ಮತ್ತಷ್ಟು ನಿಗೂಢತೆ ಸೃಷ್ಟಿಸಿದ ಪ್ರಕರಣ ಮಡಿಕೇರಿ, ಮೇ 26: ಮಡಿಕೇರಿಯ ನಿವಾಸಿ, ನಗರದ ಪತ್ರಿಕಾ ಭವನದ ಸನಿಹದ ಮನೆಯವರಾಗಿದ್ದ ನಿವೃತ್ತ ಪೊಲೀಸ್ ಕೀಪಾಡಂಡ ನಂಜುಂಡ ಅವರು ನಿಗೂಢವಾಗಿ ನಾಪತ್ತೆಯಾಗಿದ್ದ ಪ್ರಕರಣಕ್ಕೆ ಇದೀಗ ಹೊಸ ತಿರುವು ದೊರೆತಿದೆ. ಚೇರಂಬಾಣೆ ಸನಿಹದ ಪಾಕ ದೇವಾಲಯ ಸನಿಹದ ಅರಣ್ಯದೊಳಗೆ ನಂಜುಂಡ ಅವರ ಉಡುಪು ಪತ್ತೆಯಾಗಿದ್ದು, ಇದು ಅವರದ್ದೇ ಎಂದು ಖಚಿತವಾಗಿದೆ ಎನ್ನಲಾಗಿದೆ. ಆದರೆ ಈ ಸ್ಥಳದಲ್ಲಿ ಕೇವಲ ಅವರ ಪ್ಯಾಂಟ್ - ಶರ್ಟ್ ಹಾಗೂ ಬ್ರಾಸ್‍ಲೆಟ್ ಮತ್ತು ಪರ್ಸ್ ಮಾತ್ರ ಗೋಚರಿಸಿದೆ ಎಂದು ಹೇಳಲಾಗಿದ್ದು, ಒಂದು ವೇಳೆ ಅವರು ಮೃತಪಟ್ಟಿದ್ದೇ ಆದಲ್ಲಿ ದೇಹದ ಮೂಳೆಯಂತಹ ಯಾವುದೇ ಭಾಗಗಳು ಪತ್ತೆಯಾಗದಿರುವುದು ಭಾರೀ ಸಂಶಯಕ್ಕೆ ಎಡೆಮಾಡಿದೆ ಎನ್ನಲಾಗಿದೆ.(ಮೊದಲ ಪುಟದಿಂದ) ‘ಶಕ್ತಿ’ಗೆ ಕೆಲವು ಮೂಲಗಳಿಂದ ತಿಳಿದು ಬಂದಂತೆ ಕೆಲವು ದಿನಗಳ ಹಿಂದೆ ಭಾಗಮಂಡಲ ಪೊಲೀಸ್ ಠಾಣೆಗೆ ಅನಾಮದೇಯ ಪತ್ರವೊಂದು ಹೋಗಿದ್ದು, ಈ ಮೂಲಕ ಇದು ಬೆಳಕಿಗೆ ಬಂದಿದೆ ಎನ್ನಲಾಗಿದೆ. ಈ ಆಧಾರದಲ್ಲಿ ಭಾಗಮಂಡಲ ಹಾಗೂ ಮಡಿಕೇರಿ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದು, ಪರಿಶೀಲನೆ ನಡೆಸಿದ್ದಾರೆ. ಆದರೆ ಕಳೆದ ವರ್ಷ ಈ ವ್ಯಾಪ್ತಿಯಲ್ಲಿ ಭಾರೀ ಮಳೆಯೂ ಸುರಿದಿದ್ದರೂ ಬಟ್ಟೆಗಳು ಮಾತ್ರ ಸ್ವಲ್ಪ ಬಿಳುಚಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿರುವದು ಹಾಗೂ ಮೂಳೆಗಳು ಪತ್ತೆಯಾಗದಿರುವದು ಸಂಶಯವನ್ನು ಇಮ್ಮಡಿಗೊಳಿಸಿದೆ. ಈ ಕುರಿತಾಗಿ ಪೊಲೀಸ್ ಇಲಾಖೆಯಿಂದ ಬಿರುಸಿನ ತನಿಖೆ ಆರಂಭಿಸಲಾಗಿದೆ ಎಂದು ತಿಳಿದುಬಂದಿದ್ದು, ಇನ್ನಷ್ಟೇ ನೈಜಾಂಶ ಬೆಳಕಿಗೆ ಬರಬೇಕಿದೆ.