ಮಡಿಕೇರಿ, ಮೇ 24: ಕಳೆದ 10 ತಿಂಗಳುಗಳಿಂದ ವೇತನ ದೊರಕದ ಹಿನ್ನೆಲೆಯಲ್ಲಿ ಭಾರತ ಸಂಚಾರ ನಿಗಮ (ಬಿಎಸ್‍ಎನ್‍ಎಲ್)ದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಗುತ್ತಿಗೆ ನೌಕರರು ತಮ್ಮ ಕೆಲಸ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಲು ಸಜ್ಜಾಗಿದ್ದಾರೆ.

ಈಗಾಗಲೇ ಸಿಬ್ಬಂದಿ ಕೊರತೆ ಎದುರಿಸುತ್ತಿರುವ ಬಿಎಸ್‍ಎನ್‍ಎಲ್ ಎಲ್ಲಾ ಕೆಲಸ ಕಾರ್ಯಗಳನ್ನು ಗುತ್ತಿಗೆ ನೌಕರರ ಮೂಲಕವೇ ಮಾಡಿಸಿ ಕೊಳ್ಳುತ್ತಿದ್ದರೂ, ಕಳೆದ 10 ತಿಂಗಳುಗಳಿಂದ ವೇತನ ನೀಡಿಲ್ಲ. ಅಲ್ಲದೆ ವೇತನ ಕೇಳಿದರೆ ಕೆಲಸದಿಂದ ವಜಾಗೊಳಿಸುವ ಬೆದರಿಕೆ ಒಡ್ಡಲಾಗುತ್ತಿದೆ ಎಂದು ಬಿಎಸ್‍ಎನ್‍ಎಲ್ ನಾನ್ ಪರ್ಮನೆಂಟ್ ಎಂಪ್ಲಾಯಿಸ್ ಯೂನಿಯನ್ ಆರೋಪಿಸಿದೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಎ. ಬಸವರಾಜು ಅವರು, ಮೈಸೂರಿನ ರಂಗನಾಥ್ ಎಂಟರ್‍ಪ್ರೈಸಸ್ ಸಂಸ್ಥೆಯ ಅಡಿಯಲ್ಲಿ ಸುಮಾರು 175 ಮಂದಿ ಗುತ್ತಿಗೆ ನೌಕರರು ಕೊಡಗು ಜಿಲ್ಲೆಯ ವಿವಿಧ ದೂರವಾಣಿ ಕೇಂದ್ರಗಳಲ್ಲಿ ಕಳೆದ 15-20 ವರ್ಷಗಳಿಂದ ಕೆಲಸ ನಿರ್ವಹಿಸುತ್ತಿದ್ದಾರೆ. ಇತ್ತೀಚೆಗೆ ಬಿಎಸ್‍ಎನ್‍ಎಲ್‍ನ ಸಾವಿರಾರು ಸಿಬ್ಬಂದಿಗಳು ಸ್ವಯಂ ನಿವೃತ್ತಿ ಪಡೆದಿದ್ದು, ಇದರಿಂದಾಗಿ ನಿಗಮದ ಬಹುತೇಕ ಎಲ್ಲಾ ಕೆಲಸ ಕಾರ್ಯಗಳ ಹೊರೆಯನ್ನು ಗುತ್ತಿಗೆ ನೌಕರರ ಮೇಲೆಯೇ ಹೊರಿಸಲಾಗುತ್ತಿದೆ ಎಂದು ದೂರಿದರು.

ಜಿಲ್ಲೆಯಲ್ಲಿ ಸಂಭವಿಸಿದ ಭೂಕುಸಿತ, ಪ್ರವಾಹ ಮುಂತಾದ ತುರ್ತು ಸಂದರ್ಭದಲ್ಲೂ ಹಗಲಿರುಳು ಗುತ್ತಿಗೆ ನೌಕರರು ಕೆಲಸ ಮಾಡಿದ್ದು, ಇದೀಗ ಕೊರೋನಾ ಲಾಕ್‍ಡೌನ್ ಸಂದರ್ಭದಲ್ಲೂ ಯಾವುದೇ ರಕ್ಷಣೆ ಇಲ್ಲದೆ ನಾವುಗಳು ಕೆಲಸ ಮಾಡಿದ್ದೇವೆ. ಆದರೆ ಕಳೆದ 10 ತಿಂಗಳುಗಳಿಂದ ನಮಗೆ ವೇತನ ನೀಡದೆ ಸತಾಯಿಸ ಲಾಗುತ್ತಿದೆ. ಗುತ್ತಿಗೆದಾರರನ್ನು ಕೇಳಿದರೆ ನಿಗಮದಿಂದ ಹಣ ಬಂದಿಲ್ಲ ಎಂಬ ಉತ್ತರ ಬಂದರೆ, ನಿಗಮದ ವರನ್ನು ಕೇಳಿದರೆ ನಾವು ವೇತನ ನೀಡಿದ್ದೇವೆ. ನಿಮಗೆ ಕೆಲಸ ಮಾಡಲು ಆಗದಿದ್ದರೆ ಬೇರೆಯವರನ್ನು ನೇಮಿಸಿಕೊಳ್ಳುತ್ತೇವೆ ಎಂಬ ಬೆದರಿಕೆ ಹಾಕುತ್ತಿದ್ದಾರೆ ಎಂದು ಅವಲತ್ತುಕೊಂಡರು.