ಮಡಿಕೇರಿ, ಮೇ. 26 : ಕೊಡಗು ಜಿಲ್ಲೆಯಲ್ಲಿ ಮಳೆಗಾಲ ಆರಂಭದ ಸಮಯ ಸನ್ನಿಹಿತವಾಗುತ್ತಿದ್ದು, ಜಿಲ್ಲಾಡಳಿತ ಮಳೆಗಾಲವನ್ನು ಸಮರ್ಥವಾಗಿ ಎದುರಿಸುವ ನಿಟ್ಟಿನಲ್ಲಿ ಮುಂದಾಗಿದೆ. ಈ ನಿಟ್ಟಿನಲ್ಲಿ ಈಗಾಗಲೇ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಈ ನಿಟ್ಟಿನಲ್ಲಿ ಸಂಬಂಧಿಸಿದ ಇಲಾಖೆಗಳ ಸಭೆಯನ್ನು ನಡೆಸಲಾಗಿದೆ. ಬೋಟುಗಳು ಮತ್ತಿತರ ಅಗತ್ಯ ಸಾಮಗ್ರಿಗಳನ್ನು ಸಂಗ್ರಹಿಸಿ ಸಿದ್ಧತೆ ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಕಳೆದ ಎರಡು ವರ್ಷಗಳಲ್ಲಿ ಸತತವಾಗಿ ಮಳೆಗಾಲದ ಅವಧಿಯಲ್ಲಿ ಭಾರೀ ಮಳೆಯೊಂದಿಗೆ ಸಾಕಷ್ಟು ಆಸ್ತಿಪಾಸ್ತಿ ಹಾಗೂ ಪ್ರಾಣಹಾನಿಯಂತಹ ದುರ್ಘಟನೆಗಳು ಸಂಭವಿಸಿರುವ ಹಿನ್ನೆಲೆಯಲ್ಲಿ ಈ ಬಾರಿಯೂ ಮಳೆಗಾಲ ಆರಂಭಕ್ಕೆ ಮುಂಚಿತವಾಗಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಘಟಕ (ಎನ್.ಡಿ.ಆರ್.ಎಫ್) ತಂಡವನ್ನು ಜಿಲ್ಲೆಗೆ ಕಳುಹಿಸಲು ಜಿಲ್ಲಾಡಳಿತದಿಂದ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಇದೀಗ ಈ ಪ್ರಸ್ತಾವನೆಗೆ ಸರಕಾರದಿಂದ ಒಪ್ಪಿಗೆ ದೊರೆತಿದೆ. ಕೇಂದ್ರ ಸರಕಾರದ ಅಧೀನದಲ್ಲಿ ಬರುವ ಎನ್.ಡಿ. ಆರ್.ಎಫ್. ತಂಡವೊಂದು ಬಹುಶ: ಈ ವಾರಾಂತ್ಯದೊಳಗೆ ಜಿಲ್ಲೆಗೆ ಆಗಮಿಸಲಿದೆ ಎಂದು ಜಿಲ್ಲಾಧಿಕಾರಿ ಗಳು ತಿಳಿಸಿದರು. ಕಳೆದ ವರ್ಷವೂ ಮಳೆಗಾಲಕ್ಕೆ ಮುಂಚಿತವಾಗಿ ಜಿಲ್ಲೆಯಲ್ಲಿ ಬೀಡುಬಿಟ್ಟಿದ್ದ ಎನ್.ಡಿ.ಆರ್.ಎಫ್ ತಂಡ ಜಿಲ್ಲೆಯ ವಿವಿಧೆಡೆಗಳಲ್ಲಿ ತುರ್ತು ಪರಿಸ್ಥಿತಿಯನ್ನು ನಿಭಾಯಿಸುವ

(ಮೊದಲ ಪುಟದಿಂದ) ನಿಟ್ಟಿನಲ್ಲಿ ಅಲ್ಲಲ್ಲಿ ಪ್ರಾತ್ಯಕ್ಷಿಕೆಗಳ ಮೂಲಕ ಜನತೆಗೆ ಮಾರ್ಗದರ್ಶನ ನೀಡಿದನ್ನು ಇಲ್ಲಿ ಸ್ಮರಿಸಬಹುದು. ಇದೀಗ ಈ ಬಾರಿಯೂ ಕಾರ್ಯಾಚರಣೆ ತಂಡದ ಆಗಮನದ ಬಳಿಕ ಇನ್ನಷ್ಟು ಅಗತ್ಯ ಪೂರ್ವ ತಯಾರಿಗಳು ಆರಂಭಗೊಳ್ಳಲಿವೆ.

