ವೀರಾಜಪೇಟೆ, ಮೇ 24: ಇಲ್ಲಿನ ಗಾಂಧಿನಗರದಲ್ಲಿ ಅಕ್ಷಿತಾ (12) ಎಂಬ ಬಾಲಕಿಗೆ ಆಕಸ್ಮಿಕವಾಗಿ ವಿದ್ಯುತ್ ತಗಲಿ ಗಂಭೀರ ಪರಿಸ್ಥಿತಿಯಲ್ಲಿದ್ದವಳನ್ನು ಅಧಿಕಾರಿಗಳು ಪ್ರಾಣಾಪಾಯದಿಂದ ರಕ್ಷಿಸಿ ಮಾನವೀಯತೆ ಮೆರೆದಿದ್ದಾರೆ.

ವೀರಾಜಪೇಟೆ ಪಟ್ಟಣ ಪಂಚಾಯಿತಿಯಲ್ಲಿ ದಿನಗೂಲಿ ನೌಕರನಾಗಿರುವ ಪ್ರವೀಣ್ ಎಂಬಾತನ ಸಹೋದರಿ ಅಕ್ಷಿತಾ ತಾ. 22ರಂದು ಬೆಳಿಗ್ಗೆ 9ಗಂಟೆಯ ಸಮಯದಲ್ಲಿ ಸ್ನಾನದ ಮನೆಯಲ್ಲಿ ಬಕೆಟ್‍ನೊಳಗೆ ನೀರು ಬಿಸಿ ಮಾಡುವ ಕಾಯಿಲ್ ಇಟ್ಟಿದ್ದಳು. ಕೆಲ ಹೊತ್ತಿನಲ್ಲಿ ನೀರು ಬಿಸಿಯಾಯಿತ್ತೆಂದು ನೋಡಲು ಬಕೆಟ್‍ನೊಳಗೆ ಕೈ ಹಾಕಿದಾಗ ವಿದ್ಯುತ್ ಸ್ಪರ್ಶಗೊಂಡು ಎದೆಯ ಭಾಗಕ್ಕೆ ಸುಮಾರು 8 ಇಂಚುಗಳಷ್ಟು ಉದ್ದ ಹಾಗೂ ಎರಡೂವರೆ ಇಂಚುಗಳಷ್ಟು ಅಗಲದ ಗಂಭೀರ ಸ್ವರೂಪದ ಗಾಯ ಉಂಟಾಗಿತ್ತು.

ಆರ್ಥಿಕವಾಗಿ ಹಿಂದುಳಿದ ಬಡತನದ ಕುಟುಂಬ, ಸಹೋದರ ಬೇರೆ ದಿನಗೂಲಿ ನೌಕರ. ಇದನ್ನು ಮನಗಂಡ ಇಲ್ಲಿನ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎ.ಎಂ.ಶ್ರೀಧರ್ ಅವರು ಮಡಿಕೇರಿಯ ಜಿಲ್ಲಾ ಆರೋಗ್ಯಾಧಿಕಾರಿ ಮೋಹನ್ ಅವರನ್ನು ಸಂಪರ್ಕಿಸಿ ಗಾಯ ಗಂಭೀರವಾಗಿರುವುದರಿಂದ ಮಡಿಕೇರಿಯ ಅಶ್ವಿನಿ ಆಸ್ಪತ್ರೆಯ ವೈದ್ಯರ ಸಹಕಾರದಿಂದ ಆಂಬುಲೆನ್ಸ್‍ನಲ್ಲಿ ಬಾಲಕಿಯನ್ನು ಮಡಿಕೇರಿಯಿಂದ ಮಂಗಳೂರಿನ ಎ.ಜೆ.ಆಸ್ಪತ್ರೆಗೆ ಸಾಗಿಸಲಾಯಿತು. ಮಂಗಳೂರಿನ ಜಿಲ್ಲಾ ಆರೋಗ್ಯಾಧಿಕಾರಿಯ ಸಹಕಾರದಿಂದ ಎ.ಜೆ.ಶೆಟ್ಟಿ ಆಸ್ಪತ್ರೆಯಲ್ಲಿ ಬಾಲಕಿಗೆ ಉಚಿತ ಚಿಕಿತ್ಸೆ ಕೊಡಿಸಿ ಈಗ ಬಾಲಕಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಆಸ್ಪತ್ರೆಯ ಪ್ರಕಾರ ಬಾಲಕಿಯ ಒಂದು ದಿನದ ಚಿಕಿತ್ಸೆಗೆ ರೂ. 35000 ಸೇರಿದಂತೆ ಒಟ್ಟು ರೂ. 50000ಕ್ಕೂ ಅಧಿಕ ವೆಚ್ಚವಾಗಿದೆ. ಈಗ ಬಾಲಕಿ ಚೇತರಿಸಿಕೊಳ್ಳುತ್ತಿದ್ದಾಳೆ.

- ಡಿ.ಎಂ.ಆರ್.