ರಾಮಮಂದಿರ ನಿರ್ಮಾಣ ಅಧಿಕೃತ ಆರಂಭ

ಅಯೋಧ್ಯೆ, ಮೇ 26: ಅಯೋಧ್ಯೆ ಶ್ರೀರಾಮ ಜನ್ಮಭೂಮಿ ಭವ್ಯ ದೇವಾಲಯದ ನಿರ್ಮಾಣವು ಇಂದಿನಿಂದ (ಮೇ 26) ಅಧಿಕೃತವಾಗಿ ಪ್ರಾರಂಭವಾಗಿದೆ ಎಂದು ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಅಧ್ಯಕ್ಷ ಮಹಂತ್ ನೃತ್ಯಗೋಪಾಲ್ ದಾಸ್ ಘೋಷಿಸಿದ್ದಾರೆ. ಸಧ್ಯ ರಾಮ್ ಲಲ್ಲಾ ವಿಗ್ರಹವಿರುವ ಹೊಸದಾಗಿ ನಿರ್ಮಾಣವಾದ ತಾತ್ಕಾಲಿಕ ದೇವಾಲಯದ ರಚನೆಯಲ್ಲಿ ಪೂಜೆ ನಡೆಸಿದ ನಂತರ ಮಹಂತ್ ಈ ಘೋಷಣೆ ಮಾಡಿದ್ದಾರೆ. ಫೈಬರ್‍ನಿಂದ ನಿರ್ಮಿಸಲಾದ ಈ ಹೊಸ ರಚನೆಯು ಮಾನಸ ಭವನದಲ್ಲಿದೆ. ಈ ಹಿಂದೆ ನೆಲದಲ್ಲಿ ಹೂತುಹೋಗಿದ್ದ ಶಿಲೆಗಳನ್ನು ತೆಗೆದು ನೆಲವನ್ನು ಸಮಗೊಳಿಸುವ ಕಾರ್ಯ ನಡೆದಿದ್ದು ಈ ಪ್ರಕ್ರಿಯೆಯಲ್ಲಿಯೇ ಐದು ಅಡಿ ಶಿವಲಿಂಗ, ಏಳು ಕಂಬಗಳ ಕಪ್ಪು ಶಿಲಾರಚನೆ, ಆರು ಕಂಬಗಳ ಕೆಂಪು ಮರಳುಗಲ್ಲು ಮತ್ತು ದೇವಿ-ದೇವತೆಗಳ ಮುಕ್ಕಾದ ವಿಗ್ರಹಗಳು ಪತ್ತೆಯಾಗಿದ್ದವು. ಅಲ್ಲದೆ, ಲಾಕ್‍ಡೌನ್ ಮತ್ತು ಕೊರೊನಾ ಬಿಕ್ಕಟ್ಟು ಅಯೋಧ್ಯೆಯಲ್ಲಿ ರಾಮ ದೇವಾಲಯದ ನಿರ್ಮಾಣದ ಜವಾಬ್ದಾರಿಯನ್ನು ಹೊಂದಿರುವ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‍ಗೆ ದೇಣಿಗೆ ನೀಡುವುದಕ್ಕೆ ಯಾವ ಅಡ್ಡಿಯನ್ನೂ ತರಲಿಲ್ಲ. ಲಾಕ್‍ಡೌನ್ ಅವಧಿಯಲ್ಲಿ ಟ್ರಸ್ಟ್‍ನ ಎರಡು ಖಾತೆಗಳಲ್ಲಿ ರೂ. 4.60 ಕೋಟಿ ಸಂಗ್ರಹವಾಗಿದೆ ಎಂದು ಮಹಂತ್ ನೃತ್ಯ ಗೋಪಾಲ್ ದಾಸ್ ತಿಳಿಸಿದ್ದಾರೆ.