ಈ ನಡುವೆ ಕೆಲವು ದಿನಗಳ ಹಿಂದೆ ಜಿಲ್ಲಾ ಅಗ್ನಿಶಾಮಕ ದಳವೂ ಮಡಿಕೇರಿ ನಗರದ ಸನಿಹದ ಕೂಟುಹೊಳೆಯಲ್ಲಿ ಬೋಟಿಂಗ್ ಸಹಿತವಾಗಿ ತಾಲೀಮು ನಡೆಸಿದೆ. ಜಿಲ್ಲಾ ಪೊಲೀಸ್ ಇಲಾಖೆ ಯಿಂದಲೂ ಈ ಕುರಿತಾಗಿ ತರಬೇತಿ ಹೊಂದಿರುವ ಸಿಬ್ಬಂದಿಗಳನ್ನು ಒಳಗೊಂಡ ತಂಡವೂ ಈಗಾಗಲೇ ತುರ್ತು ಸಂದರ್ಭ ಎದುರಿಸುವ ನಿಟ್ಟಿನಲ್ಲಿ ತಾಲೀಮು ನಡೆಸಿದೆ.

ವಿವರ: ಈಗಾಗಲೇ ಜಿಲ್ಲೆಯ ಎಲ್ಲಾ ಹೋಬಳಿಗಳಿಗೆ ಒಬ್ಬರಂತೆ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ನೇಮಿಸಲಾಗಿದೆ. ಸದರಿ ಅಧಿಕಾರಿ ಗಳು ತಾವು ನಿಯೋಜಿ ಸಲ್ಪಟ್ಟ ಹೋಬಳಿ ವ್ಯಾಪ್ತಿಯ ಗ್ರಾಮ ಪಂಚಾಯಿತಿಗಳಲ್ಲಿ ಸಭೆ ನಡೆಸಿ, ಈ ಹಿಂದೆ ಪ್ರಕೃತಿ ವಿಕೋಪ ಸಂಭವಿಸಿದ ಪ್ರದೇಶಗಳು, ಪ್ರಕೃತಿ ವಿಕೋಪದ ತರಹೆ ಇತ್ಯಾದಿ ಮಾಹಿತಿಗಳನ್ನು ಕ್ರೋಢಿಕರಿಸಿ, ಮುಂಜಾಗ್ರತೆಯಾಗಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಂಬಂಧಪಟ್ಟ ತಾಲೂಕು ಆಡಳಿತ ದೊಂದಿಗೆ ಚರ್ಚಿಸಿ ಸೂಕ್ತ ಕ್ರಮಗಳನ್ನು ಕೈಗೊಳ್ಳುವ ಕಾರ್ಯದಲ್ಲಿ ಈಗಾಗಲೇ ಕಾರ್ಯಪ್ರವೃತ್ತ ರಾಗಿದ್ದಾರೆ.

ಜಿಲ್ಲೆಯಲ್ಲಿ ಮುಂಗಾರು ಮಳೆ ಸಂದರ್ಭದಲ್ಲಿ ಸಂಭವಿಸಬಹುದಾದ ಪ್ರಕೃತಿ ವಿಕೋಪವನ್ನು ಯಶಸ್ವಿಯಾಗಿ ಎದುರಿಸಲು ಬೇಕಾದ ಬೋಟ್, ಮನಿಲಾ ರೋಪ್, ಆಕ್ಸೆಲ್, ಸರ್ಚ್ ಲೈಟ್, ಛತ್ರಿ, ಗಂಬೂಟು, ರೈನ್ ಕೋಟ್, ಲೈಫ್ ಜಾಕೇಟ್ ಇತ್ಯಾದಿ ಸಾಮಗ್ರಿಗಳನ್ನು ಸಂಗ್ರಹಿಸಿಟ್ಟು ಕೊಳ್ಳಲಾಗಿದ್ದು, ಇನ್ನೂ ಅಗತ್ಯವಿರುವ ಸಂಖ್ಯೆಗೆ ಈಗಾಗಲೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಟೆಂಡರುದಾರರು ಮೇ ಮಾಹೆಯ ಅಂತ್ಯದೊಳಗೆ ಸಾಮಗ್ರಿಗಳನ್ನು ಪೂರೈಸಲಿದ್ದಾರೆ.

