕರಾರು ಒಪ್ಪಂದ ಮಾಡಿಕೊಳ್ಳಲಾಗಿದೆ.

ದೇವಾಲಯ ಅಭಿವೃದ್ಧಿ : ಈ ನಡುವೆ ಭಾಗಮಂಡಲ- ತಲಕಾವೇರಿ ವ್ಯವಸ್ಥಾಪನಾ ಸಮಿತಿಯಿಂದ ರೂ.106 ಲಕ್ಷದ ಅಭಿವೃದ್ಧಿ ಯೋಜನೆಯನ್ನು ನಿರ್ಮಿತಿ ಕೇಂದ್ರದ ಮೂಲಕ ನಡೆಸಲಾಗುತ್ತ್ತಿದೆ.

ಈ ಯೋಜನೆಯಲ್ಲಿ ಮುಖ್ಯವಾಗಿ ರೂ. 30 ಲಕ್ಷ ವೆಚ್ಚದಲ್ಲಿ ಸಂಗಮದ ಬಳಿ ಮೆಟ್ಟಿಲುಗಳ ಸನಿಹ ತಡೆಗೋಡೆ ನಿರ್ಮಾಣ, ಮುಡಿ ಶೆಡ್ ನಿರ್ಮಾಣಕ್ಕಾಗಿ ಸುಮಾರು ರೂ.12.50 ಲಕ್ಷದ ಅಂದಾಜು ವೆಚ್ಚ, ಪಿಂಡ ಶೆಡ್ ನಿರ್ಮಾಣಕ್ಕಾಗಿ ಸುಮಾರು ರೂ. 13 ಲಕ್ಷ –ಇದೆಲ್ಲ ಸೇರಿ ಸಂಗಮದ ಸನಿಹ ಅಭಿವೃದ್ಧಿ ಕಾರ್ಯಗಳಿಗಾಗಿ ರೂ. 58 ಲಕ್ಷ ವೆಚ್ಚದ ಕಾಮಗಾರಿಯನ್ನು ನಿರ್ವಹಿಸಲಾಗÀುತ್ತಿದೆ. ಪಿಂಡ ಶೆಡ್ ಹಾಗೂ ಮುಡಿ ಶೆಡ್ ನಿರ್ಮಾಣದ ಮೂಲಕ ಭಕ್ತಾದಿಗಳಿಗೆ ಅನುಕೂಲ ಕಲ್ಪಿಸುವ ಉದ್ದೇಶ ಹೊಂದಲಾಗಿದೆ ಎಂದು ದೇವಾಲಯ ಆಡಳಿತ ಮಂಡಳಿ ಅಭಿಪ್ರಾಯಪಟ್ಟಿದೆ. ಇದೇ ಅಲ್ಲದೆ, ಶ್ರೀ ಭಗಂಡೇಶ್ವರ ದೇಗುಲದ ತಾಮ್ರದ ಛಾವಣಿಯಲ್ಲಿ ಮಳೆಗಾಲದಲ್ಲಿ ನಿರಂತರ ಮಳೆ ನೀರು ಸೋರುತ್ತದೆ. ಇzನ್ನು ತಪ್ಪಿಸಲು ಸುಮಾರು ರೂ. 11 ಲಕ್ಷ ವೆಚ್ಚದಲ್ಲಿ ಈಗಾಗಲೇ ಮೇಲ್ಛಾವಣಿಯ ಮರದ ಕೌಕೋಲುಗಳನ್ನು ಪೂರ್ಣವಾಗಿ ಬದಲಾಯಿಸಲಾಗಿದೆ. ಕೆಲವು ಹಾಳಾದ ತಾಮ್ರದ ಹೊದಿಕೆಗಳನ್ನೂ ಬದಲಾಯಿಸಲಾಗುತ್ತದೆ. ಅಲ್ಲದೆ, ಸೋರುವಿಕೆ ತಡೆಗೆ ಪೂರ್ಣ ದುರಸ್ತಿಯಾಗಬೇಕಿದೆ. ಈ ಕಾರ್ಯಕ್ಕೆ ಒಟ್ಟು ರೂ. 48 ಲಕ್ಷ ವೆಚ್ಚ ಅಂದಾಜು ಮಾಡಲಾಗಿರುವದಾಗಿ ತಿಳಿದುಬಂದಿದೆ.