ಬೆನ್ನು ನೋವು, ಸೊಂಟನೋವು, ಬಿ.ಪಿ., ಶುಗರ್, ಹೊಟ್ಟೆನೋವು, ಮಂಡಿನೋವು, ತಲೆ ನೋವು, ಹಲ್ಲುನೋವು, ಕಣ್ಣುನೋವು. ಹೀಗೆ.. ಬೇರೆ ದಿನಗಳಲ್ಲಿ ಕಾಡುತ್ತಿದ್ದ, ಮನಸ್ಸಿಗೆ ಕಿರಿಕಿರಿ ಉಂಟು ಮಾಡುತ್ತಿದ್ದ ಕಾಯಿಲೆಗಳೆಲ್ಲಾ ಲಾಕ್‍ಡೌನ್ ಸಂದರ್ಭ ಎಲ್ಲಿ ಹೋದವು ? ವೈದ್ಯರಲ್ಲಿಗೆ ಹೋಗಲೇಬೇಕು ಎಂದುಕೊಳ್ಳುತ್ತಿದ್ದ ಅನೇಕರು ಆಸ್ಪತ್ರೆಗಳಿಗೆ ಧಾವಿಸದೇ ಎರಡು ತಿಂಗಳಾಗಿದೆ. ತಮ್ಮಲ್ಲಿದ್ದ ಕಾಯಿಲೆಗಳು ಕಾಣದಂತೆ ಮಾಯವಾಗಿರುವ ಭಾವನೆ ಹಲವರಲ್ಲಿ ಮೂಡಿದೆ. ಕೊರೊನಾ ಎಂಬ ಮಹಾಮಾರಿ ಎದುರು ಸಣ್ಣ ರೋಗಗಳೂ ಸೋತು ಹೋದಂತೆ ಮರೆಯಾದಂತಿದೆ. ಹೀಗಾಗಿ ಸಣ್ಣ-ಪುಟ್ಟ ಆರೋಗ್ಯ ಸಮಸ್ಯೆಗಳಿಗೆಲ್ಲಾ ಚಿಕಿತ್ಸಾಲಯಗಳಿಗೆ ಧಾವಿಸುತ್ತಿದ್ದವರು ಈಗ ಕಾಣುತ್ತಿಲ್ಲ. ವಾಯುಮಾಲಿನ್ಯದ ಗಣನೀಯ ಇಳಿಕೆ, ಹೊರಗಿನ ಚಾಟ್ಸ್ ತಿನ್ನುವಿಕೆ ಇಲ್ಲದಿರುವಿಕೆ, ಕೆಲಸದ ಒತ್ತಡವೂ ಇಲ್ಲ. ಅನಗತ್ಯ ಆಲೋಚನೆಗಳೂ ಬರುತ್ತಿಲ್ಲ. ಮುಂತಾದ ಕಾರಣ ಗಳಿಂದ ಸಣ್ಣ ಕಾಯಿಲೆಗಳು ಮಾನವನ ದೇಹದಿಂದ ಕಣ್ಮರೆಯಾದಂತಿದೆ. ಅನೇಕ ದಿನಗಳ ಕಾಲ ಮದ್ಯ ದೊರಕದೇ ಇರುವುದು ಕೂಡ ಮದ್ಯ ವ್ಯಸನಿಗಳ ಆರೋಗ್ಯ ಸುಧಾರಣೆಗೆ ಕಾರಣವಾಗಿದೆ. ಈಗ ಮದ್ಯ ದೊರಕಿ ದರೂ ಮದ್ಯಪಾನ ಮಾಡುವವರ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿರು ವುದೂ ಆರೋಗ್ಯ ಚೇತರಿಕೆ ದೃಷ್ಟಿಯಿಂದ ಉತ್ತಮ ಬೆಳವಣಿಗೆ. ಹಲವು ಸಮಸ್ಯೆಗಳಿಗೆ ಕಾರಣವಾಗುತ್ತಿದ್ದ ಮದ್ಯಪಾನ ಮುಕ್ತ ಜೀವನ ಕ್ರಮವೂ ಹಲವು ರೀತಿಯಲ್ಲಿ ಆರೋಗ್ಯ ಸುಧಾರಣೆಗೆ ಕಾರಣವಾಗಿದೆ. ಎಲ್ಲಕ್ಕಿಂತ ಗಮನಾರ್ಹವಾಗಿ ಲಾಕ್‍ಡೌನ್ ದಿನಗಳಲ್ಲಿ ಮನೆಯೊಳಗೇ ಕುಟುಂಬದ ಸದಸ್ಯರೊಂದಿಗೆ ಸಂತೋಷವಾಗಿ, ನೆಮ್ಮದಿಯಿಂದ ಕಳೆದ ಸಮಯಗಳೂ ಸದಾ ಒತ್ತಡದಲ್ಲಿದ್ದ ಮನಸ್ಸು ಮತ್ತು ದೇಹಕ್ಕೆ ಅಗತ್ಯವಾಗಿದ್ದ ನೆಮ್ಮದಿ, ವಿರಾಮ ನೀಡಿದೆ. ದೇಹದೊಂದಿಗೆ ಮನಸ್ಸೂ ಹಗುರವಾಗಿ ಹೊಸ ಚೈತನ್ಯ ದೇಹಕ್ಕೆ ಬಂದಂತಿದೆ. ಈ ಕಾರಣವೂ ರೋಗ ಮುಕ್ತ ದೇಹಕ್ಕೆ ಕಾರಣವಾಗಿರಬಹುದು.

