ಮಡಿಕೇರಿ, ಮೇ 24: ಗ್ರಾಮ ಪಂಚಾಯಿತಿಗಳ ಆಡಳಿತ ಅವಧಿ ಮುಕ್ತಾಯಗೊಳ್ಳುತ್ತಿರುವ ಸಂದರ್ಭ, ಕೊರೊನಾ ಲಾಕ್‍ಡೌನ್ ನಡುವೆ ಹೊಸ ಚುನಾವಣೆ ಕುರಿತು ಅಭಿಪ್ರಾಯ ನೀಡುವಂತೆ ರಾಜ್ಯ ಚುನಾವಣಾ ಆಯೋಗವು ಜಿಲ್ಲಾಧಿಕಾರಿಗಳಿಗೆ ಪತ್ರ ರವಾನಿಸಿದೆ. ಈ ಬಗ್ಗೆ ಆಯೋಗದ ಅಧೀನ ಕಾರ್ಯದರ್ಶಿಗಳು ತಾ. 23ರಂದು ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳ ಅಭಿಪ್ರಾಯ ಕೋರಿದ್ದಾರೆ.

ಪತ್ರದ ಸಾರಾಂಶ

ಭಾರತ ಸಂವಿಧಾನದ ಪರಿಚ್ಚೇದ 243-ಇ ರಲ್ಲಿ ಪಂಚಾಯಿತಿಗಳ ಅವಧಿಯು ಮುಕ್ತಾಯಗೊಳ್ಳುವುದಕ್ಕೆ ಮುಂಚಿತವಾಗಿ; ಹೊಸದಾಗಿ ಪಂಚಾಯಿತಿಯನ್ನು ರಚಿಸಲು ಚುನಾವಣೆ ನಡೆಸಬೇಕಾಗುತ್ತದೆ. ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993ರ ಪ್ರಕರಣ 308ಎಎರಂತೆಯೂ ರಾಜ್ಯ ಚುನಾವಣಾ ಆಯೋಗವು ಪಂಚಾಯಿತಿಯ ಅವಧಿಯು ಪೂರ್ಣಗೊಳ್ಳುವುದಕ್ಕೆ ಮೊದಲು ಚುನಾವಣೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕಾಗಿರುತ್ತದೆ.

