ಕೂಡಿಗೆ, ಮೇ 26: ತಮ್ಮ ಕೈಗಾರಿಕೆಯಲ್ಲಿ ಆಹಾರದ ಭಾಗವಾದ ಕಾಫಿ ಪುಡಿಯನ್ನು ಉತ್ಪಾದನೆ ಮಾಡಲಾಗುತ್ತಿದೆ ವಿನಃ ಮತ್ಯಾವುದೇ ರಾಸಾಯನಿಕ ವಸ್ತುಗಳನ್ನು ಉತ್ಪಾದಿಸುತ್ತಿಲ್ಲ ಎಂದು ಎಸ್‍ಎಲ್‍ಎನ್ ಕಾಫಿ ಸಂಸ್ಥೆ ತಿಳಿಸಿದೆ.

ತಮ್ಮ ಕೈಗಾರಿಕೆಯಿಂದ ಉತ್ಪಾತ್ತಿಯಾಗುವ ಕಚ್ಚಾ ನೀರನ್ನು ಆಧುನಿಕ ಯಂತ್ರಗಳ ಸಹಾಯದಿಂದ ಮರುಶುದ್ಧೀಕರಿಸಿ ಮತ್ತೆ ಅದೇ ನೀರನ್ನು ಸಂಸ್ಥೆಯ ಆವರಣದಲ್ಲಿ ಬೆಳೆದಿರುವ ಕಾಫಿ, ಅಡಿಕೆ, ಬಾಳೆ, ತರಕಾರಿ ಹಾಗೂ ಮತ್ತಿತರ ಬೆಳೆಗಳಿಗೆ ಬಳಸಲಾಗುತ್ತಿದ್ದು, ಒಳಾವರಣದಲ್ಲಿ ನಿರ್ಮಿತ ಉದ್ಯಾನವನಕ್ಕೂ ಇದೇ ತ್ಯಾಜ್ಯ ನೀರನ್ನು ಬಳಸಲಾಗುತ್ತಿದ್ದು, ಯಾವುದೇ ಗಿಡಗಳಿಗೆ ಅಥವಾ ಹುಲ್ಲು ಹಾಸಿಗೆಗೆ ಇದು ಮಾರಕ ಆಗಿರುವುದಿಲ್ಲ ಎಂದು ವಿವರಿಸಿದೆ.

ಕೈಗಾರಿಕಾ ಘಟಕದ ಚೌಕಟ್ಟಿನ ಹೊರಗಿರುವ ಕೆಲವು ವ್ಯಕ್ತಿಗಳು ಅನಗತ್ಯವಾಗಿ ಸಂಸ್ಥೆಯ ವಿರುದ್ಧ ಅಪಪ್ರಚಾರ ಮಾಡುತ್ತಿದ್ದು, ಬೆಳೆಗಳಿಗೆ ಕೈಗಾರಿಕೆಯ ತ್ಯಾಜ್ಯ ನೀರನ್ನು ನೇರವಾಗಿ ಹರಿಸುತ್ತಿದ್ದಾರೆ ಎಂದು ದೂರುತ್ತಿದ್ದಾರೆ. ಅಲ್ಲದೇ ಕೂಡುಮಂಗಳೂರು ಗ್ರಾಮ ಪಂಚಾಯಿತಿಗೂ ದೂರು ನೀಡಿದ್ದು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಸ್ಥಳ ಪರಿಶೀಲನೆ ಸಂದರ್ಭ ತಮಗೆ ಮಾಹಿತಿ ನೀಡದೆ ಹಾಗೂ ತಮ್ಮ ಗಮನಕ್ಕೆ ಬಾರದೇ ಮತ್ತು ವಾಸ್ತವಾಂಶವನ್ನು ಅರಿಯದೇ ಏಕಾಏಕಿಯಾಗಿ ಸಂಸ್ಥೆಗೆ ನೋಟೀಸ್ ಜಾರಿ ಮಾಡಿದ್ದಾರೆ.

ಈ ಸಂಬಂಧ ಕೈಗಾರಿಕಾ ಬಡಾವಣೆ ಅಭಿವೃದ್ಧಿ ಸಮಿತಿಯ ಆಡಳಿತ ಮಂಡಳಿಗೆ ನಾವುಗಳು ದೂರು ನೀಡಿದ ಮೇರೆಗೆ ಆಡಳಿತ ಮಂಡಳಿಯ ಪದಾಧಿಕಾರಿಗಳು ತಾ. 25 ರಂದು ಸಭೆ ಸೇರಿ ಚರ್ಚಿಸಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ನೀಡಿದ ನೋಟೀಸ್ ವಿಚಾರವನ್ನು ಖಂಡಿಸಲಾಯಿತು. ಈ ಬಗ್ಗೆ ಮಾಧ್ಯಮದವರನ್ನು ಸ್ಥಳಕ್ಕೆ ಕರೆದೊಯ್ದು ತಮ್ಮಿಂದ ಹೊರಕ್ಕೆ ತ್ಯಾಜ್ಯ ನೀರನ್ನು ಯಾವ ಕಾರಣಕ್ಕೂ ಹರಿಸುತ್ತಿಲ್ಲ ಮತ್ತು ಕೆಲವು ರೈತರು ಮಾಡುತ್ತಿರುವ ಬೋರ್‍ವೆಲ್ ಕಲುಷಿತವಾಗಿರುವುದಕ್ಕೆ ಸಂಸ್ಥೆ ಹೊಣೆಯಲ್ಲ. ಯಾವುದೇ ಬೆಳೆಗಳು ಕೂಡ ಒಣಗಿಲ್ಲ ಎಂದು ಸಂಸ್ಥೆಯವರು ಸ್ಪಷ್ಟಪಡಿಸಿದರು.

ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಎನ್. ಸಾತಪ್ಪನ್ ಮತ್ತು ಎನ್. ವಿಶ್ವನಾಥನ್, ವ್ಯವಸ್ಥಾಪಕ ರಮೇಶ್ ರಾಮನ್ ಹಾಗೂ ಎಂ.ಕೆ. ಸೋಮಯ್ಯ, ಕೈಗಾರಿಕಾ ಬಡಾವಣೆ ಹಿತರಕ್ಷಣಾ ಸಮಿತಿ ಅಧ್ಯಕ್ಷ ಪ್ರವೀಣ್, ಕಾರ್ಯದರ್ಶಿ ಶಿವಪ್ರಕಾಶ್, ಪದಾಧಿಕಾರಿಗಳಾದ ಶಾಹಿದ್, ಪ್ರಭಾಕರ್, ಕಣ್ಣನ್ ಮೊದಲಾದವರು ಉಪಸ್ಥಿತರಿದ್ದರು.