ಈ ಬಗ್ಗೆ ವೈದ್ಯರು ಏನು ಅಭಿಪ್ರಾಯ ಪಡುತ್ತಾರೆ ?

ಮಡಿಕೇರಿ ಸರ್ಕಾರಿ ಆಸ್ಪತ್ರೆಯ ಹಿರಿಯ ತಜ್ಞ ವೈದ್ಯ ಡಾ. ಅಬ್ದುಲ್ ಅಜೀಜ್ ಈ ಬಗ್ಗೆ ಪ್ರತಿಕ್ರಿಯಿಸಿ, ಮಾರ್ಚ್‍ಗೆ ಮುನ್ನ ಹೋಲಿಸಿದರೆ ಲಾಕ್‍ಡೌನ್‍ನ ಈ 60 ದಿನಗಳಲ್ಲಿ ಆಸ್ಪತ್ರೆಗೆ ಬರುವ ರೋಗಿಗಳ ಸಂಖ್ಯೆ ತೀರಾ ಕಡಿಮೆಯಾಗಿದೆ. ಸಾರಿಗೆ ಸಂಚಾರ ಇಲ್ಲದಿರುವುದು ಪ್ರಮುಖ ಕಾರಣವಾಗಿರಲೂಬಹುದು. ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆಯಿಂದ ವೈರಸ್ ಮೂಲಕ ಹಬ್ಬುವ ಶೀತ, ಜ್ವರ ವ್ಯಾಪಿಸುತ್ತಿಲ್ಲ ಎಂದರು. ಕೊಡಗಿನ ಪಕ್ಕದ ಜಿಲ್ಲೆಗಳ ಗ್ರಾಮೀಣ ಪ್ರದೇಶಗಳಿಂದ ಮಡಿಕೇರಿ ಸರ್ಕಾರಿ ಆಸ್ಪತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಚಿಕಿತ್ಸೆಗೆ ಬರುತ್ತಿದ್ದರು. ಆದರೆ 7 ವಾರ ಅಂತರ ಜಿಲ್ಲಾ ಗಡಿ ಬಂದ್ ಮಾಡಿರುವುದರಿಂದಾಗಿ ಆ ಪ್ರದೇಶಗಳ ಜನ ರೋಗಿಗಳು ಮಡಿಕೇರಿ ಆಸ್ಪತ್ರೆಯತ್ತ ಬರಲಾಗಲಿಲ್ಲ ಎಂದೂ ಡಾ. ಅಜೀಜ್ ಅಭಿಪ್ರಾಯಪಟ್ಟರು.