ಭಾರತದಲ್ಲಿ ಸಾವಿನ ಸಂಖ್ಯೆ ಕಡಿಮೆ

ನವದೆಹಲಿ, ಮೇ 26: ದೇಶದಲ್ಲಿ ಲಾಕ್‍ಡೌನ್ ಸಡಿಲಗೊಳಿಸಿದ ನಂತರ ಕೊರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿದೆ. ಆದರೆ ಭಾರತದಲ್ಲಿ ಸಾವಿನ ಪ್ರಮಾಣ ವಿಶ್ವದಲ್ಲೇ ಅತ್ಯಂತ ಕಡಿಮೆಯಿದ್ದು, ಪ್ರತಿ ಲಕ್ಷಕ್ಕೆ 0.3 ರಷ್ಟಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಂಗಳವಾರ ತಿಳಿಸಿದೆ. ಕೊರೊನಾದಿಂದಾಗಿ ಮೃತಪಟ್ಟವರ ಪ್ರಮಾಣ ಭಾರತದಲ್ಲಿ ಅತಿ ಕಡಿಮೆ ಇದೆ. ಜಾಗತಿಕ ಸರಾಸರಿ, ಪ್ರತಿ ಲಕ್ಷ ಜನರಿಗೆ 4.4 ಇದೆ. ಆದರೆ, ಭಾರತದಲ್ಲಿ ಈ ಪ್ರಮಾಣ 0.3 ರಷ್ಟು ಮಾತ್ರ. ಇದು ವಿಶ್ವದಲ್ಲೇ ಅತ್ಯಂತ ಕಡಿಮೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ್ ಅಗರ್ವಾಲ್ ಅವರು ಹೇಳಿದ್ದಾರೆ. ಲಾಕ್‍ಡೌನ್, ಸರಿಯಾದ ಸಮಯಕ್ಕೆ ಸೋಂಕಿತರನ್ನು ಪತ್ತೆ ಹಚ್ಚುವುದು ಹಾಗೂ ಕೋವಿಡ್-19 ಪ್ರಕರಣಗಳ ಉತ್ತಮ ನಿರ್ವಹಣೆಯಿಂದ ಭಾರತದಲ್ಲಿ ಕೊರೊನಾ ನಿಯಂತ್ರಣದಲ್ಲಿದೆ. ಕಟ್ಟುನಿಟ್ಟಾದ ಕ್ರಮಗಳ ಮೂಲಕ ನಾವು ಸೋಂಕು ವ್ಯಾಪಕವಾಗಿ ಹರಡುವುದನ್ನು ತಡೆದಿದ್ದೇವೆ ಎಂದು ಅಗರ್ವಾಲ್ ಅವರು ತಿಳಿಸಿದ್ದಾರೆ. ಕೋವಿಡ್-19ನಿಂದ ಇಲ್ಲಿಯವರೆಗೆ ಒಟ್ಟು 60,490 ರೋಗಿಗಳು ಚೇತರಿಸಿಕೊಂಡಿದ್ದಾರೆ. ಚೇತರಿಕೆಯ ಪ್ರಮಾಣವು ಸುಧಾರಣೆಯಾಗುತ್ತಿದೆ ಮತ್ತು ಪ್ರಸ್ತುತ ಇದು ಶೇ.41.61 ಪ್ರತಿಶತದಷ್ಟಿದೆ. ಸಾವಿನ ಪ್ರಮಾಣವು ವಿಶ್ವದ ಅತ್ಯಂತ ಕೆಳಮಟ್ಟದಲ್ಲಿದೆ ಮತ್ತು ಇದು ಈಗ 2.87 ಪ್ರತಿಶತದಷ್ಟಿದೆ ಎಂದು ಅಗರ್ವಾಲ್ ಹೇಳಿದರು.