ಮುಂಗಾರು ಮಳೆ ಸಂಬಂಧ ಈಗಾಗಲೇ ಜಿಲ್ಲಾಮಟ್ಟದ ಅಧಿಕಾರಿಗಳ ಪೂರ್ವಭಾವಿ ಸಭೆಯನ್ನು ನಡೆಸಲಾಗಿದ್ದು, ಎಲ್ಲಾ ಅಧಿಕಾರಿಗಳು ರಜೆಯ ಮೇಲೆ ತೆರಳದೆ ಕೇಂದ್ರಸ್ಥಾನದಲ್ಲಿ ಲಭ್ಯವಿದ್ದು, ಅವರವರ ಇಲಾಖಾ ವ್ಯಾಪ್ತಿಯಲ್ಲಿ ಅಗತ್ಯ ಮತ್ತು ತುರ್ತು ಕ್ರಮಗಳನ್ನು ಕೈಗೊಳ್ಳುವಂತೆ ನಿರ್ದೇಶನ ನೀಡಲಾಗಿದೆ. ಅಗ್ನಿಶಾಮಕ, ಗೃಹ ರಕ್ಷಕ, ಪೊಲೀಸ್ ಇಲಾಖೆಯಿಂದ ಪ್ರಕೃತಿ ವಿಕೋಪ ಸಂದರ್ಭದಲ್ಲಿ ಉಂಟಾಗಬಹುದಾದ ಸಮಸ್ಯೆಗಳು ಮತ್ತು ಪರಿಹಾರೋಪಾಯಗಳ ಬಗ್ಗೆ ಪೂರ್ವ ತಯಾರಿ ನಡೆಸಲಾಗುತ್ತಿದೆ. ಪರಿಹಾರ ಕೇಂದ್ರಗಳನ್ನು ಸ್ಥಾಪಿಸುವ ಅಗತ್ಯವಿದ್ದಲ್ಲಿ ಅದಕ್ಕೆ ಬೇಕಾದ ಸೂಕ್ತ ಕಟ್ಟಡಗಳನ್ನು ಈಗಾಗಲೇ ಗುರುತಿಸಿ ಟ್ಟುಕೊಳ್ಳಲಾಗಿದೆ. ಜಿಲ್ಲಾಡಳಿತವು ರಾಜ್ಯ ಪ್ರಕೃತಿ ವಿಕೋಪ ಕೇಂದ್ರದೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಭಾರತೀಯ ಹವಾಮಾನ ಇಲಾಖೆಯಿಂದ ನೀಡಲಾಗುವ ಹವಾಮಾನ ಮುನ್ಸೂಚನೆಯನ್ನು ಪಡೆದು, ಜಿಲ್ಲೆಗೆ ಏನಾದರೂ ಪ್ರತಿಕೂಲ ಹವಾಮಾನ ವಿದ್ದಲ್ಲಿ ಅದನ್ನು ಸಾರ್ವಜನಿಕರಿಗೆ ತಿಳಿಸಿ, ಎಚ್ಚರ ಮೂಡಿಸಲು ಜಿಲ್ಲಾಧಿಕಾರಿಗಳ ಕಚೇರಿಯಿಂದ ಹವಾಮಾನ ಮುನ್ಸೂಚನೆಯನ್ನು ಸಾಮಾಜಿಕ ಜಾಲತಾಣ, ವಾಟ್ಸಾಪ್ ಮತ್ತು ಮಾಧ್ಯಮಗಳ ಮುಖಾಂತರ ನೀಡಲಾಗುತ್ತಿದೆ.ಜಿಲ್ಲೆಯಲ್ಲಿ ಸಂಭವಿಸುವ ಯಾವುದೇ ಪ್ರಕೃತಿ ವಿಕೋಪಕ್ಕೆ ತಕ್ಷಣ ಸ್ಪಂದಿಸಲು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಪ್ರಕೃತಿ ವಿಕೋಪ ನಿಯಂತ್ರಣಾ ಕೊಠಡಿ (ಸಂಖ್ಯೆ: 1077, ವಾಟ್ಸಪ್ ಸಂ. 8550001077)ಯನ್ನು ಸನ್ನದ್ಧವಾಗಿರಿಸಿದ್ದು, ಈ ನಿಯಂತ್ರಣಾ ಕೊಠಡಿಯು 24x7 ಕಾರ್ಯನಿರ್ವ ಹಿಸಲಿದೆ. ಅಪಾಯದ ಸ್ಥಳದಲ್ಲಿರುವ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಈಗಾಗಲೇ ಸ್ಥಳೀಯ ಪ್ರಾಧಿಕಾರಿಗಳ ಮೂಲಕ ಜನರಿಗೆ ಸೂಚನೆ ನೀಡಲಾಗಿದೆ. ಜಿಲ್ಲೆಯ ಪ್ರಕೃತಿ ವಿಕೋಪ ನಿಧಿಯಲ್ಲಿ ಸಾಕಷ್ಟು ಅನುದಾನ ಲಭ್ಯವಿದ್ದು, ಅನುದಾನದ ಕೊರತೆ ಇರುವುದಿಲ್ಲ. 2018ನೇ ಸಾಲಿನ ಪ್ರಕೃತಿ ವಿಕೋಪದಿಂದ ಮನೆಗಳನ್ನು ಕಳೆದುಕೊಂಡ ಸಂತ್ರಸ್ಥರಿಗೆ ಈ ವರ್ಷದ ಮುಂಗಾರು ಮಳೆ ಪ್ರಾರಂಭವಾಗುವ ಮುಂಚೆಯೇ ಅವರಿಗಾಗಿ ಸರಕಾರದ ವತಿಯಿಂದ ನಿರ್ಮಿಸಲಾಗುತ್ತಿರುವ ಮನೆಗಳನ್ನು ಹಸ್ತಾಂತರಿಸಲು ಕ್ರಮ ವಹಿಸಲಾಗುತ್ತಿದೆ.