ವೀರಾಜಪೇಟೆಯ ಹಿರಿಯ ವೈದ್ಯ ಡಾ.ಎಸ್.ವಿ.ನರಸಿಂಹನ್ ಹೇಳುವಂತೆ, ಶೇ. 80 ರಷ್ಟು ಕಾಯಿಲೆಗಳು ಆಹಾರ ಸಂಬಂಧಿತ ಕಾಯಿಲೆಗಳೇ ಆಗಿದೆ. ರಸ್ತೆ ಬದಿಯ ಆಹಾರ ತಿನ್ನುವವರ ಸಂಖ್ಯೆ ಕಡಿಮೆಯಾಗಿರುವುದರಿಂದಾಗಿ ಜಠರಕ್ಕೆ ಹಾನಿಯುಂಟು ಮಾಡುವ ಕಾಯಿಲೆಗಳಾದ ಬೇಧಿ, ವಾಂತಿಯಂಥ ರೋಗಗಳು ಗಣನೀಯವಾಗಿ ಇಳಿಮುಖವಾಗಿದೆ. ಬೇರೆ ಕಾಯಿಲೆಗಳು ಮಾಮೂಲಿ ನಂತಿದೆ. ಮನೆಯೊಳಗೇ ಇರುವುದರಿಂದಾಗಿ ಒಳ್ಳೆಯ ಊಟ, ತಿಂಡಿ ಸಿಗುತ್ತಿದೆ. ಹೀಗಾಗಿ ಹೊರಗಡೆ ತಿಂದು ಬರುತ್ತಿದ್ದ ಅನೇಕ ಆರೋಗ್ಯ ಸಮಸ್ಯೆಗಳು ಕಣ್ಮರೆಯಾದಂತಿದೆ. ಆದರೆ, ಲಾಕ್‍ಡೌನ್ ಸಂದರ್ಭ ಮನೆಯಲ್ಲಿ ಹೆಚ್ಚಿನವರಿಗೆ ಆಹಾರ ತಯಾರಿಸಿ, ಮನೆ ಕೆಲಸದ ಒತ್ತಡದಿಂದಾಗಿ ಸಾಕಷ್ಟ್ಟು ಆರೋಗ್ಯ ಸಮಸ್ಯೆ ಮುಖ್ಯವಾಗಿ ಜಠರದ ಉರಿಯಂತ ಸಮಸ್ಯೆ ಮಹಿಳೆಯರಲ್ಲಿ ಹೆಚ್ಚಾಗಿದೆ. ಮಹಿಳೆಯರು ಸಮರ್ಪಕ ಪ್ರಮಾಣದಲ್ಲಿ ಆಹಾರ ಸೇವಿಸಲೂ ಸಮಯ ಇಲ್ಲದಂತಾಗಿದೆ. ಮುಂದಿನ ದಿನಗಳಲ್ಲಿ ಮನೆ ಆಹಾರ ಬಳಕೆಯನ್ನೇ ಎಲ್ಲರೂ ಮುಂದುವರೆಸಿದ್ದೇ ಆದಲ್ಲಿ ಸಮಸ್ಯೆಗಳು ಕಡಿಮೆಯಾದೀತು. ಮಡಿಕೇರಿಯ ಹಿರಿಯ ವೈದ್ಯ ಕೆ. ಬಿ. ಸೂರ್ಯಕುಮಾರ್ ಪ್ರಕಾರ, ಸಿಜೇರಿಯನ್ ಸಂಖ್ಯೆ ಕಡಿಮೆಯಾಗಿ ಸಾಮಾನ್ಯ ಹೆರಿಗೆ ಹೆಚ್ಚಾಗಿರುವಂತಿದೆ. ಹೊರಗಡೆ ತೆರಳುವ ಹೋಗುವ ಪ್ರಮೇಯ ಕಡಿಮೆಯಾಗಿರುವುದರಿಂದಾಗಿ ಶೀತ, ಜ್ವರ ಕಡಿಮೆಯಾಗಿದೆ. ಮಾಸ್ಕ್ ಧರಿಸುವಿಕೆಯಿಂದಾಗಿ ಅಂಟು ರೋಗಗಳು ತೀರಾ ಇಳಿಮುಖವಾಗಿದೆ. ಬಿ.ಪಿ. ಸಕ್ಕರೆ ಕಾಯಿಲೆಗಳಿಗೆ ಚಿಕಿತ್ಸೆ ಪಡೆಯಲು ಜನ ವಿಳಂಬ ಮಾಡಿದಂತಿದೆ. ಅನಗತ್ಯ ಆತಂಕದಿಂದಾಗಿ ವೈದ್ಯರ ಬಳಿ ಓಡಿ ಬರುತ್ತಿದ್ದವರು ಈಗ ಕಾಣುತ್ತಿಲ್ಲ. ಅತ್ಯಂತ ಅನಿವಾರ್ಯವಾದ ಸ್ಥಿತಿಯಲ್ಲಿ ಈಗ ವೈದ್ಯರ ಬಳಿ ತೆರಳುತ್ತಿದ್ದಾರೆ. ಭಾರತೀಯ ವೈದ್ಯಕೀಯ ಅಸೋಸಿಯೇಷನ್ ಕೊಡಗು ಘಟಕದ ಗೌರವ ಕಾರ್ಯದರ್ಶಿ ಡಾ. ಸಿ. ಆರ್. ಪ್ರಶಾಂತ್ ಅಭಿಪ್ರಾಯ ವ್ಯಕ್ತಪಡಿಸಿ, ಕಣ್ಣಿನ ಸಾಂಕ್ರಾಮಿಕ ರೋಗಗಳು ಗಣನೀಯವಾಗಿ ಕಡಿಮೆಯಾಗಿದೆ. ಒತ್ತಡ ಜೀವನದ ಶೈಲಿಯಿಂದ ಕಾಣಿಸಿಕೊಳ್ಳುತ್ತಿದ್ದ ಕಣ್ಣಿನ ಸಂಬಂಧಿತ ಕಾಯಿಲೆಗಳು ಸೇರಿದಂತೆ ಇತರ ನೇತ್ರ ಸಮಸ್ಯೆಗಳು ಇಳಿಮುಖವಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿರುವುದು ಹಾಗೂ ಮಾಸ್ಕ್ ಧರಿಸುತ್ತಿರುವುದರಿಂದ ಕಣ್ಣಿನ ಸೋಂಕು ಹಬ್ಬುತ್ತಿಲ್ಲ. ಮಡಿಕೇರಿಯ ಮಕ್ಕಳ ವೈದ್ಯ ಡಾ. ಎಂ. ಎ. ದೇವಯ್ಯ ಹೇಳುವಂತೆ, ಬೇಸಿಗೆಯ ಈ ತಿಂಗಳಿನಲ್ಲಿ ಅತಿಸಾರ ಬೇಧಿ ಸೇರಿದಂತೆ ಅನೇಕ ಸಣ್ಣ-ಪುಟ್ಟ ಕಾಯಿಲೆಗಳು ಸಾಮಾನ್ಯವಾಗಿತ್ತು. ಆದರೆ ಮಕ್ಕಳ ರೋಗಿಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಶಾಲೆ ತರಗತಿಯಿಲ್ಲದೇ ಮಕ್ಕಳಲ್ಲಿ ಹಬ್ಬುತ್ತಿದ್ದ ಸೋಂಕು ವ್ಯಾಪಿಸುತ್ತಿಲ್ಲ. ಪೌಷ್ಟಿಕಾಂಶದ ಮನೆಯೂಟ ಸಿಗುತ್ತಿದೆ. ಕತ್ತರಿಸಿದ ಹಣ್ಣು ಸೇರಿದಂತೆ ಹೊರಗಡೆಯ ಆಹಾರ ಸೇವಿಸಿ ಮಕ್ಕಳ ಹೊಟ್ಟೆ ಕೆಡುತ್ತಿಲ್ಲ ಎಂದು ಅಭಿಪ್ರಾಯಪಟ್ಟರು. ಆಲೂರು ಸಿದ್ದಾಪುರದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಸುಪರ್ಣ ಹೇಳುವಂತೆ, ಲಾಕ್‍ಡೌನ್ ದಿನಗಳಲ್ಲಿ ಸಂಚಾರ ಸಾರಿಗೆ ಲಭ್ಯವಿಲ್ಲದೇ ಇದ್ದುದರಿಂದಾಗಿ ರೋಗಿಗಳು ಆಸ್ಪತ್ರೆಗೆ ಬರಲಾಗದ ಸ್ಥಿತಿಯಿತ್ತು. 60 ವರ್ಷ ಮೇಲ್ಪಟ್ಟವರು ಅನಗತ್ಯವಾಗಿ ಆಸ್ಪತ್ರೆಗೆ ಬರುವವರು ಕಡಿಮೆಯಾಗಿದ್ದಾರೆ ಎಂದರು. ಭಾರತದಲ್ಲಿ ಔಷಧಿಗಳ ಮಾರಾಟದ ಮೇಲೂ ಲಾಕ್‍ಡೌನ್ ಪರಿಣಾಮ ಬೀರಿದ್ದು ವಾರ್ಷಿಕ 1.49 ಲಕ್ಷ ಕೋಟಿಯ ಔಷಧೀಯ ಕ್ಷೇತ್ರ ಇದೀಗ ಶೇ. 12 ರಷ್ಟು ಇಳಿಕೆ ಕಂಡಿದೆ. ರಾಜ್ಯ ಔಷಧಿ ವ್ಯಾಪಾರಿಗಳ ಸಂಘದ ನಿರ್ದೇಶಕ ಅಂಬೆಕಲ್ ವಿನೋದ್ ಕುಶಾಲಪ್ಪ ಪ್ರಕಾರ, ಸಾಮಾನ್ಯ ಕಾಯಿಲೆಗಳಿಗೆ ಔಷಧಿü ಖರೀದಿಸುವವರ ಸಂಖ್ಯೆ ಕಡಿಮೆಯಾಗಿದೆ ಎಂದಿದ್ದಾರೆ.