ಮಂಡ್ಯ-ಮಳವಳ್ಳಿ ಕೊರೊನಾ ಮುಕ್ತ

ಮಂಡ್ಯ, ಮೇ 26: ಜುಬಿಲಿಯಂಟ್ ಸಂಪರ್ಕದಿಂದ ಆತಂಕ ಸೃಷ್ಠಿಸಿದ್ದ ಮಂಡ್ಯ ನಗರ ಮತ್ತು ತಬ್ಲಿಘೀ ನಂಟಿನಿಂದಾಗಿ ನಲುಗಿದ್ದ ಮಳವಳ್ಳಿ ಇದೀಗ ಕೊರೊನಾ ಮುಕ್ತ ಪಟ್ಟಣ ಎನ್ನಿಸಿಕೊಂಡಿದ್ದು ಇದರ ನಡುವೆ ಇಂದು ಯಾವುದೇ ಹೊಸ ಪ್ರಕರಣ ಪತ್ತೆಯಾಗಿಲ್ಲದಿರುವುದು ಸಕ್ಕರೆನಾಡಿಗೆ ತುಸು ನೆಮ್ಮದಿ ತಂದಿದೆ. ಇಡೀ ಮಂಡ್ಯ ಜಿಲ್ಲೆಯಲ್ಲಿಯೇ ಮೊಟ್ಟಮೊದಲ ಬಾರಿಗೆ ಏ. 7 ರಂದು ಕೊರೊನಾ ಪ್ರಕರಣ ಕಾಣಿಸಿಕೊಳ್ಳುವ ಮೂಲಕ ಮಳವಳ್ಳಿ ಪಟ್ಟಣ ಇಡೀ ಜಿಲ್ಲೆಯಲ್ಲಿ ಆತಂಕ ಮೂಡಿಸಿತ್ತು. ಸುಮಾರು 22 ಜನರಿಗೆ ಕೊರೊನಾ ಸೋಂಕು ತಗುಲಿತ್ತಾದರೂ ಇದೀಗ ಅಷ್ಟೇ ವೇಗವಾಗಿ ಸೋಂಕಿತರೆಲ್ಲರು ಗುಣಮುಖರಾಗುವ ಮೂಲಕ ಇದೀಗ ಮಳವಳ್ಳಿ ಪಟ್ಟಣ ಕೊರೊನಾ ಮುಕ್ತವಾಗಿದೆ. ದೆಹಲಿಯಿಂದ ಬಂದಿದ್ದ ತಬ್ಲಿಘಿ ಜಮಾತ್ ಸದಸ್ಯರಿಂದ ಮಳವಳ್ಳಿ ಪಟ್ಟಣಕ್ಕೆ ಅಂಟಿದ್ದ ಕೊರೊನಾ ಸೋಂಕು ಪ್ರತಿದಿನ ಏರಿಕೆಯಾಗುತ್ತಾ ಬರೋಬ್ಬರಿ 22 ಜನರಿಗೆ ಸೋಂಕು ಹರಡುವ ಮೂಲಕ ಕೊರೊನಾ ಅಟ್ಟಹಾಸ ಮೆರೆದಿತ್ತು. ಇಡೀ ಜಿಲ್ಲೆಯಲ್ಲಿಯೇ ಮಳವಳ್ಳಿ ಪಟ್ಟಣ ಹಾಟ್ ಸ್ಪಾಟ್ ಆಗಿ ರೆಡ್ ಝೋನ್ ವಲಯಕ್ಕೆ ಸೇರಿಕೊಂಡಿತ್ತು.

ರಾಹುಲ್‍ಗೆ ತಿರುಗೇಟು ನೀಡಿದ ಬಿಜೆಪಿ

ನವದೆಹಲಿ, ಮೇ 26: ಲಾಕ್‍ಡೌನ್ ಮಾಡಿಯೂ ಕೋವಿಡ್-19 ಸೋಂಕು ತಡೆಗಟ್ಟುವಲ್ಲಿ ವಿಫಲವಾದ ಏಕೈಕ ರಾಷ್ಟ್ರ ಭಾರತ ಎಂದು ಮೋದಿ ಸರ್ಕಾರದ ವಿರುದ್ಧ ಆರೋಪ ಮಾಡಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಬಿಜೆಪಿ ತಿರುಗೇಟು ನೀಡಿದೆ. ಲಾಕ್‍ಡೌನ್ ಭಾರತದ ವೈಫಲ್ಯವಲ್ಲ, ಭಾರತದ ಯಶಸ್ಸು ಎಂದು ಹೇಳಿರುವ ಬಿಜೆಪಿ, ಲಾಕ್‍ಡೌನ್ ಜಾರಿಗೊಳಿಸುವುದಕ್ಕೂ ಮುನ್ನ ಭಾರತದಲ್ಲಿ ಕೊರೊನಾ ವೈರಸ್ ಪ್ರಸರಣ ಪ್ರಮಾಣ 3 ದಿನಗಳಿಗೊಮ್ಮೆ ದ್ವಿಗುಣಗೊಳ್ಳುತ್ತಿತ್ತು. ಆದರೆ ಲಾಕ್‍ಡೌನ್ ಜಾರಿಗೊಳಿಸಿದ ಬಳಿಕ 13 ದಿನಗಳಿಗೆ ದ್ವಿಗುಣಗೊಂಡಿದೆ ಎಂದು ಹೇಳಿದೆ. ರಾಹುಲ್ ಗಾಂಧಿ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್, ಮೋದಿ ಸರ್ಕಾರ ಲಾಕ್‍ಡೌನ್ ಜಾರಿಗೊಳಿಸಲು ಕೈಗೊಂಡ ನಿರ್ಧಾರದಿಂದಾಗಿ ಭಾರತ ಅಮೇರಿಕಾ, ಫ್ರಾನ್ಸ್, ಸ್ಪೇನ್ ಮಾದರಿಯಲ್ಲಿ ಕೊರೊನಾದಿಂದ ಹೆಚ್ಚು ಅಪಾಯಕ್ಕೆ ಸಿಲುಕಲಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.

ಬೆಂಗಳೂರಿನಲ್ಲಿ ಮಳೆಯ ಅಬ್ಬರ

ಬೆಂಗಳೂರು ಮೇ 26 : ಬೆಂಗಳೂರಿನಲ್ಲಿ ಮಂಗಳವಾರ ಸಂಜೆ 6 ಗಂಟೆಗೆ ಮಳೆರಾಯ ಅಬ್ಬರಿಸಿದ್ದಾನೆ. ಗುಡುಗು ಮಿಂಚು ಸಮೇತ ಬೆಂಗಳೂರಿನ ಬಹುತೇಕ ಭಾಗದಲ್ಲಿ ಮಳೆಯ ಅಬ್ಬರ ಜೋರಾಗಿಯೇ ಆಗಿದೆ. ಮಳೆ ನಿಂತ ಮೇಲೆ ರೋಡ್‍ಗಳು ಕೆರೆಗಳಾಗಿವೆ. ಬೆಂಗಳೂರಿನ ಡಬ್ಬಲ್ ರೋಡ್‍ನಲ್ಲಿ ರೋಡ್ ಯಾವುದು ಎನ್ನುವುದೇ ಗೊತ್ತಾಗದಂತೆ ಮಳೆ ನೀರು ನಿಂತಿದ್ದು ವಾಹನ ಸವಾರರು ನರಕ ಅನುಭವಿಸುತ್ತಿದ್ದಾರೆ. ಇನ್ನೊಂದು ಕಡೆ ವಿಲ್ಸನ್ ಗಾರ್ಡನ್‍ಗೆ ಹೋಗುವ ರೋಡ್ ಸಂಪೂರ್ಣ ಜಲವೃತವಾಗಿದ್ದು, ಮಳೆ ನೀರಿನಿಂದ ರೋಡ್ ಕೆರೆಯಾಗಿದೆ. ಬೆಂಗಳೂರಿನ ಯಶವಂತಪುರ, ಮಲ್ಲೇಶ್ವರ, ರಾಜಾಜಿನಗರ, ಜಾಲಹಳ್ಳಿ, ಮತ್ತಿಕೆರೆ ಸೇರಿದಂತೆ ಹಲವಡೆ ಬಿರುಸಿನ ಮಳೆಯಾಗಿದೆ. ಭಾನುವಾರ ಲಾಕ್‍ಡೌನ್ ಆಗಿದ್ದರಿಂದ ನಗರದಲ್ಲಿ ವಾಹನ ಸಂಚಾರ ವಿರಳವಾಗಿತ್ತು. ಇಂದು ಕೆಲಸ ಮುಗಿಸಿ ಮನೆಯತ್ತ ಹೊರಟ ಜನರು ಮಳೆಯಲ್ಲಿ ಸಿಲುಕಿದರು.

ಜೂ. 1 ರಿಂದ ಹೊಟೇಲ್‍ಗಳು ಆರಂಭ

ಬೆಂಗಳೂರು, ಮೇ 26: ಲಾಕ್‍ಡೌನ್‍ನಿಂದಾಗಿ ಮುಚ್ಚಲ್ಪಟ್ಟಿದ್ದ ಮಾಲ್, ಹೊಟೇಲ್‍ಗಳು ಜೂನ್ ಒಂದರಿಂದ ತೆರೆಯುವ ಸಾಧ್ಯತೆ ಹೆಚ್ಚಾಗಿದೆ. ಇಂದು ಸಿಎಂ ಯಡಿಯೂರಪ್ಪ ನೇತೃತ್ವದ ಸಭೆಯಲ್ಲಿ ಮುಜರಾಯಿ ಇಲಾಖೆಯ ದೇವಾಲಯಗಳಿಗೆ ಅನುಮತಿ ನೀಡಿದ ಬೆನ್ನಲ್ಲೇ ಮಾಲ್ ಮತ್ತು ಹೊಟೇಲ್‍ಗಳು ಎಂದಿನಂತೆ ವ್ಯಾಪಾರ ನಡೆಸಲು ಷರತ್ತು ವಿಧಿಸಿ ಅನುಮತಿ ನೀಡುವ ಸಾಧ್ಯತೆ ಹೆಚ್ಚಿದೆ. ಜೂನ್ ಒಂದರಿಂದ ಶಾಪಿಂಗ್ ಮಾಲ್ ತೆರೆಯಲು ಅನುಮತಿ ಸಿಕ್ಕಿದರೂ ಮಧ್ಯಾಹ್ನ 12 ರಿಂದ ರಾತ್ರಿ 9 ರವರೆಗೆ ಮಾತ್ರ ಮಾಲ್ ಓಪನ್ ಇರಲಿದೆ. 2 ಹಂತಗಳಲ್ಲಿ ಮಾಲ್ ಓಪನ್‍ಗೆ ಸಮ್ಮತಿ ಸಿಗಲಿದ್ದು, ಮೊದಲ ಹಂತದಲ್ಲಿ ಅಗತ್ಯ ವಸ್ತುಗಳ ಮಾರಾಟಕ್ಕೆ ಮಾತ್ರ ಅವಕಾಶ ನೀಡಲಾಗುತ್ತದೆ. ಈ ಸಂಬಂಧ ಈಗಾಗಲೇ ಕರ್ನಾಟಕ ಹೊಟೇಲ್ ಉದ್ಯಮಿಗಳ ಸಂಘದ ಪದಾಧಿಕಾರಿಗಳು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ. ಹೊಟೇಲ್‍ಗಳಲ್ಲಿ ಸಾರ್ವಜನಿಕ ಅಂತರವನ್ನು ಖಾಯ್ದುಕೊಳ್ಳುವ ಮೂಲಕ ಗ್ರಾಹಕರಿಗೆ ಎಲ್ಲಾ ರೀತಿಯ ಅನುಕೂಲವನ್ನು ಕಲ್ಪಿಸಲಾಗುವುದೆಂದು ಭರವಸೆ ನೀಡಿದ್ದಾರೆ. ಆ ಮೇರೆಗೆ ಮುಖ್ಯಮಂತ್ರಿಗಳು ಅಧಿಕಾರಿಗಳ ಜೊತೆ ಚರ್ಚಿಸಿ, ಹೊಟೇಲ್‍ಗಳನ್ನು ಪುನರಾರಂಭಿಸಿದರೆ ಉಂಟಾಗಲಿರುವ ಸಾಧಕ-ಬಾಧಕಗಳ ಕುರಿತು ಸಮಾಲೋಚಿಸಿರುವುದಾಗಿ ತಿಳಿದುಬಂದಿದೆ.