ರಾಜ್ಯದಲ್ಲಿನ 6025 ಗ್ರಾಮ ಪಂಚಾಯಿತಿಗಳಲ್ಲಿ ಜೂನ್ -2020ರ ಮಾಹೆಯಿಂದ ವಿವಿಧ ದಿನಾಂಕಗಳಲ್ಲಿ ಅವಧಿ ಮುಕ್ತಾಯವಾಗುತ್ತದೆ. ಆಗಸ್ಟ್-2020ರ ಮಾಹೆಯವರೆಗೆ ಸುಮಾರು 5800 ಗ್ರಾಮ ಪಂಚಾಯಿತಿಗಳ ಅವಧಿ ಮುಕ್ತಾಯವಾಗಲಿದೆ. ರಾಜ್ಯ ಚುನಾವಣಾ ಆಯೋಗವು ಅವಧಿ ಮುಕ್ತಾಯವಾಗುವ ಗ್ರಾಮ ಪಂಚಾಯಿತಿಗಳಿಗೆ ಅವಧಿ ಮುಕ್ತಾಯ ಪೂರ್ವದಲ್ಲಿ ಸಾರ್ವತ್ರಿಕ ಚುನಾವಣೆಯನ್ನು ನಡೆಸಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿತ್ತು. ಮತದಾರರ ಪಟ್ಟಿಯನ್ನು ತಯಾರಿಸಲು ಸೂಚನೆಗಳನ್ನು ನೀಡಲಾಗಿತ್ತು. ಈ ಹಂತದಲ್ಲಿ ದೇಶದಾದ್ಯಂತ ಕೋವಿಡ್-19 ನಿಯಂತ್ರಣಕ್ಕಾಗಿ ಕೇಂದ್ರ / ರಾಜ್ಯ ಸರ್ಕಾರಗಳು ಲಾಕ್‍ಡೌನ್ ಮಾಡಿದ್ದರಿಂದ, ಮತದಾರರ ಪಟ್ಟಿಯ ತಯಾರಿಕೆ ಪ್ರಕ್ರಿಯೆಯನ್ನು ಹಾಗೂ ಇತರೆ ಚುನಾವಣಾ ಸಿದ್ಧತೆಗಳನ್ನು ಸ್ಥಗಿತಗೊಳಿಸಲಾಯಿತು. ಅಲ್ಲದೆ, ಸರ್ಕಾರವು ಇತ್ತೀಚೆಗೆ ತಾ. 31.03.2020ರಲ್ಲಿ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993ರ ಪ್ರಕರಣ 5ಕ್ಕೆ ತಿದ್ದುಪಡಿ ಮಾಡಿ ಮೀಸಲಾತಿಯನ್ನು ಹತ್ತು ವರ್ಷದ ಬದಲಿಗೆ ಐದು ವರ್ಷಗಳು ಎಂದು ಪ್ರತಿನಿಯೋಜಿಸಿ ತಿದ್ದುಪಡಿ ಮಾಡಿ ಆಧ್ಯಾದೇಶ ಹೊರಡಿಸಿರುವುದರಿಂದ, ಈಗ ಹೊಸದಾಗಿ ಕರ್ನಾಟಕ ಪಂಚಾಯತ್ ರಾಜ್ (ಗ್ರಾಮ ಪಂಚಾಯಿತಿಗಳಲ್ಲಿನ ಸ್ಥಾನಗಳನ್ನು ಆವರ್ತನೆಯ ಮೇಲೆ ಮೀಸಲಿಡುವ) ನಿಯಮಗಳು, 1998ರಂತೆ ಕ್ಷೇತ್ರಗಳ ಮೀಸಲು ಸ್ಥಾನಗಳನ್ನು ಆವರ್ತನೆಯ ಮೇಲೆ ಹಂಚಿಕೆ ಮಾಡಿ ನಿಗದಿಪಡಿಸಬೇಕಾಗಿರುತ್ತದೆ. ಈ ಮಧ್ಯೆ ಜಿಲ್ಲಾಡಳಿತ ಹಾಗೂ ತಾಲೂಕು ಕಚೇರಿ ಅಧಿಕಾರಿ, ಸಿಬ್ಬಂದಿಗಳು ಕೋವಿಡ್ -19 ನಿಯಂತ್ರಣದ ಕಾರ್ಯದಲ್ಲಿ ತೊಡಗಿಸಿಕೊಂಡಿರುವುದು ಆಯೋಗದ ಗಮನಕ್ಕೆ ಬಂದಿದೆ.

ಪ್ರಸ್ತುತ ಮತದಾರರ ಪಟ್ಟಿಯನ್ನು ತಯಾರಿಸಿ, ಹೊಸ ತಿದ್ದುಪಡಿಯಂತೆ ಮೀಸಲಾತಿ ನಿಗದಿಪಡಿಸಿ, ಗ್ರಾಮ ಪಂಚಾಯಿತಿ ಸಾರ್ವತ್ರಿಕ ಚುನಾವಣೆ ನಡೆಸಬೇಕಾಗಿರುವುದರಿಂದ, ಪ್ರಸ್ತುತ ಕೋವಿಡ್ -19ರ ಹಿನ್ನೆಲೆಯಲ್ಲಿ ಚುನಾವಣೆಯನ್ನು ನಡೆಸುವ ಬಗ್ಗೆ ತಮ್ಮ ಅಭಿಪ್ರಾಯವನ್ನು ಮರು ಇ-ಮೇಲ್‍ನಲ್ಲಿ ನೀಡುವಂತೆ ಆಯೋಗದ ಅಧೀನ ಕಾರ್ಯದರ್ಶಿ ಕೋರಿದ್ದಾರೆ.