ಕೊನೇ ಹನಿ.

ಹಾರ್ಟ್‍ಅಟ್ಯಾಕ್ ಪ್ರಚೋದಿಸುವ ತಲ್ಲಣ, ಒತ್ತಡಗಳು ಲಾಕ್‍ಡೌನ್ ದಿನಗಳಲ್ಲಿ ಕಡಿಮೆಯಾಗಿದೆ. ಹೃದಯಾಘಾತ, ಗ್ಯಾಸ್ಟ್ರೋ ಇಂಟಸ್ಟ್ರೈನ್ ರಕ್ತಸ್ರಾವ, ನಿಮೊನಿಯಾ, ಪಾಶ್ರ್ವವಾಯು, ಗಾಲ್ ಬ್ಲಾಡರ್ ಸಮಸ್ಯೆ, ಸಾಂಕ್ರಾಮಿಕ ರೋಗಗಳು ಕಡಿಮೆಯಾಗಿದೆ. ಕೊರೊನಾ ಸೋಂಕಿನ ಭಯದಿಂದ ಇನ್ನೂ ಬಹುತೇಕರು ಮನೆಯಲ್ಲಿಯೇ ಉಳಿದಿದ್ದಾರೆ. ಹೀಗಾಗಿ ಜನರು ಹೊರಗಡೆ ಸಂಚರಿಸುವ ಸಂಖ್ಯೆ ಕಡಿಮೆಯಾಗಿದೆ. ಆರೋಗ್ಯ ಸುಧಾರಣೆಯಲ್ಲಿ ಪರಿಸರ ಶುದ್ಧತೆಯೂ ಬಹುದೊಡ್ಡ ಪಾತ್ರ ವಹಿಸಲಿದೆ ಎಂದು ನ್ಯಾಷನಲ್ ಹೃದಯ ರೋಗ ಸಂಘಟನೆಯ ಡಾ. ಒ. ಪಿ. ಯಾದವ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಶೀಘ್ರ ಗುಣಮುಖರಾಗಲು ಹಲವು ಬಾರಿ ನಮ್ಮ ದೇಹಕ್ಕೆ ಅಗತ್ಯವಿಲ್ಲದಿದ್ದರೂ ಅನಗತ್ಯ ಆತಂಕದಿಂದ ನಾವು ಔಷಧಿಗಳನ್ನು ತಳ್ಳುತ್ತಿದ್ದೇವೆ. ಆದರೆ, ಮಾನಸಿಕ ವಾಗಿಯೇ ಹಲವು ಕಾಯಿಲೆಗಳು ಗುಣಮುಖವಾಗಬಲ್ಲವು ಎಂಬ ಹಳೇ ಸಂದೇಶ ಕೊರೊನಾ ಎಂಬ ಹೊಸ ಆತಂಕದ ಕಾಲಘಟ್ಟದಲ್ಲಿ ಅರಿವಾಗಬೇಕಾಗಿದೆ. ಹೀಗಿದ್ದರೂ ಆರೋಗ್ಯ ಸಮಸ್ಯೆಯಿದೆ ಎಂಬ ಸಂಶಯವಿದ್ದಲ್ಲಿ ವೈದ್ಯರನ್ನು ಸಂಪರ್ಕಿಸಿ ಸಲಹೆ ಪಡೆಯುವುದು ಸೂಕ್